
ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಎಂಜಿನಿಯರ್ ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಯಾವ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ತನ್ನ ರಿಜಿಸ್ಟ್ರಾರ್ ಜನರಲ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ರಶೀದ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ಅವರನ್ನು 2019ರಲ್ಲಿ ಬಂಧಿಸಲಾಗಿತ್ತು.
ಜಾಮೀನು ಅರ್ಜಿ ಆಲಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯಿದೆಯಡಿ ರೂಪುಗೊಂಡ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಆದರೆ ಸಂಬಂಧಪಟ್ಟ ಜನ ಪ್ರತಿನಿಧಿಗಳ ನ್ಯಾಯಾಲಯವಷ್ಟೇ ಇದನ್ನು ವಿಚಾರಣೆ ನಡೆಸಬಹುದು ಎಂದು ತಿಳಿಸಿ ನಂತರ ಪ್ರಕರಣದ ವಿಚಾರಣೆ ಕೈಬಿಟ್ಟಿತ್ತು.
ಈ ವಿಚಾರವಾಗಿ ಸ್ಪಷ್ಟೀಕರಣ ಪಡೆಯುವಂತೆ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ಇಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದ್ದು ಫೆಬ್ರವರಿ 6ರಂದು ಪ್ರಕರಣದ ಮುಂದಿನ ವಿಚಾರಣೆ ಗೊತ್ತುಪಡಿಸಿದ್ದಾರೆ.
ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ಜಾಮೀನು ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ರಶೀದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅವರು ಮಧ್ಯಂತರ ಜಾಮೀನು ಕೂಡ ಕೋರಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ ಅವರು ಕಾಶ್ಮೀರದ ಹಾಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎರಡು ಲಕ್ಷ ಮತಗಳಿಂದ ಸೋಲಿಸುವ ಮೂಲಕ ಬಾರಾಮುಲ್ಲಾ ಕ್ಷೇತ್ರದಲ್ಲಿ ವಿಜಯಿಯಾಗಿದ್ದರು.
ಕಳೆದ ವರ್ಷ, ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ರಶೀದ್ ಅವರಿಗೆ ವಿಚಾರಣಾ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು.