[ಪೌರತ್ವ ತಿದ್ದುಪಡಿ ಕಾಯಿದೆ] ಡಿ. 6ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್: ನೋಡಲ್ ವಕೀಲರ ನೇಮಕ

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪರ ವಾದಿಸುತ್ತಿರುವ ವಕೀಲೆ ಪಲ್ಲವಿ ಪ್ರತಾಪ್, ಮತ್ತು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ಕನು ಅಗರ್‌ವಾಲ್ ಅವರನ್ನು ಪೀಠ ನೋಡಲ್ ವಕೀಲರನ್ನಾಗಿ ನೇಮಿಸಿದೆ.
Supreme Court, Citizenship Amendment Act
Supreme Court, Citizenship Amendment Act

ಪೌರತ್ವ ತಿದ್ದುಪಡಿ ಕಾಯಿದೆಯ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಇಬ್ಬರು ವಕೀಲರನ್ನು ನೋಡಲ್ ಸಲಹೆಗಾರರನ್ನಾಗಿ ನೇಮಿಸಿದೆ [ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸೂಕ್ತ ಪೀಠದ ಮುಂದೆ ಮುಂದಿನ ವಿಚಾರಣೆ ನಡೆಸಲು ಅನುವಾಗುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಪ್ರಕರಣವನ್ನು ಮುಂದೂಡಿತು. "ಡಿಸೆಂಬರ್ 6, 2022ಕ್ಕೆ ಸಿಎಎ ಕುರಿತಾದ ಪ್ರಕರಣಗಳನ್ನು ಸೂಕ್ತ ನ್ಯಾಯಾಲಯದ ಮುಂದೆ ಪಟ್ಟಿ ಮಾಡಿ" ಎಂದು ಪೀಠವು ನಿರ್ದೇಶಿಸಿತು.

ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಲು ಅರ್ಜಿ ಸಲ್ಲಿಸಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪರ ವಕೀಲೆ ಪಲ್ಲವಿ ಪ್ರತಾಪ್, ಮತ್ತು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಕನು ಅಗರವಾಲ್ ಅವರನ್ನು ಪೀಠ ನೋಡಲ್‌ ವಕೀಲರನ್ನಾಗಿ ನೇಮಿಸಿತು.

Also Read
ಅಸ್ತಿತ್ವದಲ್ಲಿರುವ ನಾಗರಿಕ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಬೀರದು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್

“ಬಹು ದೃಷ್ಟಿಕೋನಗಳನ್ನು ಒಳಗೊಂಡ ವಿವಿಧ ಮನವಿಗಳಿವೆ ಎಂಬುದನ್ನು ಗಮನಿಸಿದ ಬಳಿಕ ಎರಡು ಅಥವಾ ಮೂರು ಅರ್ಜಿಗಳನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡರೆ ಸಂಪೂರ್ಣ ವ್ಯಾಜ್ಯವನ್ನು ಪರಿಹರಿಸಬಹುದಾಗಿದೆ. ಎಲ್ಲಾ ವಕೀಲರು ಮುಂಚಿತವಾಗಿ ದಾಖಲೆಯನ್ನು ಕ್ರೋಢೀಕರಿಸುವುದು ಅನುಕೂಲಕರ…” ಎಂದು ನ್ಯಾಯಾಲಯ ಹೇಳಿದೆ.

Also Read
ಸಿಎಎ ವಿರೋಧಿ ಭಾಷಣ: ಡಾ. ಕಫೀಲ್ ಖಾನ್‌ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ರದ್ದುಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌

"ಕ್ರೋಢೀಕೃತ ದಾಖಲೆಯನ್ನು ಡಿಜಿಟಲ್ ರೂಪದಲ್ಲಿ ಎಲ್ಲಾ ವಕೀಲರೊಂದಿಗೆ ಹಂಚಿಕೊಳ್ಳಲು ನೋಡಲ್ ವಕೀಲರಿಗೆ ಸಲಹೆ ನೀಡಲಾಗುತ್ತಿದೆ. ಎಲ್ಲಾ ವಕೀಲರು ಮೂರು ಪುಟಗಳನ್ನು ಮೀರದ ಲಿಖಿತ ಸಲ್ಲಿಕೆಗಳನ್ನು ನೀಡಬೇಕು. ನೋಡಲ್ ವಕೀಲರು ಒಂದು ಅಥವಾ ಎರಡು ಬೇರೆ ವಿಷಯಗಳನ್ನು ಭೌಗೋಳಿಕ/ಧಾರ್ಮಿಕ ವರ್ಗೀಕರಣ ಗಮನದಲ್ಲಿಟ್ಟುಕೊಂಡು ಪ್ರಮುಖ ವಿಷಯಗಳಾಗಿ ಗೊತ್ತುಪಡಿಸಬಹುದು" ಎಂದು ಪೀಠ ಸಲಹೆ ನೀಡಿದೆ.

ಡಿಸೆಂಬರ್ 12, 2019ರಂದು ಸಂಸತ್ತಿನಲ್ಲಿ ಅಂಗೀಕೃತವಾದ ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955ರ ಪೌರತ್ವ ಕಾಯಿದೆಯ ಸೆಕ್ಷನ್ 2ಕ್ಕೆ ತಿದ್ದುಪಡಿ ಮಾಡಿದೆ.

Also Read
ಸಿಎಎ ವಿರೋಧಿ ಪ್ರತಿಭಟನೆ ವೇಳೆ ಭಾಷಣ; ಅಸ್ಸಾಮೀ ಹೋರಾಟಗಾರ ಅಖಿಲ್ ಗೊಗೊಯ್ ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು

ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ  ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು "ಅಕ್ರಮ ವಲಸಿಗ" ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳುತ್ತದೆ.  

ಆದರೆ ಸಿಎಎ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ನಿಬಂಧನೆಯಿಂದ ಹೊರಗಿಟ್ಟಿದ್ದು ದೇಶದೆಲ್ಲೆಡೆ ಪ್ರತಿಭಟನೆಗೆ ಕಾರಣವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com