ಕೋವಿಡ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ವ್ಯಾಪಾರೋದ್ಯಮಿಗಳಿಗಾಗಿ ಹೊರಡಿಸಿದ್ದ ʼಬ್ರೇಕ್ ದ ಚೈನ್ʼ ಮಾರ್ಗಸೂಚಿ ಉಲ್ಲಂಘಿಸಿರುವ ಇ ಕಾಮರ್ಸ್ ಉದ್ಯಮಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಸೂಚಿಸಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇ-ಕಾಮರ್ಸ್ ಉದ್ಯಮದ ವಿರುದ್ಧ ಕ್ರಮ ಕೋರಿ ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಸ್ಥೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಇ- ಕಾಮರ್ಸ್ ಸೇವೆ ಒದಗಿಸುವವರಿಗೆ ಕೇವಲ ಅಗತ್ಯ ಸರಕುಗಳನ್ನು ಪೂರೈಸಲು ಸೂಚಿಸಲಾಗಿದ್ದರೂ ಬೇರೆ ಸರಕುಗಳನ್ನು ಪೂರೈಸಲಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಈ ಕುರಿತಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿಗಳಾದ ಆರ್ ಡಿ ಧನೂಕ ಮತ್ತು ಮಧವ್ ಜೆ ಜಾಮ್ದಾರ್ ಅವರಿದ್ದ ಪೀಠ ತಿಳಿಸಿತು.
ಒಂದು ಕೋಟಿ ಕೋವಿಡ್ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ರಾಜ್ಯ ಹೈಕೋರ್ಟ್‌ಗೆ ತಿಳಿಸಿತು. ಭಾರತಕ್ಕೆ ಲಸಿಕೆ ಒದಗಿಸಲು ಅಂತರರಾಷ್ಟ್ರೀಯ ಕಂಪೆನಿಗಳು ನಿಧಾನ ಧೋರಣೆ ಅನುಸರಿಸುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಔಷಧ ಅನುಮೋದನೆ ಪ್ರಕ್ರಿಯೆಯನ್ನು ಸಡಿಲಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಸೂಚಿಸಿತು.
ರಾಜ್ಯದ ಎಂಟು ಕೋಟಿ ಜನತೆಗೆ ಲಸಿಕೆ ಒದಗಿಸಲು ತುರ್ತು ಅಗತ್ಯದ ಆಧಾರದ ಮೆಲೆ ಜಾಗತಿಕ ಟೆಂಡರ್ ಕರೆಯುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಲಾಗಿದೆ.
ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ (ಎಂಜೆಪಿಜೆವೈ) ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎಐ) ಅಡಿಯಲ್ಲಿ ಬಡವರಿಗೆ ಮುಕೋರ್ಮೈಕೋಸಿಸ್‌ಗೆ (ಕಪ್ಪು ಶಿಲೀಂಧ್ರ ಕಾಯಿಲೆ) ಉಚಿತ ಚಿಕಿತ್ಸೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠಕ್ಕೆ ಸೋಮವಾರ ತಿಳಿಸಿದೆ. ಇದೇ ವೇಳೆ ಯೋಜನೆಗೆ ವ್ಯಾಪಕ ಪ್ರಚಾರ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಕರೆ ನೀಡಿದೆ.
ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲು ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳು ಮನ ಬಂದಂತೆ ಶುಲ್ಕ ವಿಧಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ನ್ಯಾಯಮೂರ್ತಿಗಳಾದ ಆರ್ ವಿ ಘುಗೆ ಮತ್ತು ಬಿ ಯು ದೇಬದ್ವರ್ ಅವರಿದ್ದ ಪೀಠ ಇದೇ ವೇಳೆ ಆದೇಶಿಸಿತು. 130 ಆಸ್ಪತ್ರೆಗಳನ್ನು ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ ಗುರುತಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.