ನ್ಯಾ. ಚಂದ್ರಚೂಡ್ ಹೇಳಿಕೆ ಆಧರಿಸಿ ಅಯೋಧ್ಯೆ ತೀರ್ಪು ರದ್ದತಿ ಕೋರಿದ್ದ ವಕೀಲಗೆ ದಂಡ ವಿಧಿಸಿದ ದೆಹಲಿ ನ್ಯಾಯಾಲಯ

ಪ್ರಕರಣದಲ್ಲಿ ಪರಿಹಾರ ಕಂಡುಕೊಳ್ಳಲು ದೇವರಲ್ಲಿ ಪ್ರಾರ್ಥಿಸಲಾಯಿತು ಎಂಬ ನ್ಯಾ. ಚಂದ್ರಚೂಡ್ ಮಾತು ಆಧ್ಯಾತ್ಮಿಕತೆಯ ಧ್ಯೋತಕವಾಗಿದ್ದು ಪಕ್ಷಪಾತ ಮತ್ತು ಬಾಹ್ಯ ಹಸ್ತಕ್ಷೇಪ ನಡೆದಿದೆ ಎಂಬುದರ ಸೂಚನೆಯಲ್ಲ ಎಂದಿದೆ ನ್ಯಾಯಾಲಯ.
ನ್ಯಾ. ಚಂದ್ರಚೂಡ್ ಹೇಳಿಕೆ ಆಧರಿಸಿ ಅಯೋಧ್ಯೆ ತೀರ್ಪು ರದ್ದತಿ ಕೋರಿದ್ದ ವಕೀಲಗೆ ದಂಡ ವಿಧಿಸಿದ ದೆಹಲಿ ನ್ಯಾಯಾಲಯ
Published on

ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ್ದ ಅಯೋಧ್ಯೆ ತೀರ್ಪನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ವಕೀಲ ಮೆಹಮೂದ್ ಪ್ರಾಚಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ.

ಪ್ರಕರಣದ ಸಂಬಂಧ ತಮ್ಮ ಮೊಕದ್ದಮೆ ತಿರಸ್ಕರಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಚಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

Also Read
ಬಹುಶಃ ಅತಿಹೆಚ್ಚು ಟ್ರೋಲ್‌ಗೊಳಗಾದ ನ್ಯಾಯಮೂರ್ತಿ ನಾನು: ಶಾಯಿರಿ ಮೂಲಕ ಟ್ರೋಲ್‌ಗಳಿಗೆ ಚಂದ್ರಚೂಡ್‌ ಪ್ರತಿಕ್ರಿಯೆ

ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಕಳೆದ ವರ್ಷ ಮಾಡಿದ ಭಾಷಣವೊಂದರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ನೀಡಿದ ಪರಿಹಾರದಂತೆ ತೀರ್ಪು ಬರೆಯಲಾಗಿದೆ ಎಂದಿರುವುದನ್ನು ಪ್ರಾಚಾ ಪ್ರಶ್ನಿಸಿದ್ದರು.

ಆದರೆ ಪ್ರಾಚಾ ಅವರ ವಾದ ಕ್ಷುಲ್ಲಕವಾದುದಾಗಿದ್ದು ತಪ್ಪು ಕಲ್ಪನೆಯಿಂದ ಕೂಡಿರುವುದಲ್ಲದೆ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ತಿಳಿಸಿದರು.

ಅಲ್ಲದೆ ಅವರು ಪ್ರಚಾ ಅವರಿಗೆ ₹6 ಲಕ್ಷ ದಂಡ ವಿಧಿಸಿದರು. ವಿಚಾರಣಾ ನ್ಯಾಯಾಲಯ ಈ ಹಿಂದೆ ಪ್ರಚಾ ಅವರಿಗೆ ₹1 ಲಕ್ಷ ದಂಡ ವಿಧಿಸಿತ್ತು.

ಪ್ರಕರಣಕ್ಕೆ ಪರಿಹಾರ ಕಂಡುಕೊಳ್ಳಲು ದೇವರಲ್ಲಿ ಪ್ರಾರ್ಥಿಸಲಾಯಿತು ಎಂಬ ನಿವೃತ್ತ ಸಿಜೆಐ ಚಂದ್ರಚೂಡ್ ಅವರ ಮಾತು ಆಧ್ಯಾತ್ಮಿಕತೆಯ ಧ್ಯೋತಕವಾಗಿದ್ದು ಪಕ್ಷಪಾತ ಮತ್ತು ಬಾಹ್ಯ ಹಸ್ತಕ್ಷೇಪ ನಡೆದಿದೆ ಎಂಬುದರ ಸೂಚನೆಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಮೂರ್ತಿ ಅವರ ಭಾಷಣದಲ್ಲಿ ರಾಮ ದೇವರನ್ನು ಉಲ್ಲೇಖಿಸಿಲ್ಲ ಬದಲಿಗೆ ಅಯೋಧ್ಯೆ ಪ್ರಕರಣದಲ್ಲಿ ಪರಿಹಾರಕ್ಕಾಗಿ ದೇವರನ್ನು ಪ್ರಾರ್ಥಿಸಿದ್ದೇನೆ ಎಂದಷ್ಟೇ ಹೇಳಿದ್ದಾರೆ ಎಂದು ನ್ಯಾಯಾಲಯ ನುಡಿದಿದೆ.

ಪರಮ ದೇವರು ಮತ್ತು ಪ್ರಕರಣದಲ್ಲಿ ಬರುವ ನ್ಯಾಯತತ್ವದ ವ್ಯಕ್ತಿತ್ವ ನಡುವಣ ವ್ಯತ್ಯಾಸವನ್ನು ಪ್ರಾಚಾ ತಪ್ಪಾಗಿ ಅರ್ಥೈಸಿಕೊಂಡಿದ್ದು ವೈಯಕ್ತಿಕ ನಂಬಿಕೆಯಂತೆ ದೈವಿಕ ಮಾರ್ಗದರ್ಶನ ಪಡೆಯುವುದು ಕಾನೂನಿನಡಿಯಲ್ಲಿ "ವಂಚನೆ"ಯಾಗಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ನ್ಯಾಯಾಧೀಶರು ತಮ್ಮ ನ್ಯಾಯಾಂಗ ಕರ್ತವ್ಯಗಳ ಸಂದರ್ಭದಲ್ಲಿ ಮಾಡಿದ ಕ್ರಿಯೆಗಳಿಗೆ ಅವರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು ನ್ಯಾಯಾಧೀಶರ ರಕ್ಷಣಾ ಕಾಯಿದೆ, 1985 ನಿಷೇಧಿಸಲಿದ್ದು ಆ ಕಾಯಿದೆಯ ಪ್ರಕಾರ ಪ್ರಾಚಾ ಅವರ ಮೊಕದ್ದಮೆಗೆ ನ್ಯಾಯಾಲಯ ಕಡಿವಾಣ ಹಾಕಿದೆ.

ಅಯೋಧ್ಯೆ ಪ್ರಕರಣದ ಉಳಿದ ಕಕ್ಷಿದಾರರನ್ನು ಪ್ರಕರಣದಲ್ಲಿ ಹೆಸರಿಸದೆ ಪ್ರಾಚಾ ಅವರು ಸಿಜೆಐ ಚಂದ್ರಚೂಡ್ ಅವರನ್ನು ದೇವರ ವಾದಮಿತ್ರ ಎಂದು ಹೆಸರಿಸಿರುವುದು ಕಾನೂನಾತ್ಮಕವಾಗಿ ತಪ್ಪಾಗಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ನ್ಯಾಯಾಲಯ, ಸಂವಿಧಾನಗಳನ್ನು ರಾಜಕೀಯ ನಂಬಿಕೆಗಳಿಗೂ ಮಿಗಿಲಾಗಿ ಕಾಣಿ: ನ್ಯಾಯವಾದಿಗಳಿಗೆ ಸಿಜೆಐ ಚಂದ್ರಚೂಡ್‌ ಕಿವಿಮಾತು

ನಿವೃತ್ತ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಾಧೀಶ ರಾಣಾ ಅವರು ಇಂತಹ ದುರುದ್ದೇಶಪೂರ್ವಕ ದುಷ್ಟ ದಾಳಿಗಳ ವಿರುದ್ಧ ನ್ಯಾಯಾಂಗ ಮತ್ತು ವಕೀಲರು ಜಾಗರೂಕರಾಗಿರಬೇಕು ಎಂದು ತಿಳಿಸಿದರು.

ರಕ್ಷಕರೇ ಭಕ್ಷಕರಾಗುವ ಸ್ಥಿತಿ ದುರದೃಷ್ಟಕರವಾದುದು. ಹಿರಿಯ ವಕೀಲನಾಗಿ ಸಮಸ್ಯೆ ಬಗೆಹರಿಸುವ ಬದಲು ಅದು ಉಲ್ಬಣಗೊಳ್ಳುವಂತೆ ಮಾಡಿದ್ದಾರೆ. ಅವರು ಅಸಂಗತ ಮತ್ತು ವ್ಯರ್ಥ ಅರ್ಜಿ ಸಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ದಂಡದ ಮೊತ್ತವನ್ನು ₹6 ಲಕ್ಷಕ್ಕೆ ಹೆಚ್ಚಿಸಿತು.

Kannada Bar & Bench
kannada.barandbench.com