ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ ಪ್ರಕರಣ ಮರೆಯುವಂಥದ್ದಲ್ಲ: ನ್ಯಾ. ಭುಯಾನ್

ಘಟನೆಯನ್ನು ಅಲ್ಲಿಗೇ ಬಿಟ್ಟಿರುವೆ ಎಂದು ಸಿಜೆಐ ಗವಾಯಿ ಅವರು ಹೇಳಿದರಾದರೂ ಇದು ನ್ಯಾಯಾಂಗಕ್ಕೆ ಮಾಡಿದ ಅವಮಾನ ಎಂದು ನ್ಯಾ. ಭುಯಾನ್ ಅಭಿಪ್ರಾಯಪಟ್ಟರು.
Justice Ujjal Bhuyan
Justice Ujjal Bhuyan
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಘಟನೆ ನ್ಯಾಯಾಂಗಕ್ಕೆ ಮಾಡಿದ ಅಪಮಾನವಾಗಿದ್ದು ಎಂದಿಗೂ ಮರೆಯುವಂಥದ್ದಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಗುರುವಾರ ಖಂಡಿಸಿದ್ದಾರೆ .  

ಇಂದು ನಡೆದ ವಿಚಾರಣೆಯೊಂದರ ವೇಳೆ, ಅಕ್ಟೋಬರ್ 6 ರಂದು ವಕೀಲ ರಾಕೇಶ್ ಕಿಶೋರ್  ಪೀಠದ ಕಡೆಗೆ ಶೂ ಎಸೆಯಲು ಪ್ರಯತ್ನಿಸಿದಾಗ ತಮ್ಮ ಪಕ್ಕದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ವಿನೋದ್ ಚಂದ್ರನ್ ಕೂಡ ಅಷ್ಟೇ ಆಘಾತಕ್ಕೊಳಗಾದರು ಎಂದು ಸಿಜೆಐ ಗವಾಯಿ ನೆನೆದರು.

Also Read
ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್‌ ಕಿಶೋರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಇದು ದುಃಖದಾಯಕ ಘಟನೆ ಎಂದು ಪೀಠವನ್ನುದ್ದೇಶಿಸಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಹೇಳಿದರು. ನಾವದನ್ನು ಮರೆತಿದ್ದೇವೆ ಎಂದು ಸಿಜೆಐ ಗವಾಯಿ ಅವರು ಲಘು ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಆದರೆ ಇದು ಮರೆಯುವಂತಹ ಘಟನೆಯಲ್ಲ ಎಂದು ನ್ಯಾ. ಭುಯಾನ್‌ ನುಡಿದರು.  

 "ಇದರ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ, ಘಟನೆಯನ್ನು ಎಂದಿಗೂ ಮರೆಯಬಾರದು... ಅವರು ಸಿಜೆಐ. ಇದು ತಮಾಷೆಯ ವಿಷಯವಲ್ಲ. ಆತ (ದಾಳಿಗೆ ಯತ್ನಿಸಿದ ವಕೀಲ) ನಂತರ ಕ್ಷಮೆಯಾಚಿಸಲಿಲ್ಲ. ಇದು ಸಂಸ್ಥೆಗೆ ಮಾಡಿದ ಅವಮಾನ" ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.

ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಭುಯಾನ್ ಅವರ ಅಭಿಪ್ರಾಯಕ್ಕೆ ತಲೆದೂಗಿದರು. " (ಇದನ್ನು) ಕ್ಷಮಿಸಲಾಗದು. ಕ್ಷಮಿಸಿರುವುದು ನ್ಯಾಯಾಲಯದ ಘನತೆ ಮತ್ತು ಔದಾರ್ಯವನ್ನು ಹೇಳುತ್ತಾದರೂ ನಡೆದಿರುವುದನ್ನು ಕ್ಷಮಿಸಲಾಗದು" ಎಂದರು.

Also Read
ಶೂ ಎಸೆಯಲು ಯತ್ನಿಸಿದ ಪ್ರಕರಣ: ವಕೀಲನ ವಿರುದ್ಧ ಕ್ರಮಕ್ಕೆ ಸುಪ್ರೀಂ ನಕಾರ; ರಾಕೇಶ್ ಬಿಡುಗಡೆ

ವಿಚಾರಣೆಯ ಒಂದು ಹಂತದಲ್ಲಿ ನ್ಯಾ. ಗವಾಯಿ ಅವರು ಸಾಲುಗಳನ್ನು ಸಂದರ್ಭದಾಚೆಗೆ ಅರ್ಥ ಮಾಡಿಕೊಳ್ಳುವ ವಕೀಲರಿದ್ದಾರೆ ಎಂದು ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.

ಕಳೆದ ಸೋಮವಾರ ರಾಕೇಶ್‌ ಕಿಶೋರ್‌ ನ್ಯಾಯಾಲಯ ಕಲಾಪದಲ್ಲಿ ಸಿಜೆಐ ತೊಡಗಿದ್ದ ವೇಳೆ ಅವರೆಡೆಗೆ ತನ್ನ ಶೂ ಎಸೆಯಲು ಯತ್ನಿಸಿದ್ದ. ಆದರೆ, ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರಗೆ ಕರೆದೊಯ್ದಿದ್ದರು. ಹಾಗೆ ಕರೆದೊಯ್ಯುವ ವೇಳೆ ಆತ "ಸನಾತನ್‌ ಕಾ ಅಪಮಾನ್‌ ನಹೀ ಸಹೇಂಗೆ" (ಸನಾತನಕ್ಕೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದ. ಆತನ ಕೃತ್ಯಕ್ಕೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.

Kannada Bar & Bench
kannada.barandbench.com