ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಗೋವಿಂದರಾಜು ಅವರ ಮನೆಯಲ್ಲಿ ಶೋಧ ನಡೆಸುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎನ್ನಲಾದ ಡೈರಿಗೆ ಸಂಬಂಧಿಸಿದಂತೆ ಬೆಂಗಳೂರಿನ ಇಂದಿರಾ ನಗರ ಪೊಲೀಸರು ಐಟಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ವಜಾ ಮಾಡಿದೆ.
ಗೋವಿಂದರಾಜು ಅವರು ತಮ್ಮ ಮನೆಯಲ್ಲಿ ಶೋಧ ನಡೆಸುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂದು ಉಲ್ಲೇಖಿಸಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾ ನಿರ್ದೇಶಕರು, ನಿರ್ದೇಶಕರು ಹಾಗೂ ಕೇಂದ್ರ ಆಯುಕ್ತರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು.
“ಆದಾಯ ತೆರಿಗೆ ಇಲಾಖೆ ಕಾಯಿದೆ ಸೆಕ್ಷನ್‌ಗಳಾದ 132 ಮತ್ತು 138(2)ರ ಅಡಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಸಂಬಂಧಿತ ದಾಖಲೆ ಅಥವಾ ವಿವರವನ್ನು ಯಾವುದೇ ಸರ್ಕಾರಿ ಅಧಿಕಾರಿಯ ಮುಂದೆ ಪ್ರಸ್ತುತಪಡಿಸುವ ಅಗತ್ಯವಿಲ್ಲ” ಎಂದು ಪೀಠ ತೀರ್ಪಿನಲ್ಲಿ ಹೇಳಿದೆ. ಅಂತೆಯೇ, ಶಾಸಕರ ದೂರನ್ನು ಆಧರಿಸಿ ಸಿಆರ್‌ಪಿಸಿ ಸೆಕ್ಷನ್ 91ರ ಅಡಿ ಆದಾಯ ತೆರಿಗೆ ಅಧಿಕಾರಿಗಳಿಗೆ ಇಂದಿರಾ ನಗರ ಪೊಲೀಸರು ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯವು ವಜಾ ಮಾಡಿದೆ.
ಉತ್ತಮ ಉದ್ದೇಶ ಇಟ್ಟುಕೊಂಡು ತಮ್ಮ ಕರ್ತವ್ಯ ನಿಭಾಯಿಸಿದ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸುವುದಕ್ಕೆ ಐಟಿ ಕಾಯಿದೆಯ ಸೆಕ್ಷನ್ 293ರ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಪುನರುಚ್ಚರಿಸಿದೆ.
ಶಾಸಕರು ತಮ್ಮ ದೂರಿನಲ್ಲಿ ಡೈರಿ ಬಗ್ಗೆ ಉಲ್ಲೇಖಿಸಿದ್ದಾರೆ. ಅಂತೆಯೇ ಪೊಲೀಸರು ಅರ್ಜಿದಾರರಾಗಿರುವ ಐಟಿ ಅಧಿಕಾರಿಗಳಿಂದ ಡೈರಿ ಪಡೆಯಲು ಪ್ರಯತ್ನಿಸಿದ್ದಾರೆ. ಇಡೀ ದೂರಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ಡೈರಿ ಹೊರತುಪಡಿಸಿ ಬೇರೆ ಏನನ್ನೂ ಕೇಳಿಲ್ಲ ಎಂಬುದು ಆಘಾತ ಉಂಟು ಮಾಡಿದೆ ಎಂದಿರುವ ನ್ಯಾಯಾಲಯವು ಇಂದಿರಾ ನಗರ ಪೊಲೀಸರು 2017ರ ಫೆಬ್ರವರಿ 28ರಂದು ದಾಖಲಿಸಿದ್ದ ಎಫ್‌ಐಆರ್ ಮತ್ತು ಆನಂತರದ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಮಾಡಿದೆ.
2016ರ ಮಾರ್ಚ್ 15ರಂದು ಗೋವಿಂದರಾಜ್ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ವಿವಾದಿತ ಡೈರಿ ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಕಾಂಗ್ರೆಸ್‌ನ ವಿವಿಧ ಮುಖಂಡರಿಗೆ ಹಣಕಾಸು ನೀಡಿದ್ದ ವಿವರವನ್ನು ಡೈರಿಯಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರವು ಭಾರಿ ರಾಜಕೀಯ ವಿವಾದ ಸೃಷ್ಟಿಸಿತ್ತು.