ಕೊಲಿಜಿಯಂ ಪರಿಪೂರ್ಣವಲ್ಲದಿದ್ದರೂ ನ್ಯಾಯಮೂರ್ತಿಗಳ ಸ್ವಾತಂತ್ರ್ಯ ರಕ್ಷಿಸುತ್ತಿದೆ: ನ್ಯಾ. ಸೂರ್ಯ ಕಾಂತ್

ನ್ಯಾಯಾಲಯಗಳನ್ನು ಸರ್ವಶಕ್ತ ಮಧ್ಯಸ್ಥಗಾರರನ್ನಾಗಿ ನೋಡಬಾರದು, ಬದಲಾಗಿ ಸಾಂವಿಧಾನಿಕ ಮೌಲ್ಯಗಳನ್ನು ಆಧರಿಸಿದ ಪ್ರಜಾಪ್ರಭುತ್ವ ಯಾನದ ಸಹಪಯಣಿಗನನ್ನಾಗಿ ಪರಿಗಣಿಸಬೇಕು ಎಂದು ಅವರು ನುಡಿದರು.
Justice Surya Kant
Justice Surya Kant
Published on

ನ್ಯಾಯಾಂಗ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಕೊಲಿಜಿಯಂ ವ್ಯವಸ್ಥೆಯ ಪಾತ್ರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ  ಹೆಚ್ಚಿಸಲು ಸುಧಾರಣೆ ಕೈಗೊಳ್ಳಬೇಕು ಎಂದು ಅಭಿಪ್ರಾಯ ನೀಡಿದ್ದಾರೆ.

ಅಮೆರಿಕದ ಸಿಯಾಟಲ್‌ ವಿಶ್ವವಿದ್ಯಾಲಯದ ರೌಂಡ್‌ಗ್ಲಾಸ್‌ ಇಂಡಿಯಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಕೊಲಿಜಿಯಂನ ಅಪರಿಪೂರ್ಣತೆಯ ಹೊರತಾಗಿಯೂ ಅದು ನಿರ್ಣಾಯಕ ಸಾಂಸ್ಥಿಕ ರಕ್ಷಣೆಯಾಗಿ ಕೆಲಸ ಮಾಡುತ್ತಿದೆ ಎಂದರು.

Also Read
ನಾಲ್ಸಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್

ಉನ್ನತ ನ್ಯಾಯಾಂಗದಲ್ಲಿ ನಡೆಯುತ್ತಿರುವ ಪ್ರಸ್ತುತ ನೇಮಕಾತಿ ಕಾರ್ಯವಿಧಾನ ಕುರಿತಂತೆ ಕೇಳಿಬರುತ್ತಿರುವ ನಿರಂತರ ಟೀಕೆಗಳನ್ನು ಅವರು ಒಪ್ಪಿಕೊಂಡರಾದರೂ ಕಾರ್ಯಾಂಗದ ಹಸ್ತಕ್ಷೇಪ ತಡೆಯಲು ಕೊಲಿಜಿಯಂ ಅತ್ಯಗತ್ಯ ಎಂದರು,

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಪ್ರಯತ್ನಗಳು ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವ ಬದ್ಧತೆಯನ್ನು ತೋರುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದರು. ನ್ಯಾಯಾಂಗ ಸ್ವಾಯತ್ತತೆಯ ನಿರಂತರ ಪ್ರತಿಪಾದನೆ, ಕೊಡುಕೊಳ್ಳುವಿಕೆ ಹಾಗೂ ಅಧಿಕಾರ ಚಲಾವಣೆಯು ಪ್ರಜಾಸತ್ತಾತ್ಮಕ ಸ್ವಯಂ ಸಂಯಮದಡಿ ನಡೆಯಬೇಕು ಎಂದು ಅವರು ಹೇಳಿದರು.

ಭಾರತ ಸುಪ್ರೀಂ ಕೋರ್ಟ್‌ನ ಭಾವಿ ಮುಖ್ಯ ನ್ಯಾಯಮೂರ್ತಿಯಾಗಲಿರುವ ಸೂರ್ಯ ಕಾಂತ್‌ ಅವರು ನಮ್ರತೆಯಿಂದ ಕೆಲಸ ಮಾಡಿದಾಗ ನ್ಯಾಯಾಂಗದ ವಿಶ್ವಾಸಾರ್ಹತೆ ಹೆಚ್ಚು ಬಾಳಿಕೆ ಬರುತ್ತದೆ ಎಂದರು.

ನ್ಯಾಯಾಲಯಗಳನ್ನು ಸರ್ವಶಕ್ತ ಮಧ್ಯಸ್ಥಗಾರರನ್ನಾಗಿ ನೋಡಬಾರದು, ಬದಲಾಗಿ ಸಾಂವಿಧಾನಿಕ ಮೌಲ್ಯಗಳನ್ನು ಆಧರಿಸಿದ ಪ್ರಜಾಪ್ರಭುತ್ವ ಯಾನದ ಸಹಪಯಣಿಗನನ್ನಾಗಿ ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದಲ್ಲದೆ ಅಮೆರಿಕದ ಒಲಿಂಪಿಯಾದಲ್ಲಿರುವ ವಾಷಿಂಗ್ಟನ್‌ ಸುಪ್ರೀಂ ಕೋರ್ಟ್‌ನಲ್ಲಿ ಹಾಗೂ ಮೈಕ್ರೋಸಾಫ್ಟ್‌ ಕಂಪೆನಿಯ ಪ್ರಧಾನ ಕಚೇರಿ ಇರುವ ರೆಡ್‌ಮಾಂಡ್‌ನಲ್ಲಿ ಅವರು ಭಾಷಣ ಮಾಡಿದರು.

Also Read
ಮಧ್ಯಸ್ಥಿಕೆ ಜನಸಾಮಾನ್ಯರನ್ನು ತಲುಪುವಂತಾಗಲು ಅದು ಸ್ಥಳೀಯ ಭಾಷೆಗಳಲ್ಲಿ ನಡೆಯಬೇಕು: ನ್ಯಾಯಮೂರ್ತಿ ಸೂರ್ಯ ಕಾಂತ್

ವಾಷಿಂಗ್ಟನ್ ಸುಪ್ರೀಂ ಕೋರ್ಟ್‌ನಲ್ಲಿ ಮಾತನಾಡುವ ವೇಳೆ ಅವರು ಅಮೆರಿಕದ ಮಾರ್ಬರಿ  ಮತ್ತು ಮ್ಯಾಡಿಸನ್ ನಡುವಣ ಪ್ರಕರಣ ಹಾಗೂ ಭಾರತದ ಕೇಶವಾನಂದ ಭಾರತಿ ಪ್ರಕರಣಗಳಂತಹ ಮಹತ್ವದ ತೀರ್ಪುಗಳನ್ನು ಹೋಲಿಕೆ ಮಾಡಿದರು. ವಿಶ್ವದ ಎರಡೂ ಕಡೆಯ ನ್ಯಾಯಾಲಯಗಳು ನಿಷ್ಕ್ರಿಯ ವ್ಯಾಖ್ಯಾನಕಾರರಾಗಿರದೆ ಸಾಂವಿಧಾನಿಕ ನೀತಿ ರಕ್ಷಿಸುವ "ಜಾಗರೂಕ ಕಾವಲುಗಾರ"ನಾಗಿವೆ ಎಂದು ಬಣ್ಣಿಸಿದರು.

ಮೈಕ್ರೋಸಾಫ್ಟ್‌ ಕ್ಯಾಂಪಸ್‌ನಲ್ಲಿ ಮಾತನಾಡುತ್ತಾ  ನ್ಯಾಯಾಂಗ ಮೂಲಸೌಕರ್ಯದಲ್ಲಿ ಕೃತಕ ಬುದ್ಧಿಮತ್ತೆಯ ವಿಕಸನವನ್ನು ವಿವರಿಸಿದರು. ನ್ಯಾಯ ದೊರಕಿಸುಕೊಡುವಿಕೆಯನ್ನು ಪ್ರಜಾಸತಾತ್ಮಕಗೊಳಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವನ್ನು ಮೆಚ್ಚಿಕೊಂಡ ಅವರು ಕಾಲ್ಪನಿಕ ಪೂರ್ವ ನಿದರ್ಶನಗಳನ್ನು ನೀಡುವ ಚಾಟ್‌ಬಾಟ್‌ಗಳ ವಿರುದ್ಧ ಎಚ್ಚರ ಇರಬೇಕು. ತಂತ್ರಜ್ಞಾನ ಮಾನವ ತೀರ್ಪಿಗೆ ಬದಲಿಯಾಗಬಾರದು ಎಂದರು.  

Kannada Bar & Bench
kannada.barandbench.com