ಸೋದರ ಸಂಬಂಧಿಯ ಮದುವೆ: ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಯುಎಪಿಎ ಕಾಯಿದೆಯಡಿ 2020ರಲ್ಲಿ ಬಂಧಿತರಾಗಿದ್ದ ಅವರು ಅಂದಿನಿಂದ ಸೆರೆವಾಸದಲ್ಲಿದ್ದರು.
Umar Khalid
Umar Khalid
Published on

ದೆಹಲಿ ಗಲಭೆ ಸಂಚಿನ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರಿಗೆ ದೆಹಲಿ ನ್ಯಾಯಾಲಯ 7 ದಿನಗಳ ಮಧ್ಯಂತರ ಜಾಮೀನು ನೀಡಿದೆ.

ತಮ್ಮ ಸೋದರ ಸಂಬಂಧಿಯ ವಿವಾಹದಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 28ರಿಂದ ಜನವರಿ 3 ರವರೆಗೆ ಕಡ್‌ಕಡ್‌ಡೂಮ ನ್ಯಾಯಾಲಯದ ನ್ಯಾಯಾಧೀಶ ಸಮೀರ್‌ ಬಾಜಪೇಯಿ ಅವರು ಅವರು ಮಧ್ಯಂತರ ಜಾಮೀನು ನೀಡಿದರು.

Also Read
ದೆಹಲಿ ಗಲಭೆ ಸಂಚು ಪ್ರಕರಣ: ನಾಳೆ ಉಮರ್‌ ಖಾಲಿದ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ ದೆಹಲಿ ಹೈಕೋರ್ಟ್

"ಅರ್ಜಿದಾರ ತನ್ನ ಮೊದಲ ಸೋದರಸಂಬಂಧಿಯ ಮದುವೆಗೆ ಹಾಜರಾಗಲು ಮತ್ತು ಅವರ ಸಂಬಂಧಿಕರನ್ನು ಭೇಟಿಯಾಗಲು ಬಯಸುತ್ತಾರೆ ಎಂಬ ಅಂಶವನ್ನು ಪರಿಗಣಿಸಿ, ನ್ಯಾಯಾಲಯ ಆತ ಬಯಸಿದ ಪರಿಹಾರ ನೀಡುವುದು ನ್ಯಾಯಯುತ ಮತ್ತು ಸೂಕ್ತವೆಂದು ಪರಿಗಣಿಸುತ್ತದೆ" ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

₹ 20,000 ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿಯನ್ನು ಒದಗಿಸುವಂತೆ ಖಾಲಿದ್‌ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿ ಅಥವಾ ವ್ಯಕ್ತಿಯನ್ನು ಸಂಪರ್ಕಿಸಬಾರದು ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಎಂದು ಖಾಲಿದ್‌ ಅವರಿಗೆ ನಿರ್ಬಂಧ ವಿಧಿಸಲಾಗಿದೆ.

ಇದಲ್ಲದೆ, ಅವರು ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಭೇಟಿಯಾಗಬೇಕು ಮತ್ತು ತನ್ನ ಮನೆಯಲ್ಲಿ ಅಥವಾ ಮದುವೆ ಸಮಾರಂಭಗಳು ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಮಾತ್ರವೇ ಉಳಿಯಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Also Read
ಸಹೋದರಿ ವಿವಾಹದಲ್ಲಿ ಭಾಗಿಯಾಲು ಉಮರ್‌ ಖಾಲಿದ್‌ಗೆ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು. ಅಂದಿನಿಂದ ಅವರು ಸೆರೆವಾಸದಲ್ಲಿದ್ದರು.

ಖಾಲಿದ್‌ ಸಲ್ಲಿಸಿರುವ ನಿಯಮಿತ ಜಾಮೀನು ಅರ್ಜಿ ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.

Kannada Bar & Bench
kannada.barandbench.com