ಲಂಡನ್‌ನಲ್ಲಿ ಅಂಬೇಡ್ಕರ್ ಕಾನೂನು ಶಿಕ್ಷಣ ಪಡೆದ ಸ್ಥಳಕ್ಕೆ ಸಿಜೆಐ ಗವಾಯಿ ಭೇಟಿ

ಭಾರತದ ಕಾನೂನು ಇತಿಹಾಸದ ಸರ್ವಶ್ರೇಷ್ಠರಲ್ಲಿ ಒಬ್ಬರಾದ ಡಾ. ಬಿ ಆರ್ ಅಂಬೇಡ್ಕರ್ ಅವರು 'ಗ್ರೇಸ್ ಇನ್‌'ನಲ್ಲಿ ಕಾನೂನು ಶಿಕ್ಷಣ ಪಡೆದಿದ್ದರು.
CJI Gavai speaking at Gray's Inn
CJI Gavai speaking at Gray's Inn
Published on

ಸಂವಿಧಾನ ಶಿಲ್ಪಿ, ಶ್ರೇಷ್ಠ ಕಾನೂನು ತಜ್ಞ ಡಾ ಬಿ ಆರ್‌ ಅಂಬೇಡ್ಕರ್‌ ಕಾನೂನು ಶಿಕ್ಷಣ ಪಡೆದ ಲಂಡನ್‌ನ ಗ್ರೇಸ್‌ ಇನ್‌ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಈಚೆಗೆ ಭೇಟಿ ನೀಡಿದರು.

ಈ ವೇಳೆ ಅವರು ʼಜೀವಂತ ದಾಖಲೆ: ಭಾರತದ ಸಂವಿಧಾನದ 75 ವರ್ಷಗಳು ಮತ್ತು ಡಾ. ಅಂಬೇಡ್ಕರ್ ಅವರ ಶಾಶ್ವತ ಪ್ರಸ್ತುತತೆʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

Also Read
ಇಂದು ನಾವು ಏನಾಗಿದ್ದೇವೋ ಅದಕ್ಕೆ ಅಂಬೇಡ್ಕರ್‌ ಅವರ ದೂರದೃಷ್ಟಿ ಕಾರಣ: ಸಂವಿಧಾನ ಶಿಲ್ಪಿಗೆ ಸಿಜೆಐ ನಮನ

ಅಂಬೇಡ್ಕರ್ ಅವರು ತಮ್ಮ ಕಾನೂನು ಚಿಂತನೆಗಳನ್ನು ರೂಪಿಸಿಕೊಂಡ ಮತ್ತು ಭಾರತದ ಸಂವಿಧಾನದ ರಚನೆಗೆ ಕೊಡುಗೆ ನೀಡುವ ಬೌದ್ಧಿಕ ಅಡಿಪಾಯವನ್ನು ಅಭಿವೃದ್ಧಿಪಡಿಸಿದ 'ಗ್ರೇಸ್‌ ಇನ್‌'ನಲ್ಲಿ ಇರುವುದು  ಸೌಭಾಗ್ಯ ಎಂದು ಸಿಜೆಐ ಗವಾಯಿ ಅವರು ನುಡಿದರು.

“ಇಂದು ಇಲ್ಲಿ ನಿಂತಿರುವಾಗ ಡಾ. ಅಂಬೇಡ್ಕರ್ ಅವರು ಕಾನೂನು ಕ್ಷೇತ್ರದಲ್ಲಿ ಮಾತ್ರವಲ್ಲದೆ ಭಾರತೀಯ ಪ್ರಜಾಪ್ರಭುತ್ವದ ರಚನೆಗೆ ಸಂಬಂಧಿಸಿದಂತೆ ಉಳಿಸಿಹೋದ ಅದ್ಭುತ ಪರಂಪರೆಯನ್ನು ನೆನಪಿಸಿಕೊಳ್ಳುತ್ತೇನೆ. ಭಾರತದ ಸಂವಿಧಾನ ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವ ಒದಗಿಸುವಂತೆ ನೋಡಿಕೊಳ್ಳುವುದಕ್ಕಾಗಿ ಅವರು ಆಳವಾಗಿ ಶ್ರಮಿಸಿದರು. ಇಂದು ಆ ಎಲ್ಲಕ್ಕೂ ಅವರ ಪಾಲಿಗೆ ಮುನ್ನುಡಿ ಬರೆದ ಈ ಸ್ಥಳದಲ್ಲಿ ಇರುವುದು ನಮ್ಮ ಕಾನೂನು ವ್ಯವಸ್ಥೆ ಮೇಲೆ ಅವರು ಬೀರಿರುವ ನಿರಂತರ ಪ್ರಭಾವದ ಕೊಂಡಿಯ ಅರಿವನ್ನು ಮೂಡಿಸುತ್ತಿದೆ" ಎಂದು ಅವರು ವಿವರಿಸಿದರು.

ಸಮಾಜದ ಅಂಚಿನಲ್ಲಿರುವ ವರ್ಗದಿಂದ ಬಂದು ಸಿಜೆಐ ಆಗಿರುವುದಕ್ಕೆ ತಮಗೆ ಹೆಮ್ಮೆ ಇದೆ ಎಂದ ಅವರು ಅಂಬೇಡ್ಕರ್‌ ಅವರ ದೃಷ್ಟಿಕೋನವೇ ತಮ್ಮ ಉದಯಕ್ಕೆ ಕಾರಣ ಎಂದರು. ಅವರು ದಲಿತ ಸಮುದಾಯದಿಂದ ಬಂದ ಎರಡನೇ ಸಿಜೆಐ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

"ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜದ ಸಾಕಾರತೆ ಹೇಳುವ ಡಾ. ಅಂಬೇಡ್ಕರ್ ಅವರ ದೃಷ್ಟಿಕೋನವು, ಸಮಾಜದ ಅಂಚಿನಲ್ಲಿರುವ ಸಮುದಾಯಗಳ ವ್ಯಕ್ತಿಗಳು ಜೀವನದ ಮುಖ್ಯವಾಹಿನಿಗೆ ಬರದಂತೆ ತಡೆಯುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ದಿಡ್ಡಿ ಬಾಗಿಲು ತೆರೆಯಿತು" ಎಂದು ಅವರು ಹೇಳಿದರು.

ಸಿಜೆಐ ಭೇಟಿ ಹಿನ್ನೆಲೆಯಲ್ಲಿ ಗ್ರೇಯ್ಸ್‌ ಇನ್‌ನಲ್ಲಿ ಡಾ. ಅಂಬೇಡ್ಕರ್‌ ಅವರ ಭಾವಚಿತ್ರಗಳು ಮತ್ತು ವಸ್ತು ಪ್ರದರ್ಶನ ಏರ್ಪಡಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಲೇಡಿ ಜಸ್ಟೀಸ್ ಜೆರಾಲ್ಡಿನ್ ಆಂಡ್ರ್ಯೂಸ್ (ಮಾಸ್ಟರ್ ಟ್ರೆಷರರ್), ಹೆಸ್ವಾಲ್‌ನ ಲೇಡಿ ಆರ್ಡೆನ್ (ಇಂಗ್ಲೆಂಡ್‌ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ), ಭಾರತದ ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿ ವಿಕ್ರಮ್ ನಾಥ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಾರತೀಯ ಹೈಕಮಿಷನರ್ ವಿಕ್ರಮ್ ಕುಮಾರ್ ದೊರೈಸ್ವಾಮಿ ಹಾಗೂ ಹಿರಿಯ ವಕೀಲ ಗೌರವ್ ಬ್ಯಾನರ್ಜಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com