
ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವು ಕ್ರಮ ಕೈಗೊಳ್ಳುವುದರ ಜೊತೆಗೆ ಋತುಸ್ರಾವಕ್ಕೆ ಒಳಗಾಗುವ ವಿದ್ಯಾರ್ಥಿನಿಯರಿಗಾಗಿ ಮುಟ್ಟಿನ ರಜೆ ಜಾರಿಗೊಳಿಸುವುದಾಗಿ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ (ಸಿಎನ್‌ಎಲ್‌ಯು) ಘೋಷಿಸಿದೆ.
ಇದರೊಂದಿಗೆ ಋತುಸ್ರಾವಕ್ಕೆ ಒಳಗಾಗುವ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿರುವ ಜಬಲ್‌ಪುರ, ಹೈದರಾಬಾದ್, ಅಸ್ಸಾಂ, ಭೋಪಾಲ್, ಔರಂಗಾಬಾದ್, ಮುಂಬೈ, ರಾಯ್‌ಪುರ ಹಾಗೂ ವಿಶಾಖಪಟ್ಟಣಂ ರಾಷ್ಟ್ರೀಯ ಕಾನೂನು ವಿವಿಗಳ ಸಾಲಿಗೆ ಸಿಎನ್‌ಎಲ್‌ಯು ಸೇರಿದೆ.
ಡಿಸೆಂಬರ್ 17 ರಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಭಾಗವಹಿಸಿದವರಲ್ಲಿ ಬಿಹಾರದ ಅಡ್ವೊಕೇಟ್ ಜನರಲ್ ಪಿ ಕೆ ಸಾಹಿ, ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಬೈದ್ಯನಾಥ ಯಾದವ್, ರಾಜ್ಯ ಕಾನೂನು ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್, ಜಬಲ್‌ಪುರದ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. (ಡಾ) ಮನೋಜ್ ಕುಮಾರ್ ಸಿನ್ಹಾ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮಾಜಿ ಡೀನ್, ಪ್ರೊ. (ಡಾ) ಅಲಿ ಮೆಹದಿ ಹಾಗೂ ಬಿಹಾರ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ರಮಾಕಾಂತ್ ಶರ್ಮಾ ಸೇರಿದ್ದಾರೆ.
ಇದಲ್ಲದೆ, ವಿದ್ಯಾರ್ಥಿಗಳು ತಮ್ಮದೇ ವೇಗದಲ್ಲಿ ಕೋರ್ಸ್ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿರುವುದು ಸಭೆಯಲ್ಲಿ ಕೈಗೊಂಡ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ.
ಈ ಬೆಳವಣಿಗೆಯನ್ನು ಸ್ವಾಗತಿಸಿದ ಸಿಎನ್‌ಎಲ್‌ಯುನ ಉಪಕುಲಪತಿ ಪ್ರೊ.ಫೈಜಾನ್ ಮುಸ್ತಫಾ ಅವರು ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾನಿಲಯ ಜೀವನವನ್ನು ಆನಂದಿಸಲು ಬಯಸುತ್ತಾರೆ ಎಂದು ಹೇಳಿದರು. ಹೆಚ್ಚು ಹೊರೆಯಾದ ಪಠ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಇತಿಶ್ರೀ ಹಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಸಿಎನ್‌ಎಲ್‌ಯು ನಲ್ಲಿ ವಿದ್ಯಾರ್ಥಿಗಳಿಗೆ ಅಂತಹ ಶೈಕ್ಷಣಿಕ ಒತ್ತಡ ಅಗತ್ಯವಿಲ್ಲ ಎಂದು ಹೇಳಿದರು.
ಪ್ರತಿ ವರ್ಷ ಅಗತ್ಯಕ್ಕಿಂತ ಹೆಚ್ಚಿನ ಕೋರ್ಸ್‌ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಕೂಡ ಅನುಮತಿಸಲಾಗಿದೆ.
ಇದಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೋರೆನ್ಸಿಕ್ಸ್ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಎಕ್ಸಿಕ್ಯೂಟಿವ್ ಕೌನ್ಸಿಲ್ ಹೊಸ ಎಲ್‌ಎಲ್‌ಎಂ ನಿಯಮಾವಳಿಗಳನ್ನು ಅನುಮೋದಿಸಿದ್ದು ಈಗ ಶೇ 50ರಷ್ಟು ಹೆಚ್ಚಿನ ಸಂಶೋಧನಾ ಘಟಕಗಳು ಲಭ್ಯವಿವೆ. ಅಧ್ಯಾಪಕರ ನೇಮಕಾತಿ ವಿಚಾರದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ವಿದೇಶಿ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳ ನೇಮಕಾತಿಗೆ ಆದ್ಯತೆ ನೀಡುವುದಾಗಿ ವಿವಿ ಘೋಷಿಸಿದೆ.