ಶೂ ಎಸೆದ ಘಟನೆ: ರಾಕೇಶ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಎಜಿ ಸಮ್ಮತಿ; ಸಮಯ ವ್ಯರ್ಥವೇಕೆ ಎಂದ ಸುಪ್ರೀಂ

ಎಸ್‌ಸಿಬಿಎ ಅಧ್ಯಕ್ಷರು ತಪ್ಪಿತಸ್ಥನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದರಾದರೂ ಘಟನೆಯನ್ನು ಮತ್ತೆ ಮತ್ತೆ ಮುನ್ನಲೆಗೆ ತರುತ್ತಾ ದ್ವೇಷಕಾರ್ಯವನ್ನು ಉತ್ತೇಜಿಸುವ ಒಲವು ತನಗಿಲ್ಲ ಎಂಬುದಾಗಿ ನ್ಯಾಯಾಲಯ ನುಡಿಯಿತು.
Supreme Court of India
Supreme Court of India
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಭಾರತದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಅನುಮತಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಗುರುವಾರ ನೀಡಿದರು.

ವಿವಾದಿತ ಘಟನೆಯು ಅಕ್ಟೋಬರ್‌ 6ರಂದು ನಡೆದಿತ್ತು. ಅಂದು ವಿಚಾರಣೆ ವೇಳೆ ವಕೀಲ ರಾಕೇಶ್‌ ಕಿಶೋರ್‌ ಸಿಜೆಐ ಕಡೆಗೆ ಶೂ ತೂರುವ ವಿಫಲ ಯತ್ನ ನಡೆಸಿದ್ದ ಘಟನೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಿಗೇ, ರಾಕೇಶ್‌ ಕಿಶೋರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಮುಂದಾಗಲು ಅನುಮತಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಎಜಿ ಅವರಿಗೆ ಪತ್ರ ಬರೆದಿತ್ತು.

ರಾಕೇಶ್‌ ಕಿಶೋರ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ಶುಕ್ರವಾರ ಆಲಿಸುವಂತೆ ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರೆದುರು ಪ್ರಸ್ತಾಪಿಸಿದರು. ಈ ವೇಳೆ ಪೀಠವು ಘಟನೆಯನ್ನು ಸಿಜೆಐ ಅವರೇ ಮರೆತಿರುವಾಗ ಅದನ್ನು ಚರ್ಚಿಸಿ ಸಮಯ ವ್ಯರ್ಥ ಮಾಡುವ ಬದಲು ನಿತ್ಯದ ಪ್ರಕರಣ ಆಲಿಸುವ ಕಾಯಕದತ್ತ ತಾನು ಗಮನಹರಿಸುವುದು ಒಳಿತು ಎಂದು ಸಲಹೆ ನೀಡಿತು.

Also Read
ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ ಪ್ರಕರಣ ಮರೆಯುವಂಥದ್ದಲ್ಲ: ನ್ಯಾ. ಭುಯಾನ್

"ಶೂ ಎಸೆದ ಘಟನೆಯನ್ನು ಗಣನೆಗೆ ತೆಗೆದುಕೊಳ್ಳದೇ ಇರಲಾಗದು. ಶೂ ಎಸೆದಾತನಿಗೆ ಪಶ್ಚಾತ್ತಾಪವೇ ಇಲ್ಲ. ನಾನು ಅಟಾರ್ನಿ ಜನರಲ್ ಅವರ ಒಪ್ಪಿಗೆ ಪಡೆದಿದ್ದು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ನಾಳೆ ಆಲಿಸಬಹುದು, ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲವೆದ್ದಿದೆ" ಎಂದು ಸಿಂಗ್‌ ವಾದಿಸಿದರು.

ಇದಕ್ಕೆ ತಲೆದೂಗಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ "ಘಟನೆ ಗಂಭೀರವಾದದು ಎಂದರು. ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಲಾಗಿದೆ ಇದು ನ್ಯಾಯಾಂಗದ ಗೌರವದ ವಿಚಾರ ಕೆಲ ಕ್ರಮ ಕೈಗೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದರು.

ಆದರೆ ಘಟನೆಯ ಕುರಿತು ವಿಚಾರಣೆ ನಡೆಸುವುದು ವಿವೇಕಯುತವೇ ಎಂದು ಪೀಠ ಪ್ರಶ್ನಿಸಿತು. ಸಿಜೆಐ ಔದಾರ್ಯ ತೋರಿದ್ದಾರೆ. ಇದು ಸಂಸ್ಥೆಯ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂಬುದನ್ನು ಇದು ಹೇಳುತ್ತದೆ ಎಂದು ನ್ಯಾ. ಕಾಂತ್‌ ತಿಳಿಸಿದರು.

ಆದರೂ ಪಟ್ಟುಬಿಡದ ಎಸ್‌ಜಿ ಮೆಹ್ತಾ ಅವರು ಸಾಮಾಜಿಕ ಮಾಧ್ಯಮವನ್ನು ಮನಬಂದಂತೆ ಬಳಸಲಾಗುತ್ತಿದೆ. ಕೆಲವರು ಇದರಿಂದ ಹೆಸರು ಮಾಡುತ್ತಿದ್ದಾರೆ. ಕೆಲವರು ಶೂ ಎಸೆದ ವಕೀಲನ ಧೈರ್ಯ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸಂಸ್ಥೆಯ ಘನತೆಗೆ ಸಂಬಂಧಿಸಿದ ವಿಚಾರ.ಇದನ್ನು ಹೀಗೆಯೇ ಬಿಡಬಾರದು ಎಂದರು.

ಆದರೆ ಘಟನೆಯನ್ನು ಮತ್ತೆ ಮತ್ತೆ ಚರ್ಚಿಸಿದರೆ ಸಾ. ಮಾಧ್ಯಮಗಳ ಸಂಚಲನಕ್ಕೆ ಕಾರಣವಾಗುತ್ತದೆ ಜೊತೆಗೆ ನ್ಯಾಯಾಲಯದ ಸಮಯವೂ ವ್ಯರ್ಥ ಎಂದು ಪೀಠ ನುಡಿಯಿತು

"ನಾವು (ಸುಪ್ರೀಂ ಕೋರ್ಟ್‌) ಮುಕ್ತಾಯಗೊಳಿಸಿರುವ ವಿಷಯವನ್ನು ಕೆದಕುವುದು ಅಗತ್ಯವಿದೆಯೇ ಎನ್ನುವುದನ್ನು ನೀವು ಮೊದಲಿಗೆ ಆಲೋಚಿಸಬೇಕು. ಅದರಲ್ಲಿಯೂ ವಿಶೇಷವಾಗಿ ಅಧಿಕ ಕಾರ್ಯದೊತ್ತಡ ಎದುರಿಸುತ್ತಿರುವ ನಮ್ಮಲ್ಲಿ ಇದು ಸಾಧುವೇ? ಇಂತಹದರ ಮೇಲೆ ಐದು ನಿಮಿಷ ವ್ಯರ್ಥ ಮಾಡುವುದರೊಳಗೆ ನಾವು ಅದೆಷ್ಟೋ ವ್ಯಕ್ತಿಗಳು ಜೈಲಿನಲ್ಲಿರಬೇಕೇ ಅಥವಾ ಜಾಮೀನಿನ ಮೇಲೆ ಹೊರಗೆ ಬರಬೇಕೇ ಎನ್ನುವ ಬಗ್ಗೆ ನಿರ್ಧರಿಸಬಹುದಿತ್ತಲವೇ" ಎಂದು ನ್ಯಾ. ಬಾಗ್ಚಿ ಅಭಿಪ್ರಾಯಪಟ್ಟರು.

ಮುಂದುವರೆದು, "ಸಾಮಾಜಿಕ ಮಾಧ್ಯಮದ ಅಲ್ಗಾರಿಧಮ್‌ ಕ್ರೋಧ, ನಕಾರಾತ್ಮಕತೆ ಮತ್ತು ರೋಚಕತೆಗೆ ಕುಮ್ಮಕ್ಕು ನೀಡುತ್ತದೆ. ಘಟನೆಯ ಬಗ್ಗೆ ಹೆಚ್ಚು ಮಾತನಾಡಿದರೆ ಅದಕ್ಕೆ ಹೆಚ್ಚು ಪ್ರಚಾರ ದೊರೆಯುತ್ತದೆ" ಎಂದು ನ್ಯಾ. ಬಾಗ್ಚಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಖಜುರಾಹೋದಲ್ಲಿನ ಭಗ್ನಗೊಂಡ ವಿಷ್ಣುವಿನ ಮೂರ್ತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪಿಐಎಲ್‌ ವೇಳೆ ಸಿಜೆಐ ಅವರು ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆ ಇಡೀ ಘಟನೆಗೆ ಕಾರಣ ಎನ್ನಲಾಗುತ್ತಿರುವ ಮಧ್ಯೆಯೇ ಶೂ ಎಸೆಯಲು ಮುಂದಾದ ಘಟನೆ ಕೂಡ ವಿಷ್ಣುವಿಗೆ ಮಾಡಿದ ಅಪಮಾನ ಎಂದು ವಿಕಾಸ್‌ ಸಿಂಗ್‌ ನುಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾ. ಕಾಂತ್‌ " ನಮ್ಮ ಧರ್ಮ ಎಂದಿಗೂ ಹಿಂಸೆಯನ್ನು ಉತ್ತೇಜಿಸಿಲ್ಲ. ಇದರ ಬಗ್ಗೆ ಯೋಚಿಸಿ.. ಸಾಮಾಜಿಕ ಮಾಧ್ಯಮದಲ್ಲಿ ಎಲ್ಲವೂ ಮಾರಾಟವಾಗುವ ವಸ್ತುವಾಗಿವೆ" ಎಂದರು.

ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ನ್ಯಾಯಾಲಯ ಸಮಗ್ರ ಆದೇಶವನ್ನು ಹೊರಡಿಸಬಹುದು ಎಂದು ಬಳಿಕ ಸಿಂಗ್‌ ಸೂಚಿಸಿದರು.

Also Read
ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್‌ ಕಿಶೋರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಆದರೆ, ಹಾಗೆ ಸಮಗ್ರ ಆದೇಶ ನೀಡುವುದು ಹೆಚ್ಚಿನ ಚರ್ಚೆ ಹುಟ್ಟುಹಾಕುತ್ತದೆ ಎಂದು ನ್ಯಾಯಮೂರ್ತಿ ಬಾಗ್ಚಿ ಗಮನಸೆಳೆದರು. ನ್ಯಾಯಾಧೀಶರು ಅಂತಹ ದಾಳಿಗಳನ್ನು ಸಂಯಮದಿಂದ ನಿರ್ವಹಿಸುತ್ತಾರೆಯೇ ಎಂಬುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

" ಶೂ ಎಸೆತ ಘಟನೆಯನ್ನು ವೈಭವೀಕರಿಸುವುದು ಕೊನೆಗೊಳ್ಳಬೇಕು" ಎಂದು ಸಿಂಗ್ ಪ್ರತಿಪಾದಿಸಿದರು. "ನಾವು ವಿಚಾರಣೆ ಕೈಗೆತ್ತಿಕೊಂಡರೆ, ವಾರಗಳವರೆಗೆ ಅದರ ಬಗ್ಗೆ ಮತ್ತೆ ಮಾತನಾಡಲಾಗುತ್ತದೆ" ಎಂದು ನ್ಯಾ. ಕಾಂತ್ ಕಿವಿಮಾತು ಹೇಳಿದರು. ನಾಳೆಯೇ ಪ್ರಕರಣದ ವಿಚಾರಣೆ ನಡೆಸಬೇಕು ಎಂಬ ಬೇಡಿಕೆಯನ್ನು ಕಡೆಗೂ ಒಪ್ಪದ ನ್ಯಾಯಾಲಯ ಬೇರೆ ಪ್ರಕರಣ ಆಲಿಸುವುದರೆಡೆಗೆ ಗಮನ ಹರಿಸಿತು.  

Kannada Bar & Bench
kannada.barandbench.com