ಪ್ರಧಾನಿ ನರೇಂದ್ರ ಮೋದಿ ಪದವಿ ವಿವಾದ: ಅರ್ಜಿ ವಿಳಂಬದ ಬಗ್ಗೆ ಬೆರಳು ಮಾಡಿದ ದೆಹಲಿ ಹೈಕೋರ್ಟ್

ಪ್ರಕರಣದ ಅರ್ಹತೆ ಪರಿಶೀಲಿಸುವ ಮೊದಲು ವಿಳಂಬದ ಅಂಶ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
PM Narendra Modi and Delhi High Court
PM Narendra Modi and Delhi High Court PM Narendra Modi (FB)
Published on

ಪ್ರಧಾನಿ ನರೇಂದ್ರ ಮೋದಿಯವರ ಪದವಿಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವುದಕ್ಕೆ ನಾಲ್ವರು ಅರ್ಜಿದಾರರನ್ನು ದೆಹಲಿ ಹೈಕೋರ್ಟ್‌ ಬುಧವಾರ ತರಾಟೆಗೆ ತಗೆದುಕೊಂಡಿದೆ.

ಮೋದಿ ಅವರ ಪದವಿ ವಿವರ ಬಹಿರಂಗಪಡಿಸಬೇಕೆಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಡಿಸೆಂಬರ್ 2016ರಂದು ನೀಡಿದ್ದ ಆದೇಶ ರದ್ದುಗೊಳಿಸಿ ಆಗಸ್ಟ್ 25ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಕಟಿಸಿದ್ದ ಆದೇಶವನ್ನು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್, ಮಾಹಿತಿ ಹಕ್ಕು ಕಾರ್ಯಕರ್ತ ನೀರಜ್ ಶರ್ಮಾ ಹಾಗೂ ವಕೀಲ ಮೊಹಮ್ಮದ್ ಇರ್ಷಾದ್ ಸಲ್ಲಿಸಿರುವ ಮೇಲ್ಮನವಿಗಳು ಪ್ರಶ್ನಿಸಿದ್ದವು.

Also Read
ಪ್ರಧಾನಿ ಮೋದಿ ಪದವಿ ಬಹಿರಂಗಪಡಿಸುವಂತೆ ಸಿಐಸಿ ನೀಡಿದ್ದ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಮೇಲ್ಮನವಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಶಾದನ್ ಫರಾಸತ್‌ ಅವರು ಪ್ರಕರಣವು ಎರಡು ಪ್ರಮುಖ ಪ್ರಶ್ನೆಗಳನ್ನು ಒಳಗೊಂಡಿದೆ, ಈ ಪ್ರಕರಣಕ್ಕೆ ಮಾಹಿತಿ ಬಹಿರಂಗಪಡಿಸಲು ವಿನಾಯಿತಿ ನೀಡುವ ಆರ್‌ಟಿಐ ಕಾಯಿದೆಯ ಸೆಕ್ಷನ್‌ 8 ಅನ್ವಯಿಸುತ್ತದೆಯೇ? ಒಂದು ವೇಳೆ ಅನ್ವಯವಾದರೂ ಪದವಿ ವಿವರಗಳ ಬಹಿರಂಗಪಡಿಸುವಿಕೆ ಸಾರ್ವಜನಿಕ ಹಿತಾಸಕ್ತಿಯ ವಿಚಾರಕ್ಕೆ ಸಂಬಂಧಿಸಿದ್ದೇ ಎನ್ನುವುದು ಕೇಳಿದರು.

ಹೈಕೋರ್ಟ್‌ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ನಿಗದಿತ ಅವಧಿ ಮೀರಿ ಸಲ್ಲಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತಿಳಿಸಿತು. ಹೀಗಾಗಿ ಪ್ರಕರಣದ ಅರ್ಹತೆ ಪರಿಶೀಲಿಸುವ ಮೊದಲು ವಿಳಂಬದ ಅಂಶ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ವಿಳಂಬದ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆಯೂ ನ್ಯಾಯಾಲಯ ದೆಹಲಿ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ವಿವಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ಅರ್ಜಿದಾರರು ವಿಳಂಬಕ್ಕೆ ನೀಡಿರುವ ಕಾರಣಗಳನ್ನು ಪರಿಶೀಲಿಸಿಲ್ಲ, ಆದರೆ ಅರ್ಹತೆಯ ಆಧಾರದ ಮೇಲೆ ಪ್ರಕರಣವನ್ನು ವಾದಿಸಲು ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿದರು.

"ಪ್ರತಿವಾದಿಗಳ ಪರವಾಗಿ ಎಸ್ ಜಿ ಮೆಹ್ತಾ ಹಾಜರಾಗಬೇಕು. ವಿಳಂಬ ಅರ್ಜಿ ಮನ್ನಿಸುವುದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಮೂರು ವಾರಗಳಲ್ಲಿ ಸಲ್ಲಿಸಬಹುದು. ಮೇಲ್ಮನವಿದಾರರು ಆಕ್ಷೇಪಣೆಗಳಿಗೆ ಪ್ರತಿಕ್ರಿಯೆ ನೀಡಬಹುದು" ಎಂದು ನ್ಯಾಯಾಲಯ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ 16ರಂದು ನಡೆಯಲಿದೆ.

ಸಿಇಸಿ ಆದೇಶ ಪ್ರಶ್ನಿಸಿ ವಿಶ್ವವಿದ್ಯಾಲಯ ಹೈಕೋರ್ಟ್‌ ಮೆಟ್ಟಿಲೇರಿತ್ತು. ನ್ಯಾ. ಸಚಿನ್‌ ದತ್ತ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಸಿಇಸಿ ನಿರ್ದೇಶನವನ್ನು ರದ್ದುಗೊಳಿಸಿತ್ತು ವಿವರಗಳನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅದು ತೀರ್ಪು ನೀಡಿತ್ತು .

ಯಾವುದೇ ವ್ಯಕ್ತಿಯ ಅಂಕಪಟ್ಟಿಗಳು/ಫಲಿತಾಂಶಗಳು/ಪದವಿ ಪ್ರಮಾಣಪತ್ರಗಳು/ಶೈಕ್ಷಣಿಕ ದಾಖಲೆಗಳು, ಆ ವ್ಯಕ್ತಿ ಸಾರ್ವಜನಿಕ ಹುದ್ದೆ ಹೊಂದಿದ್ದರೂ, ವೈಯಕ್ತಿಕ ಮಾಹಿತಿಯ ಸ್ವರೂಪದಲ್ಲಿರುತ್ತವೆ ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ವಿನಾಯಿತಿ ಪಡೆದಿರುತ್ತವೆ ಎಂದು ನ್ಯಾಯಮೂರ್ತಿ ದತ್ತ ಹೇಳಿದ್ದರು.

ದೆಹಲಿಯ ಮಾಜಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಪ್ರಧಾನಿ ಮೋದಿಯವರು "ತಮ್ಮ ಶೈಕ್ಷಣಿಕ ಪದವಿ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿದ್ದರು. ತಾನು 1978 ರಲ್ಲಿ ಡಿಯುನಿಂದ ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಪದವಿ ಪಡೆದಿರುವುದಾಗಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ವಿವರಿಸಿದ್ದರು.

Also Read
ಪ್ರಧಾನಿ ಮೋದಿ ಪದವಿ ಮಾಹಿತಿಯನ್ನು ನ್ಯಾಯಾಲಯಕ್ಕೆ ತೋರಿಸಬಹುದೇ ವಿನಾ ಅಪರಿಚಿತರಿಗಲ್ಲ: ದೆಹಲಿ ವಿಶ್ವವಿದ್ಯಾಲಯದ ವಾದ

ಅದಕ್ಕೂ ಒಂದು ವರ್ಷದ ಮೊದಲು  ದೆಹಲಿ ವಿಶ್ವವಿದ್ಯಾಲಯದಿಂದ ಪ್ರಧಾನಿ ಮೋದಿಯವರ ಪದವಿಯ ವಿವರಗಳನ್ನು ಕೋರಿ ಆರ್‌ಟಿಐ ಅಡಿ ಆಮ್ ಆದ್ಮಿ ಪಕ್ಷದ ಬೆಂಬಲಿಗ ನೀರಜ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ಖಾಸಗಿಯಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲ ಎಂದ ವಿವಿ ಪದವಿ ವಿವರ ಬಹಿರಂಗಪಡಿಸಲು ನಿರಾಕರಿಸಿತ್ತು.

ಡಿಸೆಂಬರ್ 2016ರಲ್ಲಿ, ಶರ್ಮಾ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯ ವಿರುದ್ಧ ಸಿಐಸಿಗೆ ಅರ್ಜಿ ಸಲ್ಲಿಸಿದ್ದರು. ಅಂದಿನ ಮಾಹಿತಿ ಆಯುಕ್ತ ಪ್ರೊ ಎಂ ಆಚಾರ್ಯುಲು ಅವರು 1978ರಲ್ಲಿ ಬಿ ಎ ಪದವಿ ಪಡೆದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿವರವುಳ್ಳ ರೆಜಿಸ್ಟರ್‌ ನೀಡುವಂತೆ ಅದೇಶಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ವಿವಿ ಜನವರಿ 23, 2017ರಂದು ಹೈಕೋರ್ಟ್ ಮೆಟ್ಟಿಲೇರಿತ್ತು.  ಕಳೆದ ಆಗಸ್ಟ್‌ನಲ್ಲಿ ನ್ಯಾಯಾಲಯ ಸಿಇಸಿ ಆದೇಶ ರದ್ದುಗೊಳಿಸಿದ್ದರಿಂದ ಪ್ರಸ್ತುತ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com