ದೆಹಲಿ ಲೆ. ಗವರ್ನರ್‌ ಹೂಡಿದ್ದ ಮಾನಹಾನಿ ದಾವೆ: ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

2006ರಲ್ಲಿ ಇಂಡಿಯಾ ಟಿವಿ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಕ್ಸೇನಾ ಅವರು ಪಾಟ್ಕರ್ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಿದ್ದರು.
Medha Patkar and Delhi LG VK Saxena
Medha Patkar and Delhi LG VK Saxena
Published on

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ ಎರಡು ದಶಕಗಳಷ್ಟು ಹಳೆಯದಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.

ಏಪ್ರಿಲ್ 20, 2006 ರಂದು ಇಂಡಿಯಾ ಟಿವಿ ಸುದ್ದಿವಾಹಿನಿಯ "ಬ್ರೇಕಿಂಗ್ ನ್ಯೂಸ್" ಕಾರ್ಯಕ್ರಮದ ವೇಳೆ ಪಾಟ್ಕರ್ ಅವರು ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸಕ್ಸೇನಾ ಅವರು ಸಂಶಯಕ್ಕೆ  ಆಸ್ಪದವಿಲ್ಲದೆ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ  ನ್ಯಾಯಾಧೀಶ ರಾಘವ್ ಶರ್ಮಾ ತೀರ್ಪು ನೀಡಿದ್ದಾರೆ.

Also Read
ಭಾರತ- ಪಾಕ್ ನಡುವಿನ ದ್ವೇಷ ಕೊನೆಗೊಳ್ಳಬೇಕು ಎಂದು ಬಯಸುವುದು ದೇಶದ್ರೋಹವಲ್ಲ: ಹಿಮಾಚಲ ಪ್ರದೇಶ ಹೈಕೋರ್ಟ್

“ಆರೋಪಿಯ ವಿರುದ್ಧ ಪ್ರಕರಣವನ್ನು ಸಂಶಯಕ್ಕೆ ಅವಕಾಶವಿಲ್ಲದಂತೆ ಸಾಬೀತುಪಡಿಸುವಲ್ಲಿ ದೂರುದಾರರು ವಿಫಲರಾಗಿದ್ದಾರೆ. ಆದ್ದರಿಂದ ಐಪಿಸಿ ಸೆಕ್ಷನ್ 500 ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧದಿಂದ ಆರೋಪಿತೆ ಮೆಧಾ ಪಾಟ್ಕರ್ ಅವರನ್ನು ಖುಲಾಸೆ ಮಾಡಲಾಗುತ್ತಿದೆ,” ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.

 ಪ್ರಕರಣ 2006ರಷ್ಟು ಹಿಂದಿನದು. ಆಗ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ (ಎನ್‌ಸಿಸಿಎಲ್) ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು, ಏಪ್ರಿಲ್ 20, 2006ರಂದು ಪ್ರಸಾರವಾದ ಇಂಡಿಯಾ ಟಿವಿಯ “ಬ್ರೇಕಿಂಗ್ ನ್ಯೂಸ್” ಕಾರ್ಯಕ್ರಮದಲ್ಲಿ ತಮ್ಮ ವಿರುದ್ಧ ಮಾನನಷ್ಟಕರ ಹೇಳಿಕೆ ನೀಡಲಾಗಿದೆ ಎಂದು ದೂರು ದಾಖಲಿಸಿದ್ದರು.

ಸರ್ದಾರ್ ಸರೋವರ ನಿಗಮ್‌ನಿಂದ ತಾವು ನಾಗರಿಕ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆದಿದ್ದಾರೆ ಎಂದು ಮೇಧಾ ಆರೋಪಿಸಿದ್ದು ಇದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ಸಕ್ಸೇನಾ ಹೇಳಿದ್ದರು. ಇದಕ್ಕೆ ತಮ್ಮ ಬಳಿ ಸಿಡಿ ಸಾಕ್ಷ್ಯವಿದೆ ಎಂದು ಮೇಧಾ ಹೇಳಿದ್ದರೂ ಅದನ್ನು ಹಾಗೂ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ಅವರು ನೀಡಿಲ್ಲ. ಹೀಗಾಗಿ ಮಾನನಷ್ಟ ಪ್ರಕರಣ ದಾಖಲಿಸಬೇಕಾಯಿತು ಎಂದಿದ್ದರು.

ಕ್ರಿಮಿನಲ್‌ ಪ್ರಕರಣವನ್ನು ಮೊದಲಿಗೆ ಅಹಮದಾಬಾದ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದು, ನಂತರ 2010ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಅದನ್ನು ದೆಹಲಿಗೆ ವರ್ಗಾಯಿಸಲಾಗಿತ್ತು.

ಪಾಟ್ಕರ್ ಅವರ ಮಾನನಷ್ಟ ಹೇಳಿಕೆಗಳನ್ನು ಒಳಗೊಂಡಿರುವ ಮೂಲ ದೃಶ್ಯಾವಳಿಗಳನ್ನು ಅಥವಾ ಅದನ್ನು ರೆಕಾರ್ಡ್ ಮಾಡುವ ಸಾಧನವನ್ನು ಸಕ್ಸೇನಾ ಅವರು ಸಲ್ಲಿಸಿಲ್ಲ ಮತ್ತು ಆದ್ದರಿಂದ, ಪಾಟ್ಕರ್ ನೀಡಿದ ಹೇಳಿಕೆಗಳು ಸಾಬೀತಾಗಿಲ್ಲ ಎಂದು ನ್ಯಾಯಾಧೀಶ ಶರ್ಮಾ ಇಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಯಾವುದೇ ನಿರ್ಧಾರ ತೆಗೆದುಕೊಳ್ಳಲು, ಪತ್ರಿಕಾಗೋಷ್ಠಿಯ ಸಂಪೂರ್ಣ ವೀಡಿಯೊ ಮತ್ತು ಆಡಿಯೊವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಅಥವಾ ಆ ಪತ್ರಿಕಾಗೋಷ್ಠಿ/ಸಂದರ್ಶನದ ಪ್ರತ್ಯಕ್ಷದರ್ಶಿಗಳು ಅದರ ಬಗ್ಗೆ ವಿವರಣೆ ನೀಡುವುದು ಅತ್ಯಗತ್ಯ ಎಂದು ಅದು ಹೇಳಿದೆ.

"ಆ ಸಂದರ್ಶನದ ಸಂಪೂರ್ಣ ಕ್ಲಿಪ್/ತುಣುಕನ್ನು ಪರಿಶೀಲಿಸದೆ, ಆರೋಪಿಯ ಮಾತಿನ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ತೀರ್ಪು ನೀಡಿದೆ.  

Also Read
ಉನ್ನಾವ್ ಅತ್ಯಾಚಾರ ಪ್ರಕರಣ: ಬಿಜೆಪಿ ಮಾಜಿ ಶಾಸಕ ಸೆಂಗರ್ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ

ವಿ.ಕೆ.ಸಕ್ಸೇನಾ ಪರ ವಕೀಲ ಗಜಿಂದರ್ ಕುಮಾರ್, ಕಿರಣ್, ಚಂದ್ರಶೇಖರ್, ದೃಷ್ಟಿ ಹಾಗೂ ಸೋಮ್ಯಾ ಹಾಗೂ ಮೇಧಾ ಪಾಟ್ಕರ್ ಪರವಾಗಿ ವಕೀಲರಾದ ಶ್ರೀದೇವಿ ಪಣಿಕ್ಕರ್ ಮತ್ತು ಅಭಿಮಾನ್ ಶ್ರೇಷ್ಠಾ ವಾದ ಮಂಡಿಸಿದರು.

ಇದಕ್ಕೂ ಮೊದಲು, ಸಕ್ಸೇನಾ ಸಲ್ಲಿಸಿದ್ದ ಪ್ರತ್ಯೇಕ ಮಾನನಷ್ಟ ಮೊಕದ್ದಮೆಯಲ್ಲಿ ಪಾಟ್ಕರ್ ದೋಷಿ ಎಂದು ಘೋಷಿಸಲಾಗಿತ್ತು . ವಿಚಾರಣಾ ನ್ಯಾಯಾಲಯದ ಆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿತ್ತು.

Kannada Bar & Bench
kannada.barandbench.com