ವೈದ್ಯಕೀಯ ನಿರ್ಲಕ್ಷ್ಯದ ಸಾವು ಕೊಲೆಗೆ ಸಮನಲ್ಲದ ನರಹತ್ಯೆ ಎನಿಸಿಕೊಳ್ಳದು: ಕೇರಳ ಹೈಕೋರ್ಟ್

ಪ್ರಾಣಕ್ಕೆ ಕುತ್ತು ಒದಗುತ್ತದೆ ಎಂಬ ಅರಿವಿದ್ದೂ ಮಗುವಿಗೆ ಅರಿವಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದ ಪೀಠ ಡಾ. ರಾಜಗೋಪಾಲನ್ ಅವರನ್ನು ಖುಲಾಸೆಗೊಳಿಸಿತು.
ವೈದ್ಯಕೀಯ ನಿರ್ಲಕ್ಷ್ಯದ ಸಾವು ಕೊಲೆಗೆ ಸಮನಲ್ಲದ ನರಹತ್ಯೆ ಎನಿಸಿಕೊಳ್ಳದು: ಕೇರಳ ಹೈಕೋರ್ಟ್
Published on

ಐಪಿಸಿ ಸೆಕ್ಷನ್‌ 304ರ ಅಡಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸುವ ಸಾವು ಸದಾ ಕೊಲೆಗೆ ಸಮನಲ್ಲದ ನರಹತ್ಯೆ ಎನಿಸಿಕೊಳ್ಳುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಡಾ. ಕೆ ರಾಜಗೋಪಾಲನ್‌ ಮತ್ತು ರೇಘಾ ಇನ್ನಿತರರ ನಡುವಣ ಪ್ರಕರಣ].

ಸಾವನ್ನು ತರುವ ಉದ್ದೇಶದಿಂದ ಇಲ್ಲವೇ ಸಾವು ಸಂಭವಿಸುತ್ತದೆ ಎಂದು ತಿಳಿದೂ ಕೃತ್ಯ ಎಸಗಿದ್ದಾಗ ಮಾತ್ರ ವೈದ್ಯಕೀಯ ನಿರ್ಲಕ್ಷ್ಯದಿಂದ ಉಂಟಾಗುವ ಸಾವನ್ನು ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಪರಿಗಣಿಸಬಹುದಾಗಿದೆ ಎಂಬುದಾಗಿ ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್‌ ಅಭಿಪ್ರಾಯಪಟ್ಟರು.

Also Read
ಸರ್ಕಾರ ವಿದೇಶಿ ವೈದ್ಯಕೀಯ ಪದವೀಧರರಿಂದ ಇಂಟರ್ನ್‌ಶಿಪ್‌ ಶುಲ್ಕ ಪಡೆಯುವಂತಿಲ್ಲ: ಕೇರಳ ಹೈಕೋರ್ಟ್

"ವೈದ್ಯಕೀಯ ನಿರ್ಲಕ್ಷ್ಯದ ಕೃತ್ಯದಿಂದ ಸಾವು ಸಂಭವಿಸಿದ್ದರೂ ಕೂಡ, ಸಾವು ತರುವ ಉದ್ದೇಶದಿಂದ ಅಥವಾ ಸಾವು ಸಂಭವಿಸುತ್ತದೆ ಎಂಬ ಅರಿವು ಇಲ್ಲದೆ ಕೃತ್ಯ ಎಸಗಿದ್ದರೆ ಅದು ತನ್ನಷ್ಟಕ್ಕೇ ಕೊಲೆಗೆ ಸಮನಲ್ಲದ ನರಹತ್ಯೆ ಎನಿಸಿಕೊಳ್ಳುವುದಿಲ್ಲ. ವೈದ್ಯಕೀಯ ನಿರ್ಲಕ್ಷ್ಯವನ್ನು ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಕರೆಯಲಾಗದು. ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಲ್ಲಿ, ಸಮಂಜಸವಾದ ಆರೈಕೆ ಮಾಡದೆ ಇರುವುದರಿಂದಾಗಿ ಅಥವಾ ವೈದ್ಯಕೀಯ ವೃತ್ತಿಪರರ ಕರ್ತವ್ಯ ಉಲ್ಲಂಘನೆಯಿಂದಾಗಿ ಸಾವು ಸಂಭವಿಸಿದ್ದರೆ ಆಗ ಸೆಕ್ಷನ್ 304 ಎ ಅನ್ವಯಿಸಬಹುದು" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಕೇರಳದ ಪಾಲಕ್ಕಾಡ್‌ನ ಖಾಸಗಿ ನರ್ಸಿಂಗ್ ಹೋಂನಲ್ಲಿ 2012ರಲ್ಲಿ ಡಾ. ಕೆ. ರಾಜಗೋಪಾಲನ್ ಅವರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಅರಿವಳಿಕೆ ತಜ್ಞರ ಅನುಪಸ್ಥಿತಿಯಲ್ಲಿ ಅರಿವಳಿಕೆ ನೀಡಿದ್ದರಿಂದ ಮಗುವಿಗೆ ಹೃದಯ ಸ್ಥಂಭನವಾಗಿ ಕೆಲ ನಿಮಿಷಗಳಲ್ಲೇ ನಿಧನಾರಾದ ಹಿನ್ನೆಲೆಯಲ್ಲಿ ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 304 ಅಡಿ (ಕೊಲೆಗೆ ಸಮನಲ್ಲದ ನರಹತ್ಯೆ) ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅರಿವಳಿಕೆ ತಜ್ಞರಿಲ್ಲದೆ ಚಿಕಿತ್ಸೆ ನೀಡಿದರೆ ಸಾವಿಗೆ ಕಾರಣವಾಗಬಹುದು ಎಂದು ತಿಳಿದೂ ವೈದ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಮಗುವಿನ ತಾಯಿ ಅಳಲು ತೋಡಿಕೊಂಡಿದ್ದರು.

ಪ್ರಕರಣದಿಂದ ಖುಲಾಸೆಗೊಳಿಸುವಂತೆ ವೈದ್ಯ ಮಾಡಿದ್ದ ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಸುಳ್ಳು ವೈದ್ಯಕೀಯ ವರದಿ: ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ವಾದಗಳನ್ನು ಆಲಿಸಿ ಸಾಕ್ಷ್ಯಗಳನ್ನು ವಿಶ್ಲೇಷಿಸಿದ ನ್ಯಾಯಾಲಯ ಅರಿವಳಿಕೆ ತಜ್ಞರಿಲ್ಲದೆ ಅರಿವಳಿಕೆ ನೀಡುವುದರಿಂದ ರೋಗಿಯ ಸಾವಿಗೆ ಕಾರಣವಾಗಬಹುದು ಎಂದು ವೈದ್ಯರಿಗೆ ತಿಳಿದಿತ್ತು ಅಥವಾ ಅರಿವಿತ್ತು ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತು.

ವೈದ್ಯರು ಅರ್ಹ ಮತ್ತು ಅನುಭವಿ ವೈದ್ಯಕೀಯ ವೃತ್ತಿಪರರಾಗಿದ್ದು, ಅರಿವಳಿಕೆ ವಿಧಾನಗಳ ಬಗ್ಗೆ ಅವರಿಗೆ ತಿಳಿದಿತ್ತು. ತಾವು ಅರಿವಳಿಕೆ ನೀಡಿದರೆ ಅದು ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ಅರಿವಿದ್ದೂ ಮಗುವಿಗೆ ಅರಿವಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದ ಪೀಠ ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಡಾ. ರಾಜಗೋಪಾಲನ್ ಅವರನ್ನು ಖುಲಾಸೆಗೊಳಿಸಿತು.

Kannada Bar & Bench
kannada.barandbench.com