
ಕೇರಳದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿ ರಾಜ್ಯ ಸರ್ಕಾರ 2019ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ವಿವಿಧ ಪ್ಲಾಸ್ಟಿಕ್ ತಯಾರಕರು ಮತ್ತು ವ್ಯಾಪಾರಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ ಗ್ಲಿಸ್ಟರ್ ಸ್ಯಾಶೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಹಾಗೂ ಸಂಬಂಧಿತ ದಾವೆಗಳು].
ಪರಿಸರಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ನಿಯಂತ್ರಿಸಲು ಮತ್ತು ನಿಷೇಧಿಸಲು ಸರ್ಕಾರಕ್ಕೆ ಇರುವ ಅಧಿಕಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಅಂತಹ ಕ್ರಮಗಳು ಕೇಂದ್ರದ ಕಾಯಿದೆಯಿಂದ ಬೆಂಬಲಿತವಾಗಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪುಗಳನ್ನು ನೀಡಿದೆ ಎಂದು ಪೀಠ ಹೇಳಿದೆ.
ಪರಿಸರ (ರಕ್ಷಣೆ) ಕಾಯಿದೆ, 1986 ರ ಸೆಕ್ಷನ್ 5ರ ಅಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಮೇಲೆ ನಿರ್ಬಂಧಗಳನ್ನು ವಿಧಿಸುವ ರಾಜ್ಯ ಸರ್ಕಾರದ ಅಧಿಕಾರ ಎತ್ತಿಹಿಡಿದಿದ್ದ ತಮಿಳುನಾಡು ಮತ್ತು ಪುದುಚೆರಿ ಪೇಪರ್ ಕಪ್ ತಯಾರಕರ ಸಂಘ ಮತ್ತು ತಮಿಳುನಾಡು ಸರ್ಕಾರ (2023 ಎಸ್‌ಸಿಸಿ ಆನ್ಲೈನ್ ಎಸ್‌ಸಿ 1383) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿ ವಿಜು ಅಬ್ರಹಾಂ ಈ ತೀರ್ಪು ನೀಡಿದ್ದಾರೆ.
ಏಕ ಬಳಕೆಯ ಪ್ಲಾಸ್ಟಿಕ್‌ಗಳ ವಿವಿಧ ಹಂತಗಳ ಕುರಿತು ನಿಷೇಧ ಆದೇಶ ಹೊರಡಿಸುವ ರಾಜ್ಯ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶದ ವಿರುದ್ಧದ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ ಮತ್ತು ಮಾರಾಟದಲ್ಲಿ ತೊಡಗಿರುವ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಕೇರಳದಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಏಕ ಬಳಕೆಯನ್ನು ನಿಷೇಧಿಸುವ ನವೆಂಬರ್ 27, 2019 ಮತ್ತು ಡಿಸೆಂಬರ್ 17, 2019 ರ ಎರಡು ಸರ್ಕಾರಿ ಆದೇಶಗಳನ್ನು ಬಹುತೇಕ ಅರ್ಜಿಗಳು ಪ್ರಶ್ನಿಸಿದ್ದರೆ ಒಂದು ಅರ್ಜಿ ಮಾತ್ರ ಆದೇಶ ಜಾರಿಗೆ ತರುವಂತೆ ಕೋರಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಂತರ ಕೇಂದ್ರ ಹೊರಡಿಸಿದ್ದ ನಿಯಮಗಳೆರಡನ್ನೂ ಗಮನಿಸಿದ ನ್ಯಾಯಾಲಯ, ಸರ್ಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಂತೆಯೇ ನಿಷೇಧ ಪ್ರಶ್ನಿಸಿದ್ದ ಎಲ್ಲಾ ಅರ್ಜಿಗಳನ್ನು ಅದು ವಜಾಗೊಳಿಸಿತು. ಇದೇ ವೇಳೆ ತಮಗೆ ವಿಧಿಸಿದ್ದ ದಂಡದ ಆದೇಶ ಹಿಂಪಡೆಯುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನೂ ಅದು ತಿರಸ್ಕರಿಸಿತು.
[ತೀರ್ಪಿನ ಪ್ರತಿ]