ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು ಹೇಳಿಕೆ: ಹರಿದ್ವಾರ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ

ಉತ್ತರಾಖಂಡದ ಹರಿದ್ವಾರ ನ್ಯಾಯಾಲಯದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಕಮಲ್ ಭದೌರಿಯಾ ನೀಡಿದ ದೂರಿನ ಹಿನ್ನೆಲೆಯಲ್ಲಿ ವಕೀಲ ಅರುಣ್ ಭದೌರಿಯಾ ಅವರು ಪ್ರಕರಣ ದಾಖಲಿಸಿದ್ದಾರೆ.
Rahul Gandhi
Rahul Gandhi Facebook
Published on

ಕಳೆದ ಜನವರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) 'ಇಪ್ಪತ್ತೊಂದನೇ ಶತಮಾನದ ಕೌರವರು' ಎಂದು ದೂಷಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಆರ್‌ಎಸ್‌ಎಸ್ ಕಾರ್ಯಕರ್ತ ಕಮಲ್ ಭದೌರಿಯಾ ಅವರ ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿ ಉತ್ತರಾಖಂಡದ ಹರಿದ್ವಾರ ನ್ಯಾಯಾಲಯದಲ್ಲಿ ವಕೀಲ ಅರುಣ್ ಭದೌರಿಯಾ ಅವರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 12 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

Also Read
ಮೋದಿ ಉಪನಾಮ ವಿವಾದ: ಸುಶೀಲ್ ಕುಮಾರ್ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಪಾಟ್ನಾ ನ್ಯಾಯಾಲಯದ ಸಮನ್ಸ್

“ಇತ್ತೀಚಿನ ದಿನಗಳಲ್ಲಿ ಕೌರವರು ಖಾದಿ ಪ್ಯಾಂಟ್ ಧರಿಸುತ್ತಾರೆ ಮತ್ತು ಕೈಯಲ್ಲಿ ಕೋಲು ಹಿಡಿದುಕೊಳ್ಳುತ್ತಾರೆ” ಎಂದು ಕುರುಕ್ಷೇತ್ರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಆರ್‌ಎಸ್‌ಎಸ್ ವಿರುದ್ಧ ಅತ್ಯಂತ ಅಸಹ್ಯಕರ ಹೇಳಿಕೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

"ಕೌರವರು ಎಂತಹ ಹೇಯ ಕೃತ್ಯ ಎಸಗಿದ್ದಾರೆಂದು ನಿಮಗೆ (ರಾಹುಲ್ ಗಾಂಧಿ) ಸಂಪೂರ್ಣ ಅರಿವಿದೆ. ಆದರೂ ನೀವು ಆರ್‌ಎಸ್‌ಎಸ್‌ನಂತಹ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಸ್ವಯಂ ತ್ಯಾಗದ ಸಂಘವನ್ನು ಕೌರವರು ಎಂದು ಕರೆದಿದ್ದೀರಿ. ಜೊತೆಗೆ ʼಈ ಜನ ಹರಹರ ಮಹಾದೇವ್ ಎನ್ನುವುದಿಲ್ಲ ಜೈಶ್ರೀರಾಮ್‌ ಎನ್ನುತಾರೆʼ ಎಂದಿದ್ದೀರಿ ಇದು ನಿಮ್ಮ ಜಿಗುಪ್ಸೆಯ ಮನಸ್ಥಿತಿಯನ್ನು ತೋರಿಸುತ್ತದೆ” ಎಂದಿದ್ದಾರೆ.

Also Read
ಅಂದು ರಾಹುಲ್‌ ಆ ಸುಗ್ರೀವಾಜ್ಞೆ ಹರಿದು ಹಾಕದಿದ್ದರೆ ಇಂದು ನಿರಾಳರಾಗಿರುತ್ತಿದ್ದರು!

ಭಾರತ ಎದುರಿಸುತ್ತಿರುವ ಕಷ್ಟದ ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ಹೆಚ್ಚು ಕೊಡುಗೆ ನೀಡಿದ ಸಂಸ್ಥೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.

ಈ ದೇಶ ತಪಸ್ವಿಗಳಿಗೆ ಸೇರಿದ್ದು ಪೂಜಾರಿಗಳದ್ದಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿ ಸನಾತನೀಯರನ್ನು ತಪಸ್ವಿ, ಪೂಜಾರಿ ಎಂದು ವಿಭಜಿಸಿದ್ದು ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದರು.

ಮತ್ತೊಂದೆಡೆ ʼಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವಿದೆʼ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರು 2019ರಲ್ಲಿ ಹೂಡಿದ್ದ ಮೊಕದ್ದಮೆ ಕುರಿತಂತೆ ಏಪ್ರಿಲ್ 12ರಂದು ನಡೆಯಲಿರುವ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಪಾಟ್ನಾ ನ್ಯಾಯಾಲಯ ಶುಕ್ರವಾರ ಸಮನ್ಸ್‌ ನೀಡಿದೆ.

Kannada Bar & Bench
kannada.barandbench.com