ಕೋವಿಡ್: ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದ ಬಗ್ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಎಂದ ಕೇಂದ್ರ

ಆಮ್ಲಜನಕದ ಕೊರತೆ ಉಂಟಾದ ಬಗ್ಗೆ ರಾಜ್ಯಸಭಾ ಸದಸ್ಯ ಕಾಂಗ್ರೆಸ್‌ನ ಕೆ ಸಿ ವೇಣುಗೋಪಾಲ್ ಅವರು ಪ್ರಶ್ನೆ ಕೇಳಿದ್ದರು.
Oxygen cylinder
Oxygen cylinder Lineweather.com
Published on

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆ ವೇಳೆ ಆಮ್ಲಜನಕ ಕೊರತೆಯಿಂದಾಗಿ ಯಾವುದೇ ಸಾವು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಎಂದು ತಿಳಿಸಿದೆ.

ಆಮ್ಲಜನಕದ ಕೊರತೆ ಉಂಟಾದ ಬಗ್ಗೆ ರಾಜ್ಯಸಭಾ ಸದಸ್ಯ ಕಾಂಗ್ರೆಸ್‌ನ ಕೆ ಸಿ ವೇಣುಗೋಪಾಲ್ ಅವರು ಪ್ರಶ್ನೆ ಕೇಳಿದ್ದರು. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ವೇಣುಗೋಪಾಲ್‌ ಕೇಳಿದ್ದರು.

(ಎ) ಎರಡನೇ ಅಲೆ ವೇಳೆ ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್‌ ರೋಗಿಗಳು ರಸ್ತೆ ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದರು ಎಂಬುದು ಸತ್ಯವೇ?

(ಬಿ) ಕಳೆದ ಮೂರು ತಿಂಗಳುಗಳಲ್ಲಿ ರಾಜ್ಯಗಳು ಆಮ್ಲಜನಕಕ್ಕಾಗಿ ಇಟ್ಟ ಒಟ್ಟು ಬೇಡಿಕೆ ಮತ್ತು ಸರಬರಾಜು ಮಾಡಿದ ಒಟ್ಟು ಆಮ್ಲಜನಕ.

(ಸಿ) ಮೂರನೇ ಅಲೆ ಬರಬಹುದು ಎಂದು ತಜ್ಞರು ಅಭಿಪ್ರಾಯಪಟಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಆಮ್ಲಜನಕ ಅಗತ್ಯವಿರುವುದರಿಂದ ದೇಶದಲ್ಲಿ ಆಮ್ಲಜನಕದ ಕೊರತೆ ಉಂಟಾಗದಂತೆ ಸರ್ಕಾರ ಕೈಗೊಂಡ ಕ್ರಮಗಳು?

Also Read
ದೆಹಲಿಗೆ ನಿತ್ಯ 700 ಮೆ.ಟನ್ ಆಮ್ಲಜನಕ ಸರಬರಾಜು ಮಾಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ತಾಕೀತು
Also Read
ಹೆಚ್ಚುವರಿ ಆಮ್ಲಜನಕ ಸಂಗ್ರಹ ಇದ್ದಿದ್ದರೆ ಚಾಮರಾಜನಗರ ದುರಂತ ಸಂಭವಿಸುತ್ತಿರಲಿಲ್ಲ: ಕರ್ನಾಟಕ ಹೈಕೋರ್ಟ್‌

ಕೇಂದ್ರದ ಉತ್ತರ….

"ಆರೋಗ್ಯವು ರಾಜ್ಯ ವಿಷಯವಾಗಿದೆ. ಸಾವುಗಳನ್ನು ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿತ್ತು. ಅದರ ಪ್ರಕಾರ, ಎಲ್ಲಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋವಿಡ್‌ ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತವೆ. ಆದರೂ, ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ನಿರ್ದಿಷ್ಟವಾಗಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿವೆ" ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಭಾರತಿ ಪ್ರವೀಣ್ ಪವಾರ್ ನೀಡಿದ ಹೇಳಿಕೆ ತಿಳಿಸಿದೆ.

ಕೇಂದ್ರ ಸರ್ಕಾರವು ಕೋವಿಡ್‌ ರೋಗಿಗಳ ಆರೈಕೆಗಾಗಿ 2021ರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ರಾಜ್ಯಗಳನ್ನು ಬೆಂಬಲಿಸಿದ್ದು ವೈದ್ಯಕೀಯ ಆಮ್ಲಜನಕ ಮತ್ತಿತರ ಬಳಕೆಯ ವಸ್ತುಗಳನ್ನು ಪೂರೈಸುವುದೂ ಒಳಗೊಂಡಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

Also Read
ಆಮ್ಲಜನಕ ಕೊರತೆ: ನ್ಯಾಯಾಂಗ ನಿಂದನೆ ಏಕೆ ಹೂಡಬಾರದು ಎಂಬುದಕ್ಕೆ ಕಾರಣ ಕೊಡಿ ಎಂದು ಕೇಂದ್ರಕ್ಕೆ ಕೇಳಿದ ದೆಹಲಿ ಹೈಕೋರ್ಟ್

ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪಟ್ಟಿಯೊಂದನ್ನು ಸರ್ಕಾರ ನೀಡಿದೆ:

  1. ಆಗಸ್ಟ್ 2020ರಲ್ಲಿ 5,700 ಮೆ.ಟನ್.ಗಳಷ್ಟಿದ್ದ . ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಉತ್ಪಾದನೆಯನ್ನು ಮೇ 2021 ರಲ್ಲಿ 9,690 ಮೆ.ಟನ್.ಗಳಿಗೆ ಹೆಚ್ಚಿಸಲಾಗಿದೆ.

  2. ಕೈಗಾರಿಕೆಗಳು ಆಮ್ಲಜನಕ ಬಳಸುವುದರ ಮೇಲೆ ನಿರ್ಬಂಧ ಹೇರಲಾಗಿದ್ದು ಕಂಟೇನರ್‌ಗಳ ಲಭ್ಯತೆಯನ್ನು ಹೆಚ್ಚಿಸಲಾಗಿದೆ.

  3. ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಬಂಧಿತ ಸಚಿವಾಲಯಗಳು, ದ್ರವ ಆಮ್ಲಜನಕದ ತಯಾರಕರು / ಪೂರೈಕೆದಾರರು ಮುಂತಾದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ವೈದ್ಯಕೀಯ ಆಮ್ಲಜನಕದ ವಿತರಣೆಗಾಗಿ ಕ್ರಿಯಾತ್ಮಕ ಮತ್ತು ಪಾರದರ್ಶಕ ಚೌಕಟ್ಟನ್ನು ಸಿದ್ಧಪಡಿಸಲಾಯಿತು. ಇದಲ್ಲದೆ, ಆನ್‌ಲೈನ್ ಡಿಜಿಟಲ್ ಪರಿಹಾರಗಳನ್ನು ಕಂಡುಕೊಳ್ಳಲಾಯಿತು. ಎಲ್ಲಾ ವೈದ್ಯಕೀಯ ಸೌಲಭ್ಯಗಳಿಂದ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ಕಂಡುಹಿಡಿಯಲು ಮತ್ತು ಅವುಗಳ ಸಾಗಣೆಯನ್ನು ಪತ್ತೆಹಚ್ಚಲು ಆಮ್ಲಜನಕ ಬೇಡಿಕೆ ಕ್ರೋಢೀಕರಣ ವ್ಯವಸ್ಥೆ ಮತ್ತು ಆಮ್ಲಜನಕದ ಡಿಜಿಟಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು (ಒಡಿಟಿಎಸ್) ಅಭಿವೃದ್ಧಿಪಡಿಸಲಾಗಿದೆ.

  4. ವೈದ್ಯಕೀಯ ಆಮ್ಲಜನಕ ವ್ಯರ್ಥವಾಗುವುದನ್ನು ತಪ್ಪಿಸಲು, ಆಮ್ಲಜನಕದ ತರ್ಕಬದ್ಧ ಬಳಕೆಯ ಕುರಿತು ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 25, 2020ರಂದು ನೀಡಲಾಯಿತು. ಇವುಗಳನ್ನು ಮತ್ತಷ್ಟು ಪರಿಷ್ಕರಿಸಿ 2021ರ ಏಪ್ರಿಲ್ 25 ರಂದು ರಾಜ್ಯಗಳಿಗೆ ಒದಗಿಸಲಾಯಿತು.

  5. ಇದಲ್ಲದೆ, ಆಮ್ಲಜನಕ ಸಾಧನಗಳಾದ ಆಮ್ಲಜನಕ ಸಿಲಿಂಡರ್‌ಗಳು, ಸಾಂದ್ರಕಗಳು ಮತ್ತು ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್‌ಎ) ಆಮ್ಲಜನಕ ಉತ್ಪಾದನಾ ಘಟಕಗಳನ್ನು ರಾಜ್ಯಗಳಿಗೆ ಒದಗಿಸಲಾಯಿತು. ಒಟ್ಟು 4,02,517 ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದೆ / ಸಂಗ್ರಹಿಸಲಾಗುತ್ತಿದೆ ಮತ್ತು ರಾಜ್ಯಗಳಿಗೆ ವಿತರಿಸಲಾಗುತ್ತಿದೆ. ಅಲ್ಲದೆ, 1,222 ಪಿಎಸ್ಎ ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 2021ರ ಜುಲೈ 15ರಂತೆ 237 ಘಟಕಗಳನ್ನು ಕಾರ್ಯಾರಂಭ ಮಾಡಲಾಗಿದೆ. ಇದಲ್ಲದೆ, 295 ಪಿಎಸ್ಎ ಸ್ಥಾವರಗಳನ್ನು ವಿವಿಧ ಸಚಿವಾಲಯಗಳು ಸ್ಥಾಪಿಸುತ್ತಿವೆ. ರಾಜ್ಯಮಟ್ಟದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

  6. ರಾಜ್ಯಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕದ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ತುರ್ತು ಕೋವಿಡ್‌ ಪ್ಯಾಕೇಜ್ ಭಾಗ -2ರ ಅಡಿಯಲ್ಲಿ, 1,050 ದ್ರವ ವೈದ್ಯಕೀಯ ಆಮ್ಲಜನಕ ಟ್ಯಾಂಕ್‌ಗಳು ಮತ್ತು ಎಂಜಿಪಿಎಸ್ ಜೊತೆಗೆ ತಲಾ 80 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ.

Kannada Bar & Bench
kannada.barandbench.com