
ಹೊಸ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ಮೊದಲು ದೃಷ್ಟಿಹೀನ ವ್ಯಕ್ತಿಗಳು ಎದುರಿಸುತ್ತಿರುವ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳಿ ಎಂದು ದೆಹಲಿ ಹೈಕೋರ್ಟ್ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ರೋಹಿತ್ ದಾಂಡ್ರಿಯಲ್ ಮತ್ತಿತರರು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಿತರರ ನಡುವಣ ಪ್ರಕರಣ ಹಾಗೂ ಸಂಬಂಧಿತ ದಾವೆಗಳು] .
ಆರ್‌ಬಿಐ ಹೇಳುವಂತೆ ಹೊಸ ನೋಟುಗಳನ್ನು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಮುದ್ರಿಸಲಾಗುತ್ತದೆ. ವಿಶೇಷ ಚೇತನರು/ದೃಷ್ಟಿಹೀನ ವ್ಯಕ್ತಿಗಳಂತಹ ದುರ್ಬಲ ವರ್ಗದ ನಾಗರಿಕರು ಎದುರಿಸುತ್ತಿರುವ ತೊಂದರೆಗಳು ಮತ್ತು ಅಡೆತಡೆಗಳನ್ನು ಪರಿಹರಿಸಬೇಕು ಮತ್ತು ಹೊಸ ಕರೆನ್ಸಿ ನೋಟುಗಳನ್ನು ನೀಡುವ ಅಥವಾ ಮುದ್ರಿಸುವ ಮೊದಲು ಉನ್ನತ ಅಧಿಕಾರ ಸಮಿತಿ ನೀಡಿದ್ದ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆರ್‌ಬಿಐ ಮತ್ತು ಭಾರತ ಸರ್ಕಾರ ಎರಡಕ್ಕೂ ನಿರ್ದೇಶನ ನೀಡಲಾಗುತ್ತಿದೆ. ವಿಕಲಚೇತನರ ತೊಂದರೆಗಳನ್ನು ನಿವಾರಿಸಲು ವಿಕಲಚೇತನರ ಹಕ್ಕುಗಳ ಕಾಯಿದೆಯನ್ನು ಸರ್ಕಾರವೇ ಜಾರಿಗೆ ತಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ವಿವರಿಸಿತು.
ದೃಷ್ಟಿಹೀನ ವ್ಯಕ್ತಿಗಳು ಮತ್ತು ಅಂಗವಿಕಲ ವ್ಯಕ್ತಿಗಳು ಕರೆನ್ಸಿ ನೋಟುಗಳ ಬಳಕೆ ಮಾಡುವ ನಿಟ್ಟಿನಲ್ಲಿ ಸುಧಾರಣೆ ತರುವುದರ ಜೊತೆಗೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಬ್ಯಾಂಕಿಂಗ್ ಸೇವೆಗಳಲ್ಲಿ ಸುಧಾರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಿಲೇವಾರಿ ಮಾಡಿತು.
ಎಲ್ಲಾ ಕರೆನ್ಸಿ ನೋಟುಗಳು, ಅದರಲ್ಲಿಯೂ ₹50ರ ನೋಟುಗಳನ್ನು, ದೃಷ್ಟಿಹೀನ ವ್ಯಕ್ತಿಗಳು ಸುಲಭವಾಗಿ ಗುರುತಿಸುವಂತೆ ಮಾಡಲು ಆರ್‌ಬಿಐ ಮುಂದಾಗಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿತ್ತು. ವಿಕಲಚೇತನರು ಬಳಸಲು ಕಷ್ಟಸಾಧ್ಯವಾಗಿರುವಂತಹ ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕು. ಜೊತೆಗೆ ಬ್ಯಾಂಕಿಂಗ್ ಪೋರ್ಟಲ್ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಲಭ್ಯವಾಗುವಂತೆ ಮಾಡಲು ಆರ್‌ಬಿಐಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.
ವಾದ ಆಲಿಸಿದ ನ್ಯಾಯಾಲಯ ದೃಷ್ಟಿಹೀನರು ಇಲ್ಲವೇ ವಿಕಲಚೇತನ ವ್ಯಕ್ತಿಗಳ ಹಿತಕ್ಕಾಗಿ ಡಿಜಿಟಲ್ ಕರೆನ್ಸಿ ಜಾರಿಗೆ ತರುವುದು ಇಲ್ಲವೇ ವಿಶೇಷ ವಿನ್ಯಾಸದ ನೋಟುಗಳನ್ನು ಚಲಾವಣೆಗೆ ತರುವುದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರ ಎಂದಿತು.
ಆದಾಗ್ಯೂ, ನ್ಯಾಯಾಲಯದ ಆದೇಶದಂತೆ ರಚಿಸಲಾಗಿದ್ದ ಉನ್ನತಾಧಿಕಾರ ಸಮಿತಿಯ ಸಲಹೆಗಳನ್ನು ಸರ್ಕಾರ ಮತ್ತು ಆರ್‌ಬಿಐ ಜಾರಿಗೆ ತರಬೇಕು ಎಂದು ಅದು ಹೇಳಿತು.
ಸಮಿತಿಯ ಸಲಹೆಯಂತೆ ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ವೆಚ್ಚವಾಗಬಹುದು. ಹಳೆಯ ಇಲ್ಲವೇ ಚಾಲ್ತಿಯಲ್ಲಿರುವ ನೋಟುಗಳನ್ನು ಹಿಂಪಡೆಯವುದು ಇಲ್ಲವೇ ಅವುಗಳನ್ನು ನಾಶ ಮಾಡುವುದು ಕೂಡ ಬಹಳ ವೆಚ್ಚದಾಯಕ ಹಾಗೂ ಸಮಯ ಹಿಡಿಯುವ ಕಾರ್ಯ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಹೊಸ ನೋಟು ಮುದ್ರಿಸುವಾಗ ಉನ್ನತಾಧಿಕಾರ ಸಮಿತಿಯ ಸಲಹೆ ಪರಿಗಣಿಸಬೇಕು ಎಂದು ನ್ಯಾಯಾಲಯ ನುಡಿಯಿತು.
ಇದಲ್ಲದೆ, ದೃಷ್ಟಿಹೀನರು ನೋಟು ಬಳಕೆಯ ವಿಚಾರದಲ್ಲಿ ಸುಧಾರಣೆ ತರುವ ಬಗ್ಗೆ ಸಮಿತಿ ನೀಡುವ ಸಲಹೆಗಳನ್ನು ಮತ್ತು ವಿವಿಧ ಬ್ಯಾಂಕ್‌ಗಳಿಗೆ ತಾನು ನೀಡಿದ್ದ ನಿರ್ದೇಶನಗಳು ಕಟ್ಟುನಿಟ್ಟಾಗಿ ಜಾರಿಯಾಗಿವೆಯೇ ಎಂಬುದನ್ನು ಆರ್‌ಬಿಐ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.