ಬಹುಶಃ ಅತಿಹೆಚ್ಚು ಟ್ರೋಲ್‌ಗೊಳಗಾದ ನ್ಯಾಯಮೂರ್ತಿ ನಾನು: ಶಾಯಿರಿ ಮೂಲಕ ಟ್ರೋಲ್‌ಗಳಿಗೆ ಚಂದ್ರಚೂಡ್‌ ಪ್ರತಿಕ್ರಿಯೆ

ಮುಂದಿನ ಸೋಮವಾರದಿಂದ ತನ್ನ ವಿರುದ್ಧದ ಟ್ರೋಲ್‌ಗಳು ನಿರುದ್ಯೋಗಿಗಳಾಗಲಿದ್ದಾರೆ ಎಂದು ಲಘು ದಾಟಿಯಲ್ಲಿ ಸಿಜೆಐ ಚಂದ್ರಚೂಡ್‌ ಹೇಳಿದರು.
CJI DY Chandrachud
CJI DY Chandrachud
Published on

“ಅತಿ ಹೆಚ್ಚು ಟೀಕೆ/ಅಪಹಾಸ್ಯಕ್ಕೆ (ಟ್ರೋಲ್‌) ಒಳಗಾದ ನ್ಯಾಯಮೂರ್ತಿ ನಾನೇ. ಅದಾಗ್ಯೂ, ನಾನು ಎದೆಗುಂದಲಿಲ್ಲ, ಅವರನ್ನು ಗೌರವಿಸುವುದರಿಂದ ಹಿಂದೆ ಸರಿದಿಲ್ಲ” ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದರು.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಿ ಬಶೀರ್‌ ಬದ್ರ್‌ ಅವರ ಉರ್ದು ಶಾಯಿರಿ ಉಲ್ಲೇಖಿಸಿ ಆನ್‌ಲೈನ್‌ ಟ್ರೋಲ್‌ ಮತ್ತು ಟೀಕೆಗೆ ತಮ್ಮದೇ ಆದ ಶೈಲಿಯಲ್ಲಿ ನ್ಯಾ. ಚಂದ್ರಚೂಡ್‌ ಅವರು ಪ್ರತಿಕ್ರಿಯಿಸಿದರು. "

“ನಾನು ಎಷ್ಟು ಟ್ರೋಲ್‌ಗೆ ಒಳಗಾಗಿದ್ದೇನೆ ಎಂಬುದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ. ಇಡೀ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದ ನ್ಯಾಯಮೂರ್ತಿ ಬಹುಶಃ ನಾನೇ ಇರಬೇಕು. ವಿರೋಧಿಗಳು ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸಿದ್ದಾರೆ. ನನ್ನ ಎದುರಾಳಿಗಳನ್ನು ನಾನು ಅತಿಹೆಚ್ಚು ಗೌರವಿಸುತ್ತೇನೆ” ಎಂದು ಶಾಯಿರಿಯ ಮೂಲಕ ಹೇಳಿದರು. ಮುಖಾಲಿಫ್‌ ಸೆ ಮೆರೀ ಶಕ್ಸಿಯತ್‌ ಸವರ್ತಿ ಹೇ, ಮೈ ದುಶ್ಮನೋಂ ಕಾ ಬಡಾ ಎಹ್ತೀರಮ್‌ ಕರ್ತಾ ಹೂಂ (ವಿರೋಧದಿಂದ ನನ್ನ ವ್ಯಕ್ತಿತ್ವ ಅರಳುತ್ತದೆ, ನನ್ನ ಶತ್ರುಗಳನ್ನೂ ನಾನು ತುಂಬಾ ಗೌರವಿಸುತ್ತೇನೆ) ಎಂದು ಬದ್ರ್‌ ಶಾಯರಿಯನ್ನು ಉಲ್ಲೇಖಿಸಿದರು.

“ನವೆಂಬರ್‌ 10ರಂದು ತಾನು ನಿವೃತ್ತಿ ಹೊಂದುತ್ತಿದ್ದು, ಸೋಮವಾರದಿಂದ ನನ್ನನ್ನು ಟ್ರೋಲ್‌ ಮಾಡಿದವರು ನಿರುದ್ಯೋಗಿಗಳಾಗಲಿದ್ದಾರೆ” ಎಂದು ಸಿಜೆಐ ಲಘು ದಾಟಿಯಲ್ಲಿ ಹೇಳಿದರು.

ಅಯೋಧ್ಯಾ ತೀರ್ಪು ನೀಡುವುದಕ್ಕೂ ಮುನ್ನ ಸಹಾಯ ಮಾಡುವಂತೆ ದೇವರಿಗೆ ಮೊರೆ ಇಟ್ಟಿದ್ದೆ ಎಂದು ಸಿಜೆಐ ಚಂದ್ರಚೂಡ್‌ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಈಚೆಗೆ ಹೇಳಿದ್ದೂ ಸೇರಿದಂತೆ ಅವರ ಹಲವು ನುಡಿಗಳು ವಿವಾದಕ್ಕೆ ಕಾರಣವಾಗಿದ್ದವು. ಜಾಮೀನು ನಿರ್ಧರಿಸುವ ಪ್ರಕರಣಗಳನ್ನು ಕೆಲವು ಪೀಠಗಳಿಗೆ ಸೀಮಿತಗೊಳಿಸಿದ್ದ ಚಂದ್ರಚೂಡ್‌ ಅವರ ನಿರ್ಧಾರವು ಸಹ ಭಾರಿ ಟೀಕೆಗೆ ಗುರಿಯಾಗಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಐ ಮನೆಯಲ್ಲಿ ನಡೆದಿದ್ದ ಮಹಾಲಕ್ಷ್ಮಿ ಮತ್ತು ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದರು. ಇದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರ ಪ್ರತ್ಯೇಕತೆಯ ಬಗ್ಗೆ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಚಂದ್ರಚೂಡ್‌ ಅವರ ಹಲವು ತೀರ್ಪಿಗಳಲ್ಲಿ ಕಾರ್ಯಾಂಗದ ವಿರುದ್ಧ ಕಠಿಣ ನಿಲುವು ತಳೆಯದೇ ಇದ್ದುದರಿಂದ ಟೀಕೆಗೆ ಗುರಿಯಾಗಿದ್ದರು.

ಡಿ ವೈ ಚಂದ್ರಚೂಡ್‌ ಅವರು ನಿವೃತ್ತ ಸಿಜೆಐ ಉದಯ್‌ ಉಮೇಶ್‌ ಲಲಿತ್‌ ಅವರ ನಂತರ ಭಾರತದ 50ನೇ ಸಿಜೆಐ ಆಗಿ ಎರಡು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು. 2010ರ ಮೇನಲ್ಲಿ ಕೆ ಜಿ ಬಾಲಕೃಷ್ಣನ್‌ ಅವರ ನಿವೃತ್ತಿಯ ಬಳಿಕ ಅತ್ಯಂತ ಗರಿಷ್ಠ ಅವಧಿಗೆ ಸಿಜೆಐ ಆಗಿದ್ದವರು ನ್ಯಾ. ಚಂದ್ರಚೂಡ್‌.

1959ರ ನವೆಂಬರ್‌ 11ರಲ್ಲಿ ಜನಿಸಿದ ನ್ಯಾ. ಚಂದ್ರಚೂಡ್‌ ಅವರು 1979ರಲ್ಲಿ ದೆಹಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿನಿಂದ ಪದವಿ ಪಡೆದಿದ್ದರು. 1982ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪೂರೈಸಿದ್ದ ಅವರು 1983ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಪಡೆದಿದ್ದರು. 1986ರಲ್ಲಿ ನ್ಯಾಯಾಂಗ ವಿಜ್ಞಾನದಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.

1998 ರಿಂದ 2000ರವರೆಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದ ನ್ಯಾ. ಚಂದ್ರಚೂಡ್‌ ಅವರು ಮಹಿಳಾ ವಿಮೋಚನೆ, ಎಚ್‌ಐವಿ ಸೋಂಕಿತರ ಹಕ್ಕುಗಳು, ಗುತ್ತಿಗೆ ಕಾರ್ಮಿಕರು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಅವರು ವಾದ ಮಂಡಿಸಿದ್ದಾರೆ.

Also Read
ಯಾರನ್ನಾದರೂ ನೋಯಿಸಿದ್ದರೆ ಕ್ಷಮಿಸಿ: ಕೊನೆಯ ಕರ್ತವ್ಯದ ದಿನ ಸಿಜೆಐ ಡಿ ವೈ ಚಂದ್ರಚೂಡ್ ಭಾವುಕ ನುಡಿ

2000ರ ಮಾರ್ಚ್‌ 29ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಚಂದ್ರಚೂಡ್‌ ಅವರು 2013ರ ಅಕ್ಟೋಬರ್‌ 31ರಂದು ಅಲಾಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗಗೂ ಅಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರು. 2016ರ ಮೇ 13ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.

ಆಡಳಿತ ಪಕ್ಷದ ವಿರುದ್ಧ ಸೇರಿದಂತೆ ಹಲವು ಮನ್ನಣೆ ಹೊಂದಿರುವ ಭಿನ್ನ ತೀರ್ಪುಗಳನ್ನು ನ್ಯಾ. ಚಂದ್ರಚೂಡ್‌ ಬರೆದಿದ್ದಾರೆ. ಆಧಾರ್‌ ಅನ್ನು ಹಣಕಾಸು ಮಸೂದೆಯ ರೂಪದಲ್ಲಿ ಪಾಸು ಮಾಡಿರುವುದನ್ನು ಎತ್ತಿ ಹಿಡಿದಿದ್ದ ಸಾಂವಿಧಾನಿಕ ಪೀಠದಲ್ಲಿ ಅದನ್ನು ಅಸಾಂವಿಧಾನಿಕ ಎಂದು ಏಕೈಕ ಭಿನ್ನ ತೀರ್ಪು ಬರೆದಿದ್ದವರು ನ್ಯಾ. ಚಂದ್ರಚೂಡ್‌. ಆದಾರ್‌ ಅನ್ನು ವಿತ್ತೀಯ ಮಸೂದೆಯಾಗಿ ತಂದ ರೀತಿ ಹಾಗೂ ವೈಯಕ್ತಿಕ ದತ್ತಾಂಶದ ಖಾಸಗಿತನಕ್ಕೆ ಒದಗಬಹುದಾದ ಧಕ್ಕೆಯ ಬಗ್ಗೆ ಅವರು ಬೆಳಕು ಚೆಲ್ಲಿದ್ದರು

ಭಾರತದಲ್ಲಿ ನ್ಯಾಯಾಲಯದ ಕಲಾಪಗಳನ್ನು ಲೈವ್‌ಸ್ಟ್ರೀಮ್‌ ಮಾಡುವ ಮಹತ್ವರ ಹೆಜ್ಜೆ ಇಟ್ಟಿದ್ದು ನ್ಯಾ. ಚಂದ್ರಚೂಡ್‌ ಅವರ ಅವಧಿಯಲ್ಲಿ ಎಂಬುದು ಮಹತ್ವದ ವಿಚಾರವಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಇಡೀ ಜಗತ್ತು ತತ್ತರಿಸಿದ್ದ ಸಂದರ್ಭದಲ್ಲಿ ಕಲಾಪಕ್ಕೆ ತೀವ್ರ ಅಡ್ಡಿಯಾಗಿದ್ದಾಗ ಸುಪ್ರೀಂ ಕೋರ್ಟ್‌ ಇ-ಸಮಿತಿ ಮುಖ್ಯಸ್ಥರಾಗಿದ್ದ ಚಂದ್ರಚೂಡ್‌ ಅವರು ಮಹತ್ತರ ಕಾರ್ಯ ನಿಭಾಯಿಸಿದ್ದರು.

Kannada Bar & Bench
kannada.barandbench.com