

ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಧ್ಯಕ್ಷ ಮೊಯ್ದೀನ್ ಕುಟ್ಟಿ ಕೆ (ಎಂ ಕೆ ಫೈಜಿ) ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ಜಾಮೀನು ಆದೇಶ ಹೊರಡಿಸಿದ್ದಾರೆ. ಎಸ್‌ಡಿಪಿಐ ಪಕ್ಷ 2022ರಲ್ಲಿ ಸರ್ಕಾರ ನಿಷೇಧಿಸಿದ್ದ ಪಾಪುಲರ್ ಫ್ರಂಟ್ ಫಾ ಇಂಡಿಯಾದ (ಪಿಎಫ್‌ಐ) ರಾಜಕೀಯ ಮುಖವಾಣಿ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಜಿ ಅವರನ್ನು ಇ ಡಿ ಮಾರ್ಚ್ 2025ರಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು.
ಎಸ್‌ಡಿಪಿಐ ಪಕ್ಷ ಪಿಎಫ್‌ಐನ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು ಹಣಕಾಸು ಮತ್ತು ಕಾರ್ಯಾಚರಣೆಗಾಗಿ ಪಿಎಫ್‌ಐ ಮೇಲೆ ಅವಲಂಬಿತವಾಗಿದೆ ಎಂದಿದ್ದ ಜಾರಿ ನಿರ್ದೇಶನಾಲಯ, ಪಿಎಫ್‌ಐ ತನ್ನ ಕೃತ್ಯಗಳಿಂದ ಗಳಿಸುತ್ತಿದ್ದ ಅಪರಾಧ ಗಳಿಕೆಯ ಕೋಟ್ಯಂತರ ರೂಪಾಯಿ ಹಣವನ್ನು ಬಹಿರಂಗಪಡಿಸದ ಮಾರ್ಗಗಳ ಮೂಲಕ ಎಸ್‌ಡಿಪಿಐಗೆ ವರ್ಗಾಯಿಸಲಾಗುತ್ತಿತ್ತು ಎಂಬುದಾಗಿ ದೂರಿತ್ತು.
ಬಂಧನಕ್ಕೂ ಮುನ್ನ ಫೈಜಿ ಹಲವಾರು ಬಾರಿ ಇ ಡಿ ಸಮನ್ಸ್‌ಗಳಿಗೆ ಉತ್ತರಿಸಿರಲಿಲ್ಲ. ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು ಎಂದು ಅದು ಹೇಳಿತ್ತು.
ಫೈಜಿ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಅಗರವಾಲ್ ಸೇರಿದಂತೆ ವಕೀಲರ ತಂಡ ಹಾಜರಿತ್ತು. ಇ ಡಿ ಪರವಾಗಿ ವಿಶೇಷ ವಕೀಲ ಝೋಹೆಬ್ ಹೋಸೈನ್ ಸೇರಿದಂತೆ ವಿವಿಧ ವಕೀಲರು ವಾದ ಮಂಡಿಸಿದರು.