CJI DY Chandrachud
CJI DY Chandrachud

ಹಕ್ಕುಗಳ ಜಾಗೃತಿಯುಳ್ಳ ಸಮಾಜಕ್ಕೆ ನ್ಯಾಯಾಲಯ ಮತ್ತು ನಾಗರಿಕ ಸಮಾಜದ ನಡುವೆ ನಿರಂತರ ನಂಟು ಅಗತ್ಯ: ಸಿಜೆಐ ಚಂದ್ರಚೂಡ್

ʼಜಾಗತಿಕ ಬದಲಾವಣೆ ಮತ್ತು ಕಾನೂನು ವೃತ್ತಿ, ಭೂತ ಹಾಗೂ ಭವಿಷ್ಯ: ಭಾರತದ ದೃಷ್ಟಿಕೋನʼ ಎಂಬ ವಿಚಾರವಾಗಿ ಯುನೈಟೆಡ್‌ ಕಿಂಗ್‌ಡಮ್‌ನ ಎಡಿನ್‌ಬ್ರ ವಿವಿಯ ಕಾನೂನು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Published on

ನೈಜ ಹಕ್ಕು ಜಾಗೃತ ಸಮಾಜ ನಿರ್ಮಾಣಕ್ಕಾಗಿ ನ್ಯಾಯಾಲಯಗಳು, ನಾಗರಿಕರು ಹಾಗೂ ನಾಗರಿಕ ಸಂಸ್ಥೆಗಳ ನಡುವೆ ನಿರಂತರ ನಂಟು ಇರಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಈಚೆಗೆ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ ಮಾತ್ರವೇ ಅಲ್ಲದೆ ಈ ಸಹಯೋಗವೂ ಸಹ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುತ್ತದೆ ಎಂದು ಸಿಜೆಐ ಗಮನ ಸೆಳೆದರು.

ಜಾಗತಿಕ ಬದಲಾವಣೆ ಮತ್ತು ಕಾನೂನು ವೃತ್ತಿ, ಭೂತ ಹಾಗೂ ಭವಿಷ್ಯ: ಭಾರತದ ದೃಷ್ಟಿಕೋನʼ ಎಂಬ ವಿಚಾರವಾಗಿ ಯುನೈಟೆಡ್‌ ಕಿಂಗ್‌ಡಮ್‌ನ ಎಡಿನ್‌ಬ್ರ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಜೂನ್‌ 1ರಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕ ಉಪನ್ಯಾಸ ನೀಡಿದರು.

ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದಂತೆಯೇ ಹಕ್ಕುಗಳ ರಕ್ಷಣೆಯಲ್ಲಿ ನಾಗರಿಕರದ್ದೂ ಮಹತ್ವದ ಪಾತ್ರವಿದೆ. ನ್ಯಾಯಾಲಯಗಳು ಮಾತ್ರವೇ ಈ ಹಕ್ಕುಗಳ ರಕ್ಷಣೆ ಮಾಡುತ್ತವೆ ಎಂದು ಹೇಳುವುದು ಅತಿರೇಕದ ಹೇಳಿಕೆಯಾಗಿಬಿಡುತ್ತದೆ ಎಂದು ಅವರು ವಿವರಿಸಿದರು.

Also Read
ಸಿಜೆಐ ಚಂದ್ರಚೂಡ್‌ ವಿರುದ್ಧದ ಟ್ರೋಲ್‌ಗೆ ಆಡಳಿತ ಪಕ್ಷದಿಂದ ಬೆಂಬಲ; ರಾಷ್ಟ್ರಪತಿ ಮುರ್ಮುಗೆ ವಿಪಕ್ಷ ಸಂಸದರಿಂದ ಪತ್ರ

ಉಪನ್ಯಾಸದ ಬಳಿಕ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುವ ಏಕೈಕ ಆಧಾರ ಸ್ತಂಭ ಸುಪ್ರೀಂ ಕೋರ್ಟ್ ಎಂಬುದು ತಮ್ಮ ಭಾವನೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ “ನ್ಯಾಯಾಲಯಗಳು ಅತಿ ಮುಖ್ಯ ಆದರೆ ನೈಜ ಹಕ್ಕು ಜಾಗೃತ ಸಮಾಜ ಅಥವಾ ಹಕ್ಕುಗಳ ಚೈತನ್ಯದಿಂದ ಕೂಡಿದ ಸಮಾಜಕ್ಕಾಗಿ ನ್ಯಾಯಾಲಯ, ನಾಗರಿಕರು ಹಾಗೂ ನಾಗರಿಕ ಸಂಘಟನೆಗಳ ನಡುವೆ  ನಿರಂತರ ಸಹಯೋಗ ಅಗತ್ಯ” ಎಂದು ವಿವರಿಸಿದರು.

“ನ್ಯಾಯಾಂಗದ ಬಹುತೇಕ ಪಾತ್ರ ಪ್ರಕರಣಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ನಿಗದಿಪಡಿಸಲಾಗಿರುವ ಸಿದ್ಧಾಂತಗಳ (ಡಾಕ್ಟರಿನ್‌) ವಿಚಾರಕ್ಕೆ ಸೀಮಿತವಾಗಿರುವುದಿಲ್ಲ., ಬದಲಿಗೆ ನ್ಯಾಯಾಲಯಗಳು ಸಂವಾದಾತ್ಮಕ ಪಾತ್ರವನ್ನು ನಿರ್ವಹಿಸುತ್ತವೆ. ನ್ಯಾಯಾಲಯಗಳೊಂದಿಗೆ ನಡೆಸುವ ಇಂತಹ ಮಂಥನದಿಂದ ನಮಗೆ ಚೈತನ್ಯಯುಕ್ತ, ಜಾಗೃತ, ಹಕ್ಕು ವಿಕಸಿತ ಸಮಾಜ ದಕ್ಕುತ್ತದೆ” ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಸ್ಕಾಟ್ಲೆಂಡ್‌ನ ನ್ಯಾಯಮೂರ್ತಿಗಳು, ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು, ಸುಪ್ರೀಂ ಕೋರ್ಟ್‌ ವಕೀಲರು ಭಾಗವಹಿಸಿದ್ದರು.

Kannada Bar & Bench
kannada.barandbench.com