Actor Chetan

Actor Chetan

ನ್ಯಾಯಾಂಗ ನಿಂದನೆ ಪ್ರಕರಣ: ನಟ ಚೇತನ್‌ಗೆ 14 ದಿನಗಳ ನ್ಯಾಯಾಂಗ ಬಂಧನ; ವಿಚಾರಣೆ ಫೆ.25ಕ್ಕೆ ಮುಂದೂಡಿಕೆ

ನಟ ಚೇತನ್‌ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ 40ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮಾಕರ್‌ ವನಕುದ್ರೆ ಅವರು ಆದೇಶಕ್ಕಾಗಿ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು.

ಹಿಜಾಬ್‌ ಪ್ರಕರಣವನ್ನು ಆಲಿಸುತ್ತಿರುವ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠದಲ್ಲಿ ನ್ಯಾಯಮೂರ್ತಿಯಾಗಿರುವ ಕೃಷ್ಣ ಎಸ್‌. ದೀಕ್ಷಿತ್‌ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅವರನ್ನು ಬುಧವಾರ ಬೆಂಗಳೂರಿನ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನಟ ಚೇತನ್‌ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ 40ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮಾಕರ್‌ ವನಕುದ್ರೆ ಅವರು ಆದೇಶಕ್ಕಾಗಿ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು.

ನಟ ಚೇತನ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಬಾಲಕೃಷ್ಣನ್‌ ಅವರು “ಚೇತನ್‌ ಮಾಡಿರುವ ಟ್ವೀಟ್‌ನಲ್ಲಿ ಮಾನಹಾನಿ, ಬೆದರಿಕೆ, ಅವಾಚ್ಯ ಅಥವಾ ಅಶ್ಲೀಲ ಅಂಶಗಳು ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚೇತನ್‌ ಅವರು ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ತನಿಖೆಗೆ ಸಹಕರಿಸುವುದಿಲ್ಲ ಎನ್ನಲಾಗದು. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.

ಸರ್ಕಾರಿ ಅಭಿಯೋಜಕ ಶಿವಕುಮಾರ್‌ ಅವರು “ಆರೋಪಿಯ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ತನಿಖೆ ನಡೆಸಬೇಕಿದೆ. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು” ಎಂದು ಆಕ್ಷೇಪಿಸಿದರು.

“ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ದೀಕ್ಷಿತ್‌ ಅವರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್‌ ಧರಿಸುವ ಕುರಿತಾದ ವಿಚಾರವನ್ನು ನಿರ್ಧರಿಸಲಿದ್ದಾರೆ. ನ್ಯಾ. ದೀಕ್ಷಿತ್‌ ಅವರಿಗೆ ಅದನ್ನು ನಿರ್ಧರಿಸಲು ಅಗತ್ಯವಾದ ಸ್ಪಷ್ಟತೆ ಇದೆಯೇ” ಎಂದು ಪ್ರಶ್ನಿಸಿ ಚೇತನ್‌ ಅವರು ಫೆಬ್ರವರಿ 16ರಂದು ಟ್ವೀಟ್‌ ಮಾಡಿದ್ದರು.

ಟ್ವೀಟ್‌ ಆಧರಿಸಿ ಚೇತನ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 505(2) (ಕೋಮುಗಳ ನಡುವೆ ವೈಷಮ್ಯ ಸೃಷ್ಟಿ), 504 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಆ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು) ಅಡಿ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿ, ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದರು.

Also Read
ನ್ಯಾಯಾಂಗ ನಿಂದನೆ ಆರೋಪ: ಪೊಲೀಸ್‌ ವಶಕ್ಕೆ ನಟ ಚೇತನ್‌

ನ್ಯಾಯಮೂರ್ತಿಗಳು ಹೇಳಿದ್ದೇನು?

ಅತ್ಯಾಚಾರ ಯತ್ನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ, ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸುಸ್ತಾಗಿ, ನಿದ್ರೆಗೆ ಜಾರಿದ್ದಾಗಿ ಸಂತ್ರಸ್ತೆ ಹೇಳಿದ್ದನ್ನು ಆಲಿಸಿದ್ದ ನ್ಯಾ. ದೀಕ್ಷಿತ್‌ ಅವರು “ಇದು ಭಾರತೀಯ ಮಹಿಳೆಗೆ ಹೊಂದುವಂಥದ್ದಲ್ಲ; ಅತ್ಯಾಚಾರಕ್ಕೆ ಒಳಗಾದಾಗ ನಮ್ಮ ಮಹಿಳೆಯರು ವರ್ತಿಸುವ ರೀತಿ ಅದಲ್ಲ” ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನ್ಯಾ. ದೀಕ್ಷಿತ್‌ ಅವರ ಅಭಿಪ್ರಾಯವನ್ನು ಆದೇಶದಿಂದ ಬಿಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com