ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಪರಿಸ್ಥಿತಿಯ ಕುರಿತು ಗುರುವಾರ ಏನೇನು ಹೇಳಿವೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.
ಕೋವಿಡ್ ಸಾಂಕ್ರಾಮಿಕತೆ ನಡುವೆ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ, ರೆಮಿಡಿಸಿವರ್ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ಹಲವು ನಿರ್ದಿಷ್ಟ ನಿರ್ದೇಶನಗಳನ್ನು ಕರ್ನಾಟಕ ಹೈಕೋರ್ಟ್ ನೀಡಿದೆ.
ನಿರ್ದಿಷ್ಟ ಸಮಯದೊಳಗೆ ಪರೀಕ್ಷೆಯ ವರದಿ ನೀಡಲು ವಿಫಲವಾಗುವುದು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದನ್ನು ಸೂಕ್ಷ್ಮವಾಗಿ ಕಾರ್ಯಗತಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. 24 ತಾಸುಗಳ ಒಳಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶದ ವರದಿ ನೀಡದ ಪ್ರಯೋಗಾಲಯದ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಗೆ ಸಂಬಂಧಿಸಿದಂತೆ ರಾಜಧಾನಿಗೆ ಆಮ್ಲಜನಕವನ್ನು ಪೂರೈಸುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೆಹಲಿ ಹೈಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ನಡೆಸಿತು. “ಏಪ್ರಿಲ್ 21ರ ಆಮ್ಲಜನಕ ಹಂಚಿಕೆ ಆದೇಶದ ಕಟ್ಟುನಿಟ್ಟಿನ ಅನುಸರಣೆ, ವಿಪತ್ತು ನಿರ್ವಹಣಾ ಕಾಯಿದೆಯಡಿ ಏಪ್ರಿಲ್ 22ರಂದು ಅಂಗೀಕರಿಸಲ್ಪಟ್ಟ ತನ್ನದೇ ಆದೇಶ ಮತ್ತು ಏಪ್ರಿಲ್ 21ರ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಕಟ್ಟುನಿಟ್ಟಾದ ಅನುಸರಣೆ ಖಚಿತಪಡಿಸಿಕೊಳ್ಳಲು ವಿಪತ್ತು ನಿರ್ವಹಣೆಯ ಅಡಿಯಲ್ಲಿ ಇದನ್ನು ಅಂಗೀಕರಿಸಲಾಗಿದೆ. ಈ ಆದೇಶಗಳನ್ನು ಪಾಲಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಲೋಪವೆಸಗಿದಲ್ಲಿ ಹೆಚ್ಚಿನ ಪ್ರಾಣಹಾನಿಗೆ ಕಾರಣವಾಗುವ ಸಾಧ್ಯತೆ ಇದೆ” ಎಂದು ಪೀಠ ಹೇಳಿದೆ.
“ನೀವು ನಮ್ಮ ಆದೇಶಕ್ಕಾಗಿ ಕಾಯುವ ಅಗತ್ಯವಿಲ್ಲ. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರ ಜೊತೆ ಒಮ್ಮೆ ನೀವು ಮಾತನಾಡಿದರೆ ಅವರು ಕೆಲಸ ಮಾಡುತ್ತಾರೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠ ಸೂಚಿಸಿತು. ಕೋವಿಡ್ ಸಂಬಂಧಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆಯ ಬಗ್ಗೆ ಗಮನಸೆಳೆದಾಗ ಪೀಠವು “ಸದರಿ ಪ್ರಕರಣ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆಯಾಗುವವರೆಗೂ ನಾವು ಇದನ್ನು ಮುಂದೂಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿತು.
ದೆಹಲಿಯ ರೋಹಿಣಿಯಲ್ಲಿರುವ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ತುರ್ತಾಗಿ ಅತ್ಯಂತ ಅಗತ್ಯವಾಗಿರುವ ಆಮ್ಲಜನಕ ಪೂರೈಸುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಬೆಳಿಗ್ಗೆ 10 ಗಂಟೆ ವೇಳೆಗೆ ಮುಂದಿನ ಒಂದು ತಾಸಿಗೆ ಆಗುವಷ್ಟು ಲಿಕ್ವಿಡ್ ವೈದ್ಯಕೀಯ ಆಮ್ಲಜನಕ ಇಟ್ಟುಕೊಂಡಿತ್ತು. ಬಳಿಕ ಹೇಗೋ ಮತ್ತಷ್ಟು ಗಂಟೆಗಳಿಗೆ ಆಗುವಷ್ಟು ಆಮ್ಲಜನಕದ ವ್ಯವಸ್ಥೆ ಮಾಡಿಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಅದು ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು.
ಕೋವಿಡ್ ಸಾಂಕ್ರಾಮಿಕತೆಯಿಂದ ನ್ಯಾಯಾಲಯದ ಚಟುವಟಿಕೆಗಳಿಗೆ ತೀವ್ರ ತರಹದ ಸಮಸ್ಯೆಯಾಗಿದ್ದು, ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಕೋವಿಡ್‌ಗೆ ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ವರದಿ ಮಾಡುವಾಗ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಗುರುವಾರ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಹೀಗೆ ಹೇಳಿದೆ. ನ್ಯಾಯಾಲಯವು ನಿರಾಸೆಯಿಂದ ಕೆಲವೊಂದು ಹೇಳಿಕೆಗಳನ್ನು ನೀಡಬಹುದು. ಇವುಗಳನ್ನು ಉದ್ರೇಕಕಾರಿಯಾಗಿ ಬಿಂಬಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ. “ಉದ್ರೇಕಕಾರಿಯಾಗಿ ಸುದ್ದಿ ಮಾಡುವ ಸಂದರ್ಭ ಇದಲ್ಲ. ಅತ್ಯಂತ ನಿರಾಸೆ ಮತ್ತು ಬೇಸರದಿಂದ ಕೆಲವೊಮ್ಮೆ ನಾವು ಹೇಳಿಕೆ ನೀಡುತ್ತೇವೆ. ಇದನ್ನೇ ತಲೆಬರಹವನ್ನಾಗಿಸಿ ಟಿಆರ್‌ಪಿ ಹೆಚ್ಚಿಸುವ ಕೆಲಸ ಮಾಡುವುದು ಸರಿಯಲ್ಲ” ಎಂದಿದ್ದಾರೆ. “ಮೂರ್ನಾಲ್ಕು ನ್ಯಾಯಮೂರ್ತಿಗಳು, ಸಿಬ್ಬಂದಿ ಕೋವಿಡ್ ಸೋಂಕಿತರಾಗಿದ್ದು, ಕೆಲವರು ವಿಧಿವಶರಾಗಿದ್ದಾರೆ. ಹೀಗಾಗಿ ಅತ್ಯಂತ ಸೂಕ್ಷ್ಮತೆಯಿಂದ ವರ್ತಿಸಿ. ನಾವು ಅತ್ಯಂತ ಕಷ್ಟದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ” ಎಂದಿದ್ದಾರೆ.