ಶೂ ಎಸೆತದಂತಹ ಘಟನೆಗಳಿಗೆ ಕಡಿವಾಣ: ಮಾರ್ಗಸೂಚಿ ರೂಪಿಸಲು ಸುಪ್ರೀಂ ಇಂಗಿತ, ವಕೀಲನ ವಿರುದ್ಧ ಸದ್ಯಕ್ಕಿಲ್ಲ ಕ್ರಮ

ತಾನು ಪ್ರಕರಣ ಮುಕ್ತಾಯಗೊಳಿಸುತ್ತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ, ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ನೋಟಿಸ್ ನೀಡಲು ನಿರಾಕರಿಸಿದೆ.
CJI BR Gavai and advocate Rakesh Kishore
CJI BR Gavai and advocate Rakesh Kishore
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನ್ಯಾಯಾಲಯದಲ್ಲಿ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠಕ್ಕೆ ಒತ್ತಾಯಿಸಲಾಯಿತು. ಆದರೆ ಪ್ರಕರಣ ಮುಕ್ತಾಯಗೊಳಿಸುತ್ತಿಲ್ಲ. ಇಂತಹ ಘಟನೆಗಳನ್ನು ತಡೆಯುವಂತಹ ಕ್ರಮಗಳನ್ನು ಸೂಚಿಸಿ. ಒಂದು ವಾರದ ಬಳಿಕ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

Also Read
ಶೂ ಎಸೆದ ಘಟನೆ: ರಾಕೇಶ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಎಜಿ ಸಮ್ಮತಿ; ಸಮಯ ವ್ಯರ್ಥವೇಕೆ ಎಂದ ಸುಪ್ರೀಂ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ರಿಟ್‌ ಅರ್ಜಿಗಳನ್ನು ಕೂಡ ಅದು ವಜಾಗೊಳಿಸಿತು. ಆ ಅರ್ಜಿಗಳನ್ನು ನಿರ್ವಹಿಸಲಾಗದ ಕಾರಣ ವಜಾಗೊಳಿಸಲಾಗುತ್ತಿದೆ. ಎಲ್ಲಾ ವಿಚಾರಗಳನ್ನು ಸುಪ್ರೀಂ ಕೋರ್ಟ್‌ ವಕೀಲರ ಸಂಘ ತನ್ನ ಅರ್ಜಿಯಲ್ಲಿ ಸಮಗ್ರವಾಗಿ ಪ್ರಸ್ತಾಪಿಸಿದೆ ಎಂದು ನ್ಯಾಯಾಲಯ ಹೇಳಿತು.

ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​(ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ವಾದ ಮಂಡಿಸಿ ವಕೀಲನ ಧೋರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆತನನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಆದರೂ ಆತನ ನಡೆಯಲ್ಲಿ ಬದಲಾವಣೆಯಾಗಲಿಲ್ಲ. ಹಾಗೆ ಮಾಡುವಂತೆ ದೇವರೇ ಹೇಳಿದ್ದಾನೆ ಎಂದ. ಅಂತಹ ಕೃತ್ಯ ಮತ್ತೆ ಎಸಗುವುದಾಗಿ ಹೇಳಿದ್ದಾನೆ. ಇದನ್ನು ವೈಭವೀಕರಿಸಲಾಗುತ್ತಿದ್ದು ಅದಕ್ಕೆ ಆಸ್ಪದ ನೀಡಬಾರದು ಎಂದರು.

ಆಗ ನ್ಯಾ. ಕಾಂತ್‌ ಅವರು ಈ ಕೃತ್ಯ ಗಂಭೀರ ಕ್ರಿಮಿನಲ್‌ ನ್ಯಾಯಾಂಗ ನಿಂದನೆಯಾಗಿದ್ದು ನಂತರದ ಆತನ ವರ್ತನೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಸಿಜೆಐ ಖುದ್ದು ಕ್ಷಮಿಸಿದ ನಂತರವೂ ಹೀಗೆ ನಡೆದುಕೊಳ್ಳಲಾಗಿದೆ ಎಂದರು.

ಆಗ ಸಿಂಗ್‌, “ಅದು ಅವರ (ಸಿಜೆಐ) ವೈಯಕ್ತಿಕ ನಿಲುವು. ಆದರೆ ಇದು ಸಂಸ್ಥೆಯ ಗೌರವದ ವಿಷಯ. ನಾವು ಈ ಘಟನೆಯನ್ನು ಹಾಗೆಯೇ ಬಿಡಲಾಗದು. ಜನರು ಇದನ್ನು ಹಾಸ್ಯವಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವಂತಹ ವಿಚಾರ. ದಯವಿಟ್ಟು ನೋಟಿಸ್ ನೀಡಿ. ವಕೀಲ ಪಶ್ಚಾತ್ತಾಪ ವ್ಯಕ್ತಪಡಿಸಿದರೆ ಸರಿ; ಇಲ್ಲದಿದ್ದರೆ ಆತನನ್ನು ಜೈಲಿಗೆ ಕಳುಹಿಸಬೇಕು” ಎಂದರು.

Also Read
ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ ಪ್ರಕರಣ ಮರೆಯುವಂಥದ್ದಲ್ಲ: ನ್ಯಾ. ಭುಯಾನ್

"ಆ ವ್ಯಕ್ತಿಗೆ ಏಕೆ ಪ್ರಾಮುಖ್ಯತೆ ನೀಡಬೇಕು?" ಎಂದು ನ್ಯಾಯಮೂರ್ತಿ ಕಾಂತ್  ಪ್ರಶ್ನಿಸಿದಾಗ ಸಮಾಜದಲ್ಲಿ ಇದೊಂದು ತಮಾಷೆಯ ಘಟನೆಯಾಗಿದೆ ಎಂದರು.

ಈ ಹಂತದಲ್ಲಿ, ನ್ಯಾಯಮೂರ್ತಿ ಬಾಗ್ಚಿ, ನ್ಯಾಯಾಲಯಕ್ಕೆ ನೇರವಾಗಿ ಮಾಡಿದ ಅಪಮಾನ. ಉದಾರ ಮನೋಭಾವದಿಂದ ಸಿಜೆಐ ಘಟನೆಯನ್ನು ನಿರ್ಲಕ್ಷಿಸಿದ್ದಾರೆ. ಹೀಗಿರುವಾಗ ನ್ಯಾಯಾಂಗ ನಿಂದನೆಗೆ ಅನುಮತಿಸುವುದು ಎಜಿ ಅವರ ವ್ಯಾಪ್ತಿಗೆ ಬರುತ್ತದೆಯೇ? ಸೆಕ್ಷನ್‌ 15ಅನ್ನು ಒಮ್ಮೆ ಗಮನಿಸಿ ಎಂದರು. ಅಲ್ಲದೆ, "ವಿರೋಧದ ಪ್ರಕ್ರಿಯೆ"ಯನ್ನು (ನ್ಯಾಯಾಂಗ ನಿಂದನೆ) ಅನುಸರಿಸದೆ ಘಟನೆ ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮಗಳನ್ನು ಸೂಚಿಸಲು ಪೀಠ ಹೇಳಿತು.

ಈ ಮಾತಿಗೆ ಸಹಮತ ವ್ಯಕ್ತಪಡಿಸಿದ ನ್ಯಾ. ಸೂರ್ಯ ಕಾಂತ್‌ ಕೆಲ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದರು.

ನ್ಯಾಯಪೀಠದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಎಸ್‌ಜಿ ತುಷಾರ್‌ ಮೆಹ್ತಾ, ನೋಟಿಸ್‌ ನೀಡುವುದು ಆ ವ್ಯಕ್ತಿಯ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಸ್ತುತತೆಯನ್ನು ಹೆಚ್ಚಿಸಬಹುದು. ಆತ ತನ್ನನ್ನು ತಾನು ಓರ್ವ ಸಂತ್ರಸ್ತ ಎಂದು ಬಿಂಬಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

Kannada Bar & Bench
kannada.barandbench.com