ಸಾಂಪ್ರದಾಯಿಕ ಗುಜರಾತಿ ನೃತ್ಯ ಪ್ರದರ್ಶಿಸುವ ಜೋಡಿಯನ್ನೊಳಗೊಂಡ ಕಾಂಡೋಮ್ ಜಾಹೀರಾತು ಅಶ್ಲೀಲವಲ್ಲ ಎಂದಿರುವ ಮಧ್ಯಪ್ರದೇಶ ಹೈಕೋರ್ಟ್ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ನಲ್ಲಿ ಜಾಹೀರಾತು ಹಂಚಿಕೊಂಡಿದ್ದ ಔಷಧ ವ್ಯಾಪಾರಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದೆ [ಮಹೇಂದ್ರ ತ್ರಿಪಾಠಿ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ವಿವಾದಿತ ಜಾಹೀರಾತಿನ ಪ್ರಕಟಣೆ ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿ ಸತ್ಯೇಂದ್ರ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿತು. ಜೋಡಿಯೊಂದು ಗಾರ್ಬಾ ನೃತ್ಯ ಪ್ರದರ್ಶಿಸುತ್ತಿರುವ ಜಾಹೀರಾತಿನಲ್ಲಿ ʼಪ್ರೀ ಲವ್‌ರಾತ್ರಿ ವೀಕೆಂಡ್ ಆಫರ್- ಕಾಂಡೋಮ್ಸ್ (ಪ್ಯಾಕ್ ಆಫ್ ತ್ರೀ) ಆರ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಅಟ್ ಐಎನ್‌ಆರ್ ಝೀರೊʼ (ಉಚಿತ ಲವ್‌ರಾತ್ರಿ ಕೊಡುಗೆ - ಕಾಂಡೋಮ್ಸ್ (ಮೂರರ ಪ್ಯಾಕ್) ಅಥವಾ ಶೂನ್ಯ ರೂಪಾಯಿಗೆ ಗರ್ಭಧಾರಣೆ ಪರೀಕ್ಷಾ ಕಿಟ್) ಎಂದು ಪ್ರಕಟಿಸಲಾಗಿತ್ತು.
ʼಅರ್ಜಿದಾರರು ಇಂದೋರ್‌ನಲ್ಲಿ ಔಷಧವ್ಯಾಪಾರಿಯಾಗಿದ್ದು ಆ ಪೋಸ್ಟ್ ಹೊರತುಪಡಿಸಿ ಅವರಿಗೆ ಅಂತಹ ಉದ್ದೇಶ (ಧಾರ್ಮಿಕ ಭಾವನೆಗೆ ಧಕ್ಕೆ ತರುವುದು) ಇತ್ತು ಎನ್ನುವಂತಹ ಯಾವುದೇ ಸಾಕ್ಷ್ಯ ದೊರೆತಿಲ್ಲ. ಅವರು ಸ್ವತಃ ಹಿಂದೂ ಸಮುದಾಯಕ್ಕೆ ಸೇರಿದವರು, ಜೊತೆಗೆ ತಮ್ಮ ಗುರುತು ಮರೆಮಾಚದೆ ಸ್ವಂತ ಮೊಬೈಲ್‌ನಿಂದ ಅದನ್ನು ಪೋಸ್ಟ್ ಮಾಡಿದ್ದಾರೆ ಎಂಬ ಅಂಶವನ್ನು ಗಮನಿಸಿದಾಗ ತನ್ನ ಕಂಪೆನಿ ಉತ್ಪನ್ನವನ್ನು ಪ್ರಚಾರ ಮಾಡುವುದಷ್ಟೇ ಅವರ ಉದ್ದೇಶವಾಗಿತ್ತು. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ತೋರುತ್ತದೆʼ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಜಾಹೀರಾತು ಅಶ್ಲೀಲವಾಗಿದೆ ಎಂಬ ಅಂಶವನ್ನು ಕೂಡ ನ್ಯಾಯಾಲಯ ಒಪ್ಪಲಿಲ್ಲ. ʼಆರೋಪಿತ ಪೋಸ್ಟ್ ಪರಿಶೀಲಿಸಿದಾಗ ಅದರಲ್ಲಿರುವ ವಸ್ತು ವಿಷಯ ಅಶ್ಲೀಲತೆಯಿಂದ ಕೂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಆದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಪ್ರಕರಣಕ್ಕೆ ಅನ್ವಯವಾಗದು. ಈ ಅಂಶ ಪರಿಗಣಿಸಿ ಪ್ರಾಸಿಕ್ಯೂಷನ್‌ಗೆ ಪ್ರಕರಣ ಮುಂದುವರೆಸಲು ಅನುವು ಮಾಡಿಕೊಡುವುದರಿಂದ ನ್ಯಾಯ ಪ್ರಕ್ರಿಯೆಯ ದುರುಪಯೋಗಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ವಿಚಾರಣೆ ರದ್ದುಗೊಳಿಸುವುದು ಅಗತ್ಯʼ ಎಂದು ನ್ಯಾಯಾಲಯ ಹೇಳಿದೆ.
ನವರಾತ್ರಿ ಹಬ್ಬದ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ʼಲವ್‌ರಾತ್ರಿʼ ಹೆಸರಿನ ಚಲನಚಿತ್ರ ಬಿಡುಗಡೆ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದ ಪೀಠ ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ನಂತರದ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಿತು.