ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ ಕಣದಲ್ಲಿ ಉಳಿದಿರುವ ಎಂ ಪಿ ದಾರುಕೇಶ್ವರಯ್ಯ ನಾಮಪತ್ರ ಸ್ವೀಕಾರ ಮಾಡಿರುವುದನ್ನು ವಜಾಗೊಳಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಗೂಳಿಹಟ್ಟಿಯ ಆರ್ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರ ಅಣ್ಣನಾದ ದಾರುಕೇಶ್ವರಯ್ಯ ಬೋಗಸ್ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಎಸ್‌ಸಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಣೆ ಹೊತ್ತ ಚುನಾವಣಾಧಿಕಾರಿ ಅವರ ನಾಮಪತ್ರ ಸ್ವೀಕಾರ ಮಾಡಿರುವುದು ಕಾನೂನು ಬಾಹಿರ ಎಂದು ಪೀಠಕ್ಕೆ ವಿವರಿಸಿದರು.
ದಾರುಕೇಶ್ವರಯ್ಯ ಲಿಂಗಾಯತ ಜಂಗಮ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಅವರು ಬೇಡ ಜಂಗಮದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಸುಳ್ಳು ದಾಖಲೆ ನೀಡಿ ಪಡೆಯುವ ಮೂಲಕ ಪರಿಶಿಷ್ಟ ಜಾತಿಯ ಸೌಲಭ್ಯ ಕಬಳಿಸಿದ್ದಾರೆ. ಅವರ ನಾಮಪತ್ರ ಸ್ವೀಕಾರ ಅಕ್ರಮ. ಆದ್ದರಿಂದ, ಅವರ ಹೆಸರನ್ನು ಮತಪತ್ರ ಅಥವಾ ಇವಿಎಂ, ವಿವಿ ಪ್ಯಾಟ್‌ನಲ್ಲಿ ಪ್ರದರ್ಶಿಸದಂತೆ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರು ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ಪೀಠವು ದಾರುಕೇಶ್ವರಯ್ಯ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು, ರಾಜ್ಯದ ಮುಖ್ಯ ಚುನಾವಣಾಧಿಕಾರಿ, ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ ಸೇರಿದಂತೆ ಪ್ರಕರಣದ ಎಲ್ಲಾ ಆರು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.