ಸಂವಿಧಾನದ ಯಶಸ್ಸು ಅದರ ವಿರುದ್ಧದ ಟೀಕೆಗಳು ತಪ್ಪು ಎಂಬುದನ್ನು ಸಾಬೀತುಪಡಿಸಿದೆ: ಸಿಜೆಐ

ಸಂವಿಧಾನ ಮತ್ತು ಪ್ರಜಾಪ್ರಭುತ್ವ ದೇಶವಾಗಿ ಭಾರತ ಯಶಸ್ಸಿಯಾಗುವುದೇ ಎಂಬ ಬಗ್ಗೆ ಹಿಂದೆ ಪಾಶ್ಚಿಮಾತ್ಯ ವಿದ್ವಾಂಸರು ವ್ಯಕ್ತಪಡಿಸಿದ್ದ ಸಂದೇಹಗಳನ್ನು ಅವರು ತಳ್ಳಿಹಾಕಿದರು.
ಸಂವಿಧಾನದ ಯಶಸ್ಸು ಅದರ ವಿರುದ್ಧದ ಟೀಕೆಗಳು ತಪ್ಪು ಎಂಬುದನ್ನು ಸಾಬೀತುಪಡಿಸಿದೆ: ಸಿಜೆಐ
Published on

ಕಳೆದ 75 ವರ್ಷಗಳಲ್ಲಿ ರಾಷ್ಟ್ರ ಪಡೆದಿರುವ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಗಮನಿಸಿದಾಗ ಭಾರತೀಯ ಸಂವಿಧಾನದ ಬಗ್ಗೆ ಮಾಡಲಾದ ಟೀಕೆಗಳು ತಪ್ಪು ಎಂಬುದು ಸಾಬೀತಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಹೇಳಿದ್ದಾರೆ.

ಇಟಲಿಯ ಮಿಲನ್ ಮೇಲ್ಮನವಿ ನ್ಯಾಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಧವಾರ ಅವರು ಮಾತನಾಡಿದರು.

Also Read
ಸಂವಿಧಾನ ಮತ್ತು ನಾಗರಿಕರ ರಕ್ಷಕನಾಗಿ ನ್ಯಾಯಾಂಗ ಕಾರ್ಯನಿರ್ವಹಿಸಿದೆ: ಸಿಜೆಐ ಗವಾಯಿ

ಸಂವಿಧಾನ ಮತ್ತು ಪ್ರಜಾಪ್ರಭುತ್ವ ದೇಶವಾಗಿ ಭಾರತ ಯಶಸ್ಸಿಯಾಗುವುದೇ ಎಂಬ ಬಗ್ಗೆ ಹಿಂದೆ ಪಾಶ್ಚಿಮಾತ್ಯ ವಿದ್ವಾಂಸರು ವ್ಯಕ್ತಪಡಿಸಿದ್ದ ಸಂದೇಹಗಳನ್ನು ಅವರು ತಳ್ಳಿಹಾಕಿದರು.

ಭಾರತದ ಸಂವಿಧಾನ ತುಂಬಾ ದೀರ್ಘ, ಕಠಿಣ ಹಾಗೂ ಪದಬಾಹುಳ್ಯದಿಂದ ಕೂಡಿದೆ ಎಂದು ಸರ್ ಐವರ್ ಜೆನ್ನಿಂಗ್ಸ್ ಅವರು 1951ರಲ್ಲಿ ಮಾಡಿದ್ದ  ಟೀಕೆಯನ್ನು ಸಭಿಕರಿಗೆ ನೆನಪಿಸಿದ ಅವರು ಆದರೆ ಕಳೆದ 75 ವರ್ಷಗಳ ಅನುಭವ ಜೆನ್ನಿಂಗ್ಸ್ ಅವರ ಅಭಿಪ್ರಾಯ ತಪ್ಪು ಎಂಬುದನ್ನು ಸಾಬೀತುಪಡಿಸಿದೆ. ಭಾರತದ ಸಂವಿಧಾನ  ತನ್ನ ನಾಗರಿಕರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಆಪಾದಿಸಲಾದ ನ್ಯೂನತೆಗಳು ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ಪ್ರಯೋಗಗಳಲ್ಲಿ ಒಂದಕ್ಕೆ ಅಡಿಪಾಯವಾಗಿವೆ ಎಂದು ಅವರು ಮಾರ್ಮಿಕವಾಗಿ ನುಡಿದರು.  

ಭಾರತದ ಸಂವಿಧಾನ  ಕೇವಲ ಆಡಳಿತಕ್ಕೆ ಸಂಬಂಧಿಸಿದ ದಾಖಲೆಯಲ್ಲ, ಬದಲಾಗಿ  "ಒಂದು ಕ್ರಾಂತಿಕಾರಿ ನಿರೂಪ" ಎಂದು ಸಿಜೆಐ ಗವಾಯಿ ಹೇಳಿದರು.

ಸಂವಿಧಾನದ ನಿಬಂಧನೆಗಳನ್ನು ಅದರಲ್ಲಿಯೂ ನೀತಿ ನಿರ್ದೇಶಕ ತತ್ವಗಳನ್ನು ನ್ಯಾಯಾಂಗ ವ್ಯಾಖ್ಯಾನ ಮತ್ತು ಶಾಸಕಾಂಗ ಕ್ರಮಗಳ ಮೂಲಕ ಕ್ರಮೇಣ ಜಾರಿಗೊಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

Also Read
ಅಧ್ಯಯನದ ಬಳಿಕ ದೇಶಕ್ಕೆ ಮರಳಿ, ಭಾರತವನ್ನು ಬಲಿಷ್ಠಗೊಳಿಸಿ: ವಿದೇಶದ ಭಾರತೀಯ ವಿದ್ಯಾರ್ಥಿಗಳಿಗೆ ಸಿಜೆಐ ಗವಾಯಿ ಕರೆ

ಒಂದು ಕಾಲದಲ್ಲಿ ನೈತಿಕ ನಿರ್ದೇಶನವಾಗಿದ್ದದ್ದು ಈಗ ಕಾನೂನುಬದ್ಧ ಹಕ್ಕಾಗಿದೆ. ಶಿಕ್ಷಣದ ಹಕ್ಕು, ಜೀವನೋಪಾಯದ ಹಕ್ಕು, ಕಾನೂನು ನೆರವು - ಇವೆಲ್ಲವೂ ಸಂಸತ್ತಿನ ಇಚ್ಛೆ ಮತ್ತು ನ್ಯಾಯಾಂಗ ನಾವೀನ್ಯತೆಯ ಪರಸ್ಪರ ಕ್ರಿಯೆಯಿಂದ ಹೊರಹೊಮ್ಮಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಸಂವಿಧಾನದ  21ನೇ ವಿಧಿಯಡಿ ಸುಪ್ರೀಂ ಕೋರ್ಟ್‌ ಜೀವಿಸುವ ಹಕ್ಕಿನೊಂದಿಗೆ ಸಾಮಾಜಿಕ ಆರ್ಥಿಕ ಹಕ್ಕಿನ ಸಹವಾಚನ ಮಾಡಿದ ತೀರ್ಪುಗಳನ್ನು ವಿವರಿಸಿದರು. ಎಂ ಎಚ್ ಹೊಸಕೋಟ್, ಓಲ್ಗಾ ಟೆಲ್ಲಿಸ್ ಮತ್ತು ಬಂಧುವಾ ಮುಕ್ತಿ ಮೋರ್ಚಾದಂತಹ ತೀರ್ಪುಗಳು ಬಡತನದ ಕಾರಣಕ್ಕೆ ನ್ಯಾಯವನ್ನು ನಿರಾಕರಿಸಲಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿವೆ ಎಂದರು.

Kannada Bar & Bench
kannada.barandbench.com