[ಹಿಜಾಬ್ ತೀರ್ಪು] ನಟ ಚೇತನ್, ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಎಜಿ ಸಮ್ಮತಿ

ಯೆಚೂರಿ ಮತ್ತು ಅತಾವುಲ್ಲಾ ತೀರ್ಪನ್ನು ಟೀಕಿಸಿದ್ದಾರೆಯೇ ವಿನಾ ತೀರ್ಪು ನೀಡಿರುವ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಿಲ್ಲ. ಹೀಗಾಗಿ, ಅವರ ವಿರುದ್ಧ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿರುವ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದಿರುವ ಎಜಿ.
Actor Chetan and Karnataka HC
Actor Chetan and Karnataka HC

ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪ ಸಂಬಂಧ ಕನ್ನಡ ಚಿತ್ರನಟ ಚೇತನ್‌ ಕುಮಾರ್‌ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್‌ ಜಮಾತ್‌ ಅಧ್ಯಕ್ಷ ಆರ್‌ ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಈಚೆಗೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ.

ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಚೇತನ್‌, ರಹಮತುಲ್ಲಾ, ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಹಾಗೂ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 15(1)(ಬಿ) ಅಡಿ ಕ್ರಮಕೈಗೊಳ್ಳಲು ಅನುಮತಿಸುವಂತೆ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್‌ ಭಾರದ್ವಾಜ್‌ ಮನವಿ ಮಾಡಿದ್ದರು.

ನ್ಯಾಯಾಂಗ ನಿಂದನೆಗೆ ಅನುಮತಿಸಿರುವ ತಮ್ಮ ಸಮ್ಮತಿ ಪತ್ರದಲ್ಲಿ ಅಡ್ವೊಕೇಟ್‌ ಜನರಲ್‌ ಅವರು, ನ್ಯಾಯಾಂಗ ನಿಂದನೆಗೆ ಕಾರಣವಾಗಿರುವ ನಟ ಚೇತನ್‌ ಕುಮಾರ್‌ ಅವರ ಟ್ವೀಟ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಈ ಟ್ವೀಟ್‌ ಅನ್ನು ನಾನು ಮಾಡಿದ್ದೆ - (ಅತ್ಯಾಚಾರವಾದ ನಂತರ ನಿದ್ರಿಸುವುದು ಭಾರತೀಯ ಮಹಿಳೆಗೆ ಸರಿ ಎನಿಸುವುದಿಲ್ಲ. ಅವರ ಮೇಲೆ ಹಲ್ಲೆಯಾದಾಗ ನಡೆದುಕೊಳ್ಳುವ ರೀತಿ ಅದಲ್ಲ ಎಂದು ನ್ಯಾ. ಕೃಷ್ಣ ದೀಕ್ಷಿತ್‌ ಅವರು ಆರೋಪಿ ಬಿ ರಾಕೇಶ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು). ನ್ಯಾ. ಕೃಷ್ಣ ದೀಕ್ಷಿತ್‌ ಅವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಹೇಳಿಕೆ ನೀಡಿದ್ದರು. ಈಗ ಅದೇ ನ್ಯಾಯಮೂರ್ತಿ ಶಾಲೆಗಳಲ್ಲಿ ಹಿಜಾಬ್‌ ಧರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅವರಿಗೆ ಇದಕ್ಕೆ ಅಗತ್ಯವಾದ ಸ್ಪಷ್ಟತೆ ಇದೆಯೇ?" ಎಂದು ಟ್ವೀಟ್‌ ಮಾಡಿದ್ದರು. ಇದು ಕೀಳಾದ, ಅಪಮಾನಕರವಾದ ಹಾಗೂ ದುರುದ್ದೇಶಪೂರಿತ ಹೇಳಿಕೆಯಾಗಿದ್ದು, ಕ್ಷಮಾರ್ಹತೆಯ ವ್ಯಾಪ್ತಿಯನ್ನು ಮೀರಿದುದಾಗಿದೆ ಎಂದಿದ್ದಾರೆ.

ಮುಂದುವರೆದು, ಇದು (ಚೇತನ್‌ ಅವರ ಟ್ವೀಟ್‌) ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ಅರ್ಹತೆ ಮತ್ತು ನ್ಯಾಯಪರತೆಯ ಬಗ್ಗೆ ಜನತೆಯಲ್ಲಿ ಶಂಕೆಯನ್ನು ಮೂಡಿಸುತ್ತದೆ. ಇದು ನ್ಯಾಯಮೂರ್ತಿಗಳು ನ್ಯಾಯಿಕ ಕರ್ತವ್ಯ ನಿಭಾಯಿಸಲು ಮುಜುಗರದ ಸನ್ನಿವೇಶ ಸೃಷ್ಟಿಸುತ್ತದೆ. ಉಲ್ಲೇಖಿಸಲಾಗಿರುವ ಟ್ವೀಟ್‌ ಸೂಕ್ತವಲ್ಲದ ಉದ್ದೇಶವನ್ನು ನ್ಯಾಯಮೂರ್ತಿಗಳಿಗೆ ಆರೋಪಿಸುತ್ತದೆ. ಹೀಗಾಗಿ, ನಟ ಚೇತನ್‌ ಅವರು ಮಾಡಿರುವ ಟ್ವೀಟ್‌ ಕಾಯಿದೆಯ ಸೆಕ್ಷನ್‌ 2(ಸಿ) ಅಡಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಈ ನೆಲೆಯಲ್ಲಿ ಚೇತನ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಿಗೆ ಅನುಮತಿಸಿದ್ದೇನೆ ಎಂದು ಅಡ್ವೊಕೇಟ್‌ ಜನರಲ್‌ ವಿವರಿಸಿದ್ದಾರೆ.

“ಹಿಜಾಬ್‌ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ಕೊಲೆಯಾದರೆ ಅವರ ಸಾವಿಗೆ ಅವರೇ ಜವಾಬ್ದಾರಿ. ಕೇಂದ್ರ ಸಚಿವ ಅಮಿತ್‌ ಶಾ ಸೂಚನೆಯಂತೆ ಹೈಕೋರ್ಟ್‌ ತೀರ್ಪು ನೀಡಿದೆ” ಎಂದು ಮದುರೈನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ತೌಹೀದ್‌ ಜಮಾತ್‌ನ ರಹಮತುಲ್ಲಾ ನೀಡಿದ್ದ ಹೇಳಿಕೆಯು ನ್ಯಾಯಾಂಗಯ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ) ಅಡಿ ನಿಂದನೆಗೆ ಸಮನಾಗಿದೆ. ಈ ರೀತಿಯ ಹೇಳಿಕೆಯ ಮೂಲಕ ಅವರು ನ್ಯಾಯಾಂಗದ ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ನ್ಯಾಯಿಕ ಸಾಮರ್ಥ್ಯ ಹಾಗೂ ನ್ಯಾಯಮೂರ್ತಿಗಳ ನಿಷ್ಪಕ್ಷಪಾತ ನಿಲುವಿನ ಮೇಲೆ ದಾಳಿ ಮಾಡುವುದರ ಜೊತೆಗೆ ನ್ಯಾಯಾಂಗದ ಘನತೆಗೆ ಕುಂದುಂಟು ಮಾಡಲಾಗಿದೆ ಎಂದು ವಿವರಿಸಲಾಗಿದೆ.

Also Read
[ಹಿಜಾಬ್‌ ತೀರ್ಪು ಪ್ರಶ್ನೆ] ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಎಜಿ ಅನುಮತಿ ಕೋರಿದ ವಕೀಲ ಅಮೃತೇಶ್‌

ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಅವರು” ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವ ಇದು ತಾರತಮ್ಯದಿಂದ ಕೂಡಿದ ತೀರ್ಪು. ತಾರತಮ್ಯರಹಿತವಾಗಿ ಸಮಾನವಾಗಿ ಹಕ್ಕು ಕಲ್ಪಿಸಿರುವುದರಿಂದ ಕೇರಳ ಮಾನವ ಅಭಿವೃದ್ಧಿಯಲ್ಲಿ ಮುಂದಿದೆ” ಎಂದು ನೀಡಿರುವ ಹೇಳಕೆಯು ನ್ಯಾಯಾಂಗ ನಿಂದನೆ ಕಾಯಿದೆ ಅಡಿ ಬರುವುದಿಲ್ಲ. ಇನ್ನು ಸಿಎಫ್‌ಐ ನಾಯಕ ಅತಾವುಲ್ಲಾ ಪುಂಜಾಲಕಟ್ಟೆ ಅವರು “ನ್ಯಾಯಾಲಯವು ತೀರ್ಪು ನೀಡಿದೆಯೇ ವಿನಾ ನ್ಯಾಯದಾನ ಮಾಡಿಲ್ಲ ಎಂದು ನಮಗನ್ನಿಸುತ್ತಿದೆ. ಧಾರ್ಮಿಕ ಪಠ್ಯವನ್ನು ನ್ಯಾಯಾಂಗ ವ್ಯಾಖ್ಯಾನಿಸುವುದು ಎಚ್ಚರಿಕೆ ಗಂಟೆ” ಎಂದು ಹೇಳಿಕೆ ನೀಡಿದ್ದರು. ಯೆಚೂರಿ ಮತ್ತು ಅತಾವುಲ್ಲಾ ಅವರು ತೀರ್ಪನ್ನು ಟೀಕಿಸಿದ್ದಾರೆಯೇ ವಿನಾ ತೀರ್ಪು ನೀಡಿರುವ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿರುವ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಿವರಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com