

ದೆಹಲಿ ಮಾಲಿನ್ಯ ಬಿಕ್ಕಟ್ಟು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದ್ದು ಮದ್ರಾಸ್ ರೇಸ್ ಕ್ಲಬ್‌ಗೆ (ಎಂಆರ್‌ಸಿ) ಗುತ್ತಿಗೆ ನೀಡಲಾದ ಭೂಮಿಯಲ್ಲಿ ಪರಿಸರ ಉದ್ಯಾನಕ್ಕೆ ತಡೆ ನೀಡಿದ್ದ ಮಧ್ಯಂತರ ಆದೇಶ ರದ್ದುಗೊಳಿಸಿತು [ತಮಿಳುನಾಡು ಸರ್ಕಾರ ಇನ್ನಿತರರು ಮತ್ತು ಮದ್ರಾಸ್ ರೇಸ್ ಕ್ಲಬ್ ಮತ್ತಿತರರ ನಡುವಣ ಪ್ರಕರಣ].
ಚೆನ್ನೈನಲ್ಲಿ ಪ್ರವಾಹದ ಅಪಾಯ ತಗ್ಗಿಸಲು, ಗಾಳಿಯ ಗುಣಮಟ್ಟ ಸುಧಾರಿಸಲು ತಮಿಳುನಾಡು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಪರಿಸರ ಉದ್ಯಾನ ಈ ಕಾಲದ ಅಗತ್ಯ ಎಂದು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ವಾಯುಮಾಲಿನ್ಯ ತಡೆ ಮತ್ತು ವಾಯು ಗುಣಮಟ್ಟ ಸುಧಾರಣೆ ಪರಿಸರ ಉದ್ಯಾನ ನಿರ್ಮಾಣದ ಹಿಂದಿನ ತಾರ್ಕಿಕತೆಯಾಗಿದ್ದು ವಾಯು ಮಾಲಿನ್ಯ ಇಂದು ಕೇವಲ ಪರಿಸರ ಸಮಸ್ಯೆಯಲ್ಲ; ಇದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಪರಿಣಮಿಸಿದೆ. ಈಚಿಗೆ ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದಿರುವುದು, ಲಾಕ್‌ಡೌನ್, ಶಾಲೆಗಳಿಗೆ ರಜೆ, ಸಾರ್ವಜನಿಕರ ಜೀವನ ಅಸ್ತವ್ಯಸ್ತತೆ ಅದರಲ್ಲಿಯೂ ಮಕ್ಕಳ ಮತ್ತು ವಯೋವೃದ್ಧರಂತಹ ಸೂಕ್ಷ್ಮ ವರ್ಗಗಳ ಮೇಲೆ ತೀವ್ರ ಆರೋಗ್ಯ ಪರಿಣಾಮಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ರೇಸ್ ಕ್ಲಬ್ ಹಾಗೂ ರಾಜ್ಯ ಸರ್ಕಾರದ ನಡುವಿನ ವ್ಯಾಜ್ಯದ ವಿಚಾರಣೆ ವೇಳೆ ಸರ್ಕಾರ ನಾಲ್ಕು ಕೆರೆಗಳ ಪುನರುಜ್ಜೀವನ ಹಾಗೂ ಉದ್ಯಾನ ನಿರ್ಮಿಸಲು ಈ ಜಾಗ ಬಳಸುವುದಾಗಿ ತಿಳಿಸಿತ್ತು. ಆದರೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಏಕಸದಸ್ಯ ಪೀಠ ಆದೇಶಿಸಿದ್ದ ಪರಿಣಾಮ ಉದ್ಯಾನ ಕಾಮಗಾರಿ ಸ್ಥಗಿತಗೊಂಡಿದ್ದವು.
ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠದ ಮೆಟ್ಟಿಲೇರಿತ್ತು. ಪ್ರವಾಹ ತಗ್ಗಿಸಲು ಈಗಾಗಲೇ ಇಲ್ಲಿ ನಾಲ್ಕು ಕೆರೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಉದ್ಯಾನ ನಿರ್ಮಾಣವಾದರೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದ್ದು ಅದು ಚೆನ್ನೈ ಪಾಲಿನ ಆಮ್ಲಜನಕ ತಾಣವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸರ್ಕಾರ ಪ್ರತಿಪಾದಿಸಿತ್ತು.
ವಾದ ಪುರಸ್ಕರಿಸಿದ ವಿಭಾಗೀಯ ಪೀಠ ಇಂತಹ ಯೋಜನೆಗಳು ಇಂದಿನ ಅಗತ್ಯವಾಗಿದ್ದು ಚೆನ್ನೈನ ಭೂ ಸ್ವರೂಪ ಅಕ್ರಮ ಕಟ್ಟಡಗಳ ನಿರ್ಮಾಣದಿಂದಾಗಿ ಬದಲಾಗಿದೆ. ಇದು ಪ್ರವಾಹಕ್ಕೆ ಕಾರಣವಾಗುತ್ತಿದ್ದು ಕೆಲ ಸಂದರ್ಭಗಳಲ್ಲಿ ವಿನಾಶಕಾರಿಯಾಗಿದೆ ಎಂದು ತಿಳಿಸಿತು.
ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಪಿ ವಿಲ್ಸನ್ ಹಾಗೂ ಸರ್ಕಾರಿ ವಿಶೇಷ ವಕೀಲ ಡಿ ರವಿಚಂದರ್ ಹಾಜರಿದ್ದರು.
[ತೀರ್ಪಿನ ಪ್ರತಿ]