ಮಕ್ಕಳ ಲೈಂಗಿಕ ಕಿರುಕುಳದ ವಿರುದ್ಧ ನ್ಯಾಯಾಲಯಗಳು ದೃಢ ನಿಲುವು ತಳೆಯಬೇಕು: ದೆಹಲಿ ಹೈಕೋರ್ಟ್

"ಮಕ್ಕಳ ಲೈಂಗಿಕ ಕಿರುಕುಳದ ವಿರುದ್ಧ ನ್ಯಾಯಾಂಗ ದೃಢವಾದ ನಿಲುವು ತಳೆದಾಗ, ಅಪರಾಧದ ಬಗ್ಗೆ ಹೇಳಿಕೊಳ್ಳಲು ಸಂತ್ರಸ್ತರು ಮತ್ತು ಕುಟುಂಬಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ನ್ಯಾಯ ಪಡೆಯುವ ಕುರಿತಂತೆ ಇರುವ ಕಳಂಕ ಕಡಿಮೆಯಾಗುತ್ತದೆ" ಎಂದಿದೆ ಪೀಠ.
Delhi High Court
Delhi High Court

ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಕಿರುಕುಳ ಮತ್ತು ಅವರ ಖಾಸಗಿತನಕ್ಕೆ ಧಕ್ಕೆ ತರುವಂತಹ ಕ್ಷಣಗಳ ವೀಕ್ಷಣೆಯು ಇಂತಹ ಕೃತ್ಯಗಳಿಗೆ ಬಲಿಯಾದ ಸಂತ್ರಸ್ತ ಹದಿಹರೆಯದವರ ಮೇಲೆ ಗಾಢ ಪರಿಣಾಮ ಬೀರುವುದರಿಂದ ಇವುಗಳ ವಿರುದ್ಧ ನ್ಯಾಯಾಲಯಗಳು ಕಟ್ಟುನಿಟ್ಟಿನ ಧೋರಣೆ ತಳೆಯುವ ಅಗತ್ಯತೆ ಇದೆ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ತಿಳಿಸಿದೆ.

ನಮ್ಮ ನ್ಯಾಯಾಂಗ ವ್ಯವಸ್ಥೆಯು ಅಪ್ರಾಪ್ತರ ಖಾಸಗಿತನಕ್ಕೆ ಧಕ್ಕೆ ತರುವ ಕ್ಷಣಗಳ ವೀಕ್ಷಣೆ ಮತ್ತು ಲೈಂಗಿಕ ದೌರ್ಜನ್ಯದ ದೀರ್ಘಾವಧಿಯ ಪರಿಣಾಮಗಳನ್ನು ಮತ್ತು ಅದರ ಸಂತ್ರಸ್ತರ ಮೇಲೆ ಆಗುವ ದೈಹಿಕ ಮತ್ತು ಮಾನಸಿಕ ಪ್ರಭಾವವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸೌಮ್ಯವಾಗಿ ವರ್ತಿಸಿದರೆ, ಸಂತ್ರಸ್ತರು ನ್ಯಾಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸದೆ ಹೋಗಬಹುದು ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಜುಲೈ 1ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

" ಮಕ್ಕಳ ಲೈಂಗಿಕ ಕಿರುಕುಳದ ವಿರುದ್ಧ ನ್ಯಾಯಾಂಗ ದೃಢವಾದ ನಿಲುವು ತಳೆದಾಗ, ಅಪರಾಧದ ಬಗ್ಗೆ ಹೇಳಿಕೊಳ್ಳಲು ಸಂತ್ರಸ್ತರು ಮತ್ತು ಕುಟುಂಬಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ನ್ಯಾಯ ಪಡೆಯುವ ಕುರಿತಂತೆ ಇರುವ ಕಳಂಕ ಕಡಿಮೆಯಾಗುತ್ತದೆ" ಎಂದು ಪೀಠ ವಿವರಿಸಿದೆ.

Also Read
ಮಕ್ಕಳ ಅಶ್ಲೀಲ ಚಿತ್ರಗಳನ್ನು ಆಕಸ್ಮಿಕವಾಗಿ ಡೌನ್ಲೋಡ್ ಮಾಡುವುದು ಅಪರಾಧವಲ್ಲ: ಕೇರಳ ಹೈಕೋರ್ಟ್

ಅಪ್ರಾಪ್ತೆಯ ಖಾಸಗಿತನಕ್ಕೆ ಧಕ್ಕೆ ತರುವಂತಹ ದೃಶ್ಯಗಳ ವೀಕ್ಷಣೆ ಮತ್ತು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತನಗೆ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ 22 ವರ್ಷದ ಅರ್ಜಿದಾರರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸಂಗತಿಗಳನ್ನು ತಿಳಿಸಿದೆ.

"ನ್ಯಾಯಾಂಗ ಮಕ್ಕಳ ಲೈಂಗಿಕ ಕಿರುಕುಳದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡಾಗ, ಅಂತಹ ಅಪರಾಧಗಳನ್ನು  ಹೇಳಿಕೊಳ್ಳಲು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಪ್ರೋತ್ಸಾಹ ನೀಡುತ್ತದೆ. ನ್ಯಾಯ  ಪಡೆಯುವ ಕುರಿತಂತೆ ಇರುವ ಕಳಂಕವನ್ನು ಕಡಿಮೆ ಮಾಡುತ್ತದೆ ಎಂದು ಪೀಠ ವಿವರಿಸಿದೆ.

ಅರ್ಜಿದಾರ  ಹದಿಹರೆಯದ ಸಂತ್ರಸ್ತೆಯ ಮನೆಯಲ್ಲಿ ಮನೆ ಸಹಾಯಕನಾಗಿ ನೇಮಕಗೊಂಡಿದ್ದ. ಸಂತ್ರಸ್ತೆ ಶಾಲೆಗೆ ಹೋಗಲು ಬಟ್ಟೆ ಬದಲಾಯಿಸುತ್ತಿದ್ದಾಗ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಿಕ್ಕಿಬಿದ್ದಿದ್ದ. ವಿಚಾರಣಾ ನ್ಯಾಯಾಲಯ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ₹ 1,000 ದಂಡ ವಿಧಿಸಿತ್ತು. ತನ್ನನ್ನು ಸುಳ್ಳೇ ಸಿಲುಕಿಸಲಾಗಿದೆ ಎಂದು ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ.

Also Read
ಅಪರಾಧಿ ಕುಟುಂಬ ಸದಸ್ಯನಾಗಿದ್ದರೂ ಮಕ್ಕಳ ಲೈಂಗಿಕ ದೌರ್ಜನ್ಯ ವರದಿ ಮಾಡುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು: ಸಿಜೆಐ

ಆದರೆ ಆತನ ವಾದದಲ್ಲಿ ಯಾವುದೇ ಹುರುಳು ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತು. ತನಗೆ ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಂತ್ರಸ್ತೆಯ ತಂದೆ ತನ್ನ ಮೊಬೈಲ್‌ಗೆ ಆಕ್ಷೇಪಾರ್ಹ ವಿಡಿಯೋಗಳನ್ನು ಹಾಕಿದ್ದರು ಎಂಬ ಆತನ  ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.

ಇಂತಹ ವಾದವು ಕೇವಲ ಸಂತ್ರಸ್ತೆ ಮಾತ್ರವಲ್ಲ, ಆಕೆಯ ಕುಟುಂಬವನ್ನೂ ಅಪಮಾನಕ್ಕೆ ದೂಡುವಂತಹದ್ದಾಗಿದ್ದು ಇದನ್ನು ಒಪ್ಪಲಾಗದು. ಪ್ರಕರಣದಲ್ಲಿ ಸಂತ್ರಸ್ತೆ ಅನುಭವಿಸಿದ ಆಘಾತ  ಆಕೆಯ ಅಧ್ಯಯನ ಮತ್ತು ವೃತ್ತಿಜೀವನದ ಮೇಲೆ ತೀವ್ರ ಪರಿಣಾಮ ಬೀರಿತು ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವಂತೆ ಮಾಡಿತು. ತನ್ನ ಅಪರಾಧಕ್ಕಾಗಿ ಶಿಕ್ಷೆಯಿಂದ ವಿನಾಯಿತಿ ಪಡೆಯಲು ಮೇಲ್ಮನವಿದಾರ ಅರ್ಹನಲ್ಲ ಎಂದು ಅದು ಹೇಳಿತು.

Kannada Bar & Bench
kannada.barandbench.com