
ಜಾಮೀನು ದೊರೆಯಲು ಸಮುದಾಯ ಸೇವೆ ಮಾಡಬೇಕು ಎಂದು ಷರತ್ತು ವಿಧಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಅಜಿತ್ ಕೆ ವಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 4(ಎಫ್) ಅಡಿಯಲ್ಲಿ ವ್ಯಾಖ್ಯಾನಿಸಲಾದ ಸಮುದಾಯ ಸೇವೆ ಎಂಬುದು ಸಂಬಂಧಪಟ್ಟ ಪ್ರಕರಣಗಳಲ್ಲಿ ವಿಧಿಸಬಹುದಾದ ಶಿಕ್ಷೆಯಾಗಿದ್ದು ಅದನ್ನು ಜಾಮೀನು ಷರತ್ತಿನಂತೆ ವಿಧಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸಿ ಜಯಚಂದ್ರನ್ ತಿಳಿಸಿದರು.
"ಬಿಎನ್‌ಎಸ್‌ನ ಸೆಕ್ಷನ್ 4(ಎಫ್) ಪ್ರಕಾರ, 'ಸಮುದಾಯ ಸೇವೆ' ಎಂಬುದು ಶಿಕ್ಷೆಯಾಗಿದ್ದು, ಅದನ್ನು ಜಾಮೀನು ಷರತ್ತಿನಂತೆ ವಿಧಿಸುವಂತಿಲ್ಲ " ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮಹಿಳೆಯರ ವಿರುದ್ಧದ ಕ್ರಿಮಿನಲ್ ಕೃತ್ಯಗಳನ್ನು ಒಳಗೊಂಡ ಅಪರಾಧಗಳಿಗೆ ಶಿಕ್ಷೆ ವಿಧಿಸುವ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಬಂಧಿತನಾಗಿದ್ದ ಅಜಿತ್ ಕೆ ವಿ ಎಂಬಾತನಿಗೆ ಜಾಮೀನು ನೀಡುವ ವೇಳೆ ಎರ್ನಾಕುಲಂನ ಸಂಚಾರ ನ್ಯಾಯಾಲಯವೊಂದು ವಾರಕ್ಕೆ ಎರಡು ಬಾರಿ ಚೆರನೆಲ್ಲೂರ್ ಠಾಣಾಧಿಕಾರಿ ಎದುರು ಮೂರು ತಿಂಗಳ ಕಾಲ ಹಾಜರಾಗಬೇಕು, ಮಾನಸಿಕ ಆಪ್ತಸಮಾಲೋಚನೆಗೆ ಒಳಪಡಬೇಕು ಹಾಗೂ ಕಲಮಚೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಮಾಡಬೇಕೆಂಬ ಷರತ್ತು ವಿಧಿಸಿತ್ತು.
ಷರತ್ತುಗಳನ್ನು ಪ್ರಶ್ನಿಸಿ ಅಜಿನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ತಾನು ತಿರುವನಂತಪುರದಲ್ಲಿ ಉದ್ಯೋಗದಲ್ಲಿರುವ ಕಾರಣಕ್ಕೆ ವಾರಕ್ಕೆ ಎರಡು ಬಾರಿ ಠಾಣಾಧಿಕಾರಿ ಮುಂದೆ ಹಾಜರಾಗುವುದು ಪ್ರಾಯೋಗಿಕವಾಗಿ ಕಷ್ಟಕರ. ಅಂತೆಯೇ ಸಮುದಾಯ ಸೇವೆ ಮತ್ತು ಆಪ್ತ ಸಮಾಲೋಚನೆಯಲ್ಲಿ ಪಾಲ್ಗೊಳ್ಳುವುದು ಅನಗತ್ಯ ಎಂದು ವಾದಿಸಿದ್ದ.
ವಾದ ಆಲಿಸಿದ ನ್ಯಾಯಾಲಯ ಕಾನೂನೊಂದು ಸಮುದಾಯ ಸೇವೆಯನ್ನು ಶಿಕ್ಷೆ ಎಂದು ವರ್ಗೀಕರಿಸಿರುವಾಗ ಅದನ್ನು ಜಾಮೀನು ಮಂಜೂರು ಮಾಡಲು ಷರತ್ತಾಗಿ ವಿಧಿಸುವಂತಿಲ್ಲ ಎಂದು ತಿಳಿಸಿತು. ಅಂತೆಯೇ ಆರೋಪಿಗೆ ವಿಧಿಸಲಾಗಿದ್ದ ಸಮುದಾಯ ಸೇವೆ ಷರತ್ತನ್ನು ರದ್ದುಗೊಳಿಸಿತು.
ಪ್ರಕರಣದ ಆರೋಪಗಳ ಸ್ವರೂಪ ಮತ್ತು ಸಂದರ್ಭ ಗಮನಿಸಿದರೆ ಕಡ್ಡಾಯ ಆಪ್ತ ಸಮಾಲೋಚನೆ ಅನಗತ್ಯ ಎಂದು ಕೂಡ ಅದು ಹೇಳಿತು.
ಎರಡು ತಿಂಗಳ ಅವಧಿಗೆ ಪ್ರತಿ ಶನಿವಾರ ಠಾಣಾಧಿಕಾರಿ ಮುಂದೆ ಹಾಜರಾಗಬೇಕು ಎಂದು ತಿಳಿಸಿ ಷರತ್ತನ್ನು ಪೀಠ ಮಾರ್ಪಡಿಸಿತು. ಎರಡು ತಿಂಗಳ ನಂತರ, ತನಿಖಾ ಅಧಿಕಾರಿಯಿಂದ ಲಿಖಿತವಾಗಿ ಸಮನ್ಸ್ ಬಂದರೆ ಮಾತ್ರ ಅಜಿನ್ ಹಾಜರಾಗಬೇಕಾಗುತ್ತದೆ ಎಂದು ಅದು ಹೇಳಿತು.
[ತೀರ್ಪಿನ ಪ್ರತಿ]