
ಹಿಂದೂ ದೇವತೆಗಳು ಮತ್ತು ಹಿಂದುತ್ವ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಪತ್ರಕರ್ತ ರಾಣಾ ಅಯ್ಯೂಬ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಟ್ವೀಟ್‌ಗಳು ಕುರಿತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂದು ದೂರಿನ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯ ಪೊಲೀಸ್ ತನಿಖೆಗೆ ಆದೇಶಿಸಿದೆ [ಶ್ರೀಮತಿ ಅಮಿತಾ ಸಚ್‌ದೇವ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ವಕೀಲೆ ಅಮಿತಾ ಸಚ್‌ದೇವ ಅವರು ಸಲ್ಲಿಸಿರುವ ದೂರಿನ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಾಕೇತ್ ನ್ಯಾಯಾಲಯ ಸಂಕೀರ್ಣದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹಿಮಾಂಶು ರಮಣ್ ಸಿಂಗ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ದ್ವೇಷ ಭಾಷಣ), 295 ಎ (ಧಾರ್ಮಿಕ ಭಾವನೆಗಳಿಗೆ ಘಾಸಿ), 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿ ಅಪರಾಧ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಆರೋಪಗಳ ಗಂಭೀರತೆ ಪೊಲೀಸ್ ತನಿಖೆಗೆ ಅರ್ಹವಾಗಿದೆ ಎಂದು ನ್ಯಾಯಾಲಯ ನುಡಿದಿದೆ.
ಅಯ್ಯೂಬ್ ಅವರ ಟ್ವೀಟ್‌ಗಳು ಹಿಂದೂ ದೇವರನ್ನು ಅವಮಾನಿಸುತ್ತದೆ ಮತ್ತು ಭಾರತ ವಿರೋಧಿ ಭಾವನೆಗಳನ್ನು ಹರಡುತ್ತದೆ ಎಂದು ದೂರಿ ಸಚ್‌ದೇವ ಅವರು ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66A ಅಡಿಯಲ್ಲಿ ದೆಹಲಿ ಪೊಲೀಸ್ ಸೈಬರ್ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ತನಿಖೆ ಪ್ರಾರಂಭಿಸುವಲ್ಲಿ ಪೋಲೀಸರ ನಿಷ್ಕ್ರಿಯತೆಯಿಂದಾಗಿ ತಾವು ನ್ಯಾಯಾಲಯ ಕದ ತಟ್ಟಿರುವುದಾಗಿ ಅವರು ಹೇಳಿದ್ದಾರೆ.
ಶ್ರೇಯಾ ಸಿಂಘಾಲ್ ತೀರ್ಪಿನಲ್ಲಿ ಐಟಿ ಕಾಯಿದೆಯ ಸೆಕ್ಷನ್ 66 ಎ ಅಡಿಯ ಅಪರಾಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದರಿಂದ ಅಯ್ಯೂಬ್ ಅವರ ಟ್ವೀಟ್ ಅಸಂಜ್ಞೇಯ ಕೃತ್ಯ ಎಂದೆನಿಸಿಕೊಳ್ಳುತ್ತದೆ ಎಂದು ಸೈಬರ್ ಸೆಲ್ ಪೊಲೀಸರ ಕ್ರಮ ಕೈಗೊಂಡ ವರದಿ (ಎಟಿಆರ್) ಹೇಳಿದೆಯಾದರೂ ಆರೋಪಗಳ ಗಂಭೀರತೆ ಪೊಲೀಸ್ ತನಿಖೆಯ ಅಗತ್ಯವನ್ನು ಹೇಳುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
"ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಸಿಆರ್‌ಪಿಸಿ ಸೆಕ್ಷನ್ 156 (3)ರ ಅಡಿಯಲ್ಲಿ ನ್ಯಾಯಾಂಗ ಅಧಿಕಾರವನ್ನು ಚಲಾಯಿಸುವ ಮೂಲಕ ಪ್ರಸ್ತುತ ಪ್ರಕರಣದಲ್ಲಿ ತನಿಖೆಗೆ ಆದೇಶಿಸುವುದು ಸೂಕ್ತ " ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶದ ಅನುಪಾಲನೆಯ ಸಂಬಂಧ ಇಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.