ಮಹತ್ವದ ತೀರ್ಪು, ಚಾರಿತ್ರಿಕ ದಾಖಲೆ, ಕಲಾಕೃತಿ ಹಾಗೂ ಛಾಯಾಚಿತ್ರಗಳ ಮೂಲಪ್ರತಿಗಳನ್ನು ಒಳಗೊಂಡ ʼದೆಹಲಿ ಹೈಕೋರ್ಟ್ ಇ- ಮ್ಯೂಸಿಯಂʼ ಹೆಸರಿನ ಆನ್‌ಲೈನ್ ಪೋರ್ಟಲ್‌ಗೆ ದೆಹಲಿ ಉಚ್ಚ ನ್ಯಾಯಾಲಯ ಬುಧವಾರ ಚಾಲನೆ ನೀಡಿದೆ.
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಜರುಗುವ ಹಾಸ್ಯ ಪ್ರಸಂಗಗಳ ಕುರಿತು ದಾಖಲಿಸಲು ಹೈಕೋರ್ಟ್ ವೆಬ್‌ತಾಣದಲ್ಲಿ ಪ್ರತ್ಯೇಕ ವಿಭಾಗ ಮತ್ತು ದೆಹಲಿ ಹೈಕೋರ್ಟ್ ವಾಟ್ಸಾಪ್ ಸೇವೆ ಜೊತೆಗೆ ಇ- ವಸ್ತುಸಂಗ್ರಹಾಲಯವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅನಾವರಣಗೊಳಿಸಿದರು.
http://35.207.227.0/index2.html ಇದು ಜಾಲತಾಣದ ಲಿಂಕ್ ಆಗಿದ್ದು ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಅವರ ಹತ್ಯೆ, ಸಂಸತ್ ಹಾಗೂ ಕೆಂಪು ಕೋಟೆ ದಾಳಿ ಪ್ರಕರಣದ ಐತಿಹಾಸಿಕ ದಾಖಲೆಗಳು ಕಾಣಸಿಗುತ್ತವೆ. ಯೋಜನೆ ಭಾರತೀಯ ಕಾನೂನು ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಮೂಡಿಸಿದೆ ಎಂದು ಇ ಮ್ಯೂಸಿಯಂ ಉದ್ಘಾಟನೆಗೆ ಸಂಬಂಧಿಸಿದ ಹೈಕೋರ್ಟ್ ಪತ್ರಿಕಾ ಪ್ರಕಟಣೆ ಬಣ್ಣಿಸಿದೆ.
ಇದೇ ವೇಳೆ ಹೈಕೋರ್ಟ್ ವಾಟ್ಸಾಪ್ ಸೇವೆ ಪಡೆಯಲು 9112114450 ಫೋನ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಇನ್ನು ಹೈಕೋರ್ಟ್ ಜಾಲತಾಣದಲ್ಲಿನ ಮತ್ತೊಂದು ಆಕರ್ಷಣೆ ನ್ಯಾಯಾಲಯದಲ್ಲಿ ನಡೆಯುವ ಹಾಸ್ಯ ಪ್ರಸಂಗಗಳನ್ನು ಒದಗಿಸುವ ಪ್ರತ್ಯೇಕ ವಿಭಾಗ. ಹ್ಯೂಮರ್ ಇನ್ ಕೋರ್ಟ್ ಹೆಸರಿನ ಈ ವಿಭಾಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಆಕ್ಸೆಸೆಬಲಿಟಿ ಸಮಿತಿ ಅಧ್ಯಕ್ಷರಾಗಿರುವ ನ್ಯಾ. ರಾಜೀವ್ ಶಕ್ದೇರ್ ಇದು ತನ್ನ ಹೃದಯಕ್ಕೆ ಹತ್ತಿರವಾದ ಯೋಜನೆ ಎಂದಿದ್ದಾರೆ.
ಈಗಾಗಲೇ ಉಲ್ಲೇಖಿತ ಹಾಸ್ಯ ಪ್ರಸಂಗಗಳಷ್ಟೇ ಅಲ್ಲದೆ ಹೊಸದಾಗಿ ಘಟಿಸುವ ಹಾಸ್ಯ ಪ್ರಸಂಗಗಳನ್ನು ದಾಖಲಿಸಲು ವಕೀಲರು ಹಾಗೂ ದಾವೆದಾರರಿಗೆ ಅವಕಾಶ ಮಾಡಿಕೊಟ್ಟಿರುವ ನ್ಯಾಯಾಲಯ ಅಂತಹ ಪ್ರಸಂಗಗಳನ್ನು delhihighcourt@nic.inಗೆ ಸಲ್ಲಿಸುವಂತೆ ಕೋರಿದೆ.
ಇದೇ ವೇಳೆ ಹಾಸ್ಯ ಪ್ರಸಂಗಗಳಿಗೆ ಸಾಕ್ಷಿಯಾದ ನ್ಯಾಯಾಧೀಶರು, ದಾವೆದಾರರು ಹಾಗೂ ವಕೀಲರ ವಿವರಗಳು ಬಹಿರಂಗವಾಗದಂತೆ ಕೆಲ ಮಾರ್ಗಸೂಚಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಈ ಯೋಜನೆ ಜಾರಿಗೆ ತಂದ ನ್ಯಾಯಮೂರ್ತಿ ಶಕ್ದೆರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಹಾಸ್ಯ ಪ್ರಸಂಗಗಳ ದಾಖಲೀಕರಣ ನಡೆಯುತ್ತಿರುವುದು ಇದೇ ಮೊದಲಲ್ಲ. ನ್ಯಾ. ಜ್ಞಾನೇಂದ್ರ ಕುಮಾರ್ ಅವರು ʼಕಾನೂನು ಮತ್ತು ಹಾಸ್ಯʼ ಎಂಬ ಕೃತಿಯನ್ನೇ ರಚಿಸಿದ್ದಾರೆ.