
2009-10ರ ತೆರಿಗೆ ನಿರ್ಧರಣಾ ಸಾಲಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ವಿರುದ್ಧ ಆದಾಯ ತೆರಿಗೆ ಇಲಾಖೆ ನೀಡಿದ್ದ ತೆರಿಗೆ ನಿರ್ಧರಣಾ ನೋಟಿಸನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ನೋಟಿಸ್‌ಗೆ ಕಾಲಮಿತಿ ಇದ್ದು ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಅದನ್ನು ನೀಡದೆ ಕೇವಲ ಅಭಿಪ್ರಾಯ ಬದಲಾವಣೆ ಆಧರಿಸಿ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ರವೀಂದರ್ ದುಡೇಜಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣ ಆದಾಯ ತೆರಿಗೆ ಉಪ ಆಯುಕ್ತರು ಏಪ್ರಿಲ್ 1, 2016ರಂದು ನೀಡಿದ್ದ 2009-10ನೇ ಸಾಲಿನ ತೆರಿಗೆ ನಿರ್ಧರಣಾ ನೋಟಿಸ್‌ಗೆ ಸಂಬಂಧಿಸಿದೆ.
ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಶಾಶ್ವತ ಸ್ಥಾಪನೆ, ಷೇರು ವಹಿವಾಟುಗಳ ತೆರಿಗೆ, ಐಟಿ ಕಾಯಿದೆ ಸೆಕ್ಷನ್ 35(2ಎ ಬಿ) ಅಡಿ ಕಡಿತ ನಿರಾಕರಣೆ ಹಾಗೂ ಖಾತರಿ ನಿಬಂಧನೆಗಳನ್ನು ಆಧರಿಸಿ ಉಪ ಆಯುಕ್ತರು ವಾದ ಮಂಡಿಸಿದ್ದರು.
ಮಾರುತಿ ಸುಜುಕಿ ನೋಟಿಸ್ ಪ್ರಶ್ನಿಸಿತ್ತು. 2009-10 ನೇ ಸಾಲಿನ ತೆರಿಗೆ ನಿರ್ಧರಣೆ ಆರಂಭಿಸಲು ಕೊನೆಯ ದಿನಾಂಕ ಮಾರ್ಚ್ 31, 2016 ಆಗಿರುವುದರಿಂದ ಅದಕ್ಕೆ ಕಾಲಮಿತಿ ಇದೆ. ತೆರಿಗೆ ನಿರ್ಧರಣಾ ಸಮಯದಲ್ಲಿ ಎಲ್ಲಾ ಸಂಬಂಧಿತ ಸಂಗತಿಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದ್ದು ತೆರಿಗೆ ನಿರ್ಧರಣೆ ಕೇವಲ ಅಭಿಪ್ರಾಯ ಬದಲಾವಣೆಯನ್ನು ಆಧರಿಸಿದೆ ಎಂದು ಕಂಪೆನಿ ವಾದಿಸಿತು.
ಅಂತೆಯೇ ನೋಟಿಸ್‌ಗೆ ಇರುವ ಕಾಲಮಿತಿ, ತೆರಿಗೆ ನಿರ್ಧರಣಾ ಸಮಯದಲ್ಲಿ ಎಲ್ಲಾ ಸಂಬಂಧಿತ ಸಂಗತಿಗಳನ್ನು ಮಾರುತಿ ಸುಜುಕಿ ಸಂಪೂರ್ಣವಾಗಿ ಬಹಿರಂಗಪಡಿಸಿರುವುದು, ಅಭಿಪ್ರಾಯ ಬದಲಾವಣೆ ಆಧರಿಸಿ ನೋಟಿಸ್ ನೀಡಿರುವುದು ಹಾಗೂ ತೆರಿಗೆ ಆಯುಕ್ತರು ಮುಕ್ತವಾಗಿ ವಿವೇಚನೆ ಬಳಸದೆ ಇರುವುದನ್ನು ಆಧರಿಸಿ ನ್ಯಾಯಾಲಯ ಕಂಪೆನಿ ಪರವಾಗಿ ತೀರ್ಪು ನೀಡಿತು. ಅಂತೆಯೇ ತೆರಿಗೆ ನಿರ್ಧರಣಾ ನೋಟಿಸನ್ನು ರದ್ದುಗೊಳಿಸಿತು.