ಸಿಬಿಐ ಪ್ರಕರಣ: ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನದಲ್ಲಿ ಕವಿತಾ

ಮಾರ್ಚ್ 15 ರಂದು ಇ ಡಿ ಕವಿತಾ ಅವರನ್ನು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು ಸಿಬಿಐ ಏಪ್ರಿಲ್ 11ರಂದು ವಶಕ್ಕೆ ಪಡೆದಿತ್ತು.
K Kavitha, CBI
K Kavitha, CBIK Kavitha (FB)

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಹೂಡಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರನ್ನು ದೆಹಲಿ ನ್ಯಾಯಾಲಯ ಏಪ್ರಿಲ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಸೋಮವಾರ ಬೆಳಗ್ಗೆ ಈ ಆದೇಶ ಹೊರಡಿಸಿದರು.

ಕವಿತಾ ಅವರನ್ನು ಈ ಹಿಂದೆ ಏಪ್ರಿಲ್ 15 ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು  ಸೋಮವಾರ ಬೆಳಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆ ತನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ಆರೋಪಿಸಿರುವ ಸಿಬಿಐ, ಇನ್ನೂ ಹದಿನಾಲ್ಕು ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತು.

ಕವಿತಾ ಪರ ವಕೀಲ ನಿತೇಶ್ ರಾಣಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸಿಬಿಐಗೆ ಬೇಕಾದಂತೆ ಕವಿತಾ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದರು. ನ್ಯಾಯಾಲಯ ಅಂತಿಮವಾಗಿ ಕವಿತಾ ಅವರನ್ನು ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವುದಾಗಿ ಆದೇಶಿಸಿತು.

ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ಮಾರ್ಚ್ 15ರಂದು ಜಾರಿ ನಿರ್ದೇಶನಾಲಯ (ಇ ಡಿ) ಕವಿತಾ ಅವರನ್ನು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು ಸಿಬಿಐ ಏಪ್ರಿಲ್ 11ರಂದು ವಶಕ್ಕೆ ಪಡೆದಿತ್ತು.

2021-22ರ ದೆಹಲಿ ಅಬಕಾರಿ ನೀತಿಯನ್ನು ಸಗಟು ಮತ್ತು ಚಿಲ್ಲರೆ ಅಬಕಾರಿ ಏಕಸ್ವಾಮ್ಯ ಮತ್ತು ಕಾರ್ಟಲೈಸೇಶನ್‌ಗೆ ಅನುಕೂಲವಾಗುವಂತೆ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಿಬಿಐ  2022ರಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪ್ರಕರಣ ಇದಾಗಿದೆ.

ಕವಿತಾ ಅವರಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರನ್ನು ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈಚೆಗೆ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ದೊರೆತಿದೆ.

Kannada Bar & Bench
kannada.barandbench.com