ಚಾಲನಾ ಪರವಾನಗಿ ಅವಧಿ ಮೀರಿದ್ದರೆ ವಿಮಾ ಕಂಪೆನಿಗಳನ್ನು ಹೊಣೆ ಮಾಡುವಂತಿಲ್ಲ ಎಂದ ಸುಪ್ರೀಂಕೋರ್ಟ್

ಚಾಲಕನ ಬಳಿ ಇರುವ ಪರವಾನಗಿ ಅವಧಿ ಮೀರಿದ್ದು ಆತ ತನ್ನ ಉದ್ಯೋಗದಾತನ ವಿಮೆ ಮಾಡಿಸಿದ ವಾಹನ ಚಲಾಯಿಸುತ್ತಿದ್ದರೆ ಆಗ ಪರಿಹಾರಕ್ಕಾಗಿ ವಿಮಾ ಕಂಪನಿಯನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪ್ರಾದೇಶಿಕ ಸಾರಿಗೆ ಕಛೇರಿಯ ಚಾಲನಾ ಪರವಾನಗಿ ವಿಭಾಗದ ಸಾಂದರ್ಭಿಕ ಚಿತ್ರ
ಪ್ರಾದೇಶಿಕ ಸಾರಿಗೆ ಕಛೇರಿಯ ಚಾಲನಾ ಪರವಾನಗಿ ವಿಭಾಗದ ಸಾಂದರ್ಭಿಕ ಚಿತ್ರ

ಅಪಘಾತದಲ್ಲಿ ಸಿಲುಕಿದ ಚಾಲಕನ ಬಳಿ ಮಾನ್ಯತೆ ಪಡೆದ ಚಾಲನಾ ಪರವಾನಗಿ ಇಲ್ಲದಿದ್ದರೆ ಪರಿಹಾರಕ್ಕಾಗಿ ವಿಮೆ ಕಂಪೆನಿಯ ಮೊರೆ ಹೋಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಉದ್ಯೋಗದಾತನ ಬಳಿ ವಿಮೆ ಮಾಡಿಸಿದ ವಾಹನ ಇದ್ದು ಅದನ್ನು ಅವಧಿ ಮೀರಿದ ಚಾಲನಾ ಪರವಾನಗಿ ಹೊಂದಿರುವ ಆತನ ಉದ್ಯೋಗಿ ಚಲಾಯಿಸುವಾಗ ಅಪಘಾತ ಸಂಭವಿಸಿದರೆ ಚಾಲಕ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ನಡೆಸಿತು. ಬೇಲಿ ರಾಮ್ ವರ್ಸಸ್ ರಾಜಿಂದರ್ ಕುಮಾರ್ ಮತ್ತಿತರರ ಪ್ರಕರಣ ಇದಾಗಿದೆ.

ನ್ಯಾಯಮೂರ್ತಿಗಳಾದ , ಅನಿರುದ್ಧ ಬೋಸ್, ಸಂಜಯ್ ಕಿಶನ್ ಕೌಲ್ ಮತ್ತು ಕೃಷ್ಣ ಮುರಾರಿ
ನ್ಯಾಯಮೂರ್ತಿಗಳಾದ , ಅನಿರುದ್ಧ ಬೋಸ್, ಸಂಜಯ್ ಕಿಶನ್ ಕೌಲ್ ಮತ್ತು ಕೃಷ್ಣ ಮುರಾರಿ

ಕೋರ್ಟ್ ತನ್ನ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ:

"ಚಾಲನಾ ಪರವಾನಗಿಯ ಕೂಲಂಕಷ ಪರಿಶೀಲನೆ ಅಗತ್ಯವಿಲ್ಲದಿದ್ದರೂ ವಾಹನದ ಮಾಲೀಕರು ಪರವಾನಗಿಯ ಮೇಲೆ ನಮೂದಿಸಿರುವ ಅದರ ಸಿಂಧುತ್ವದ ಬಗ್ಗೆ ತಿಳಿಯುವಂತಹ ಕನಿಷ್ಠ ಕಾಳಜಿ ಇರಬೇಕು ಎಂದು ನಾವು ಭಾವಿಸುತ್ತೇವೆ. ಚಾಲಕ ಪರವಾನಗಿ ನವೀಕರಿಸಿದ್ದಾನೆಯೇ ಎಂದು ಪರಿಶೀಲಿಸುವ ಹೊಣೆಯಿಂದ ಆತ ಕೈ ತೊಳೆದುಕೊಳ್ಳಬಹುದು ಎಂದು ಹೇಳಲಾಗದು”

ಸುಪ್ರೀಂಕೋರ್ಟ್

ಅಪಘಾತದ ಬಳಿಕ ಅಂಗವೈಕಲ್ಯಕ್ಕೆ ತುತ್ತಾಗಿರುವ ಚಾಲಕ ಪರವಾನಗಿಯನ್ನು ನವೀಕರಿಸದಷ್ಟು ನಿರ್ಲಕ್ಷ್ಯ ಹೊಂದಿದ್ದಾನೆ. ಹೀಗಾಗಿ ಇದು ಕಾರ್ಮಿಕರ ಪರಿಹಾರ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಬರುವ ಪ್ರಕರಣವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ದೇಶದ ವಿವಿಧ ಹೈಕೊರ್ಟುಗಳು ನೀಡಿದ ತೀರ್ಪುಗಳನ್ನು ಅದು ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

Also Read
ಫಿಟ್ನೆಸ್‌, ಪರ್ಮಿಟ್, ಪರವಾನಗಿ, ನೋಂದಣಿ ಸೇರಿದಂತೆ ಮೋಟಾರ್ ವಾಹನಗಳ ಸಿಂಧುತ್ವ ಡಿಸೆಂಬರ್ 31ರ ವರೆಗೆ ವಿಸ್ತರಣೆ
Also Read
ದುಡಿಯುವವರಿಗಿಂತಲೂ ಗೃಹಿಣಿಯ ಸ್ಥಾನ ದೊಡ್ಡದು ಎಂದ ಮದ್ರಾಸ್ ಹೈಕೋರ್ಟ್: ಅಪಘಾತ ಪರಿಹಾರದಲ್ಲಿ ಹೆಚ್ಚಳ ಮಾಡಿದ ನ್ಯಾಯಾಲಯ

ಅವಧಿ ಮೀರಿದ ಪರವಾನಗಿ ಹೊಂದಿದ ಚಾಲಕ ಅಪಘಾತವಾಗುವವರೆಗೂ ಪರವಾನಗಿ ನವೀಕರಿಸಿಕೊಳ್ಳದಿದ್ದರೆ, ಪರವಾನಗಿಯು ಪೂರ್ವಾನ್ವಯವಾಗುವಂತೆ ನವೀಕೃತವಾಗಿದೆ ಎಂದು ಭಾವಿಸಿರುವುದಾಗಿ ಸಮಜಾಯಿಷಿ ನೀಡುವಂತಿಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.

ವಿವಿಧ ಪ್ರಕರಣಗಳಲ್ಲಿ ನೀಡಲಾದ ತೀರ್ಪಿನಂತೆ ಈ ಪ್ರಕರಣದಲ್ಲಿ ಕೂಡ ಪರವಾನಗಿ ಅವಧಿ ಮುಗಿದ ನಂತರ ಅದನ್ನು ನವೀಕರಿಸುವುದನ್ನು ಖಚಿತಪಡಿಸಿಕೊಳ್ಳುವುದು ಉದ್ಯೋಗದಾತರ ಜವಾಬ್ದಾರಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮೂರನೇ ವ್ಯಕ್ತಿ ಪರಿಹಾರ (Third- party claim) ಹಕ್ಕು ಇಲ್ಲದಿರುವುದರಿಂದ ಮತ್ತು ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿಗೆ ತೊಂದರೆ ಉಂಟಾಗದ ಕಾರಣ ಚಾಲಕನಿಗೆ ಶಿಕ್ಷೆ ವಿಧಿಸದೇ ಮೇಲ್ಮನವಿಯನ್ನು ಪೀಠ ವಜಾಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com