ಟೆಸ್ಲಾ ಹೆಸರಿನಲ್ಲಿ ಭಾರತೀಯ ಕಂಪೆನಿಯ ವಿದ್ಯುತ್ ವಾಹನ: ಇಲಾನ್ ಮಸ್ಕ್ ಒಡೆತನದ ಅಸಲಿ ಟೆಸ್ಲಾಗೆ ದೆಹಲಿ ಹೈಕೋರ್ಟ್ ಅಭಯ

ತನ್ನ ವಾಣಿಜ್ಯ ಚಿಹ್ನೆ ಬಳಕೆ ಮಾಡಿ ವಿದ್ಯುತ್ ವಾಹನ ಕ್ಷೇತ್ರ ಪ್ರವೇಶಿಸಿದ್ದ ಟೆಸ್ಲಾ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಇಲಾನ್ ಮಸ್ಕ್ ಒಡೆತನದ ಸಂಸ್ಥೆ ಮೇ 2024 ರಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
TESLA
TESLA
Published on

ತನ್ನ ಕಂಪೆನಿ ವಿದ್ಯುತ್ ವಾಹನಗಳನ್ನು (ಇವಿ) ತಯಾರಿಸುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ ಇಲ್ಲವೇ "ಟೆಸ್ಲಾ" ಪದವನ್ನು ಅಥವಾ ಯಾವುದೇ ಮೋಸಗೊಳಿಸುವ ರೀತಿಯ ಬ್ರ್ಯಾಂಡಿಂಗ್‌ಗೆ ಬಳಸುವುದಿಲ್ಲ ಎಂದು ಟೆಸ್ಲಾ ಪವರ್ ಇಂಡಿಯಾದ ಸಿಇಒ ಅವರು ಈ ಹಿಂದೆ ಮುಚ್ಚಳಿಕೆ ಪತ್ರದಲ್ಲಿ ನೀಡಿದ್ದ ಭರವಸೆ, ಇಲಾನ್‌ ಮಸ್ಕ್‌ ಒಡೆತನದ ಕಂಪೆನಿಗೆ ಸಂಬಂಧಿಸಿದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಮುಂದುವರೆಯುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ [ಟೆಸ್ಲಾ ಮತ್ತು ಟೆಸ್ಲಾ ಪವರ್‌ ಇಂಡಿಯಾ ನಡುವಣ ಪ್ರಕರಣ].

ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಈ ಕುರಿತ ಆದೇಶ ಹೊರಡಿಸಿದ್ದಾರೆ. ಟೆಸ್ಲಾ ಪವರ್‌ ಇಂಡಿಯಾ ಸಂಸ್ಥೆ ತನ್ನ ಟೆಸ್ಲಾ ವಾಣಿಜ್ಯ ಚಿಹ್ನೆ ಬಳಸುತ್ತಿರುವುದು ತಾನು ವಿದ್ಯುತ್‌ ವಾಹನ ಕ್ಷೇತ್ರ ಪ್ರವೇಶಿಸುತ್ತಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿರುವುದನ್ನು ಪ್ರಶ್ನಿಸಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಇಂಕ್ ಕಂಪೆನಿ 2024ರ ಮೇನಲ್ಲಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Also Read
ವಾಣಿಜ್ಯ ಚಿಹ್ನೆ ಉಲ್ಲಂಘನೆ: ಭಾರತೀಯ ಕಂಪೆನಿ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಇಲಾನ್ ಮಸ್ಕ್ ಒಡೆತನದ ಟೆಸ್ಲಾ

ತಾನು ಈ ಸಂಬಂಧ ಏಪ್ರಿಲ್ 2022ರಿಂದ ಟೆಸ್ಲಾ ಪವರ್ ಇಂಡಿಯಾ ಮತ್ತು ಅದರ ಪ್ರತಿರೂಪವಾದ ಟೆಸ್ಲಾ ಪವರ್ ಯುಎಸ್‌ಎಗೆ ನೋಟಿಸ್‌ ನೀಡುತ್ತ ಬಂದಿದ್ದರೂ ಪ್ರತಿವಾದಿ ಕಂಪೆನಿ ಅದರ ಸರಕುಗಳ ಕುರಿತು ಜಾಹೀರಾತು ಮತ್ತು ಮಾರುಕಟ್ಟೆ ಬಳಕೆಯನ್ನು ಮುಂದುವರೆಸಿದೆ ಎಂದು ಮಸ್ಕ್‌ ಒಡೆತನದ ಟೆಸ್ಲಾ ವಾದಿಸಿತ್ತು.

ಆದರೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಉದ್ದೇಶ ತನಗೆ ಇಲ್ಲವೇ ಇಲ್ಲ. ಈ ವಾಣಿಜ್ಯ ಚಿಹ್ನೆ ಅಥವಾ ಟೆಸ್ಪಾ ಪವರ್‌ ಯುಎಸ್‌ಎಯನ್ನು ಬಳಸಿಕೊಂಡು ಇಲ್ಲವೇ ಟೆಸ್ಲಾ ಹೆಸರನ್ನು ಹೋಲುವ ಇನ್ನಾವುದೇ ಬ್ರ್ಯಾಂಡ್‌ನಡಿ ಬೇರೆ ಕಂಪೆನಿಗಳ ಇ-ವಾಹನಗಳನ್ನೂ ತಾನು ಮಾರಾಟ ಮಾಡುವುದಿಲ್ಲ ಎಂದು ಟೆಸ್ಲಾ ಪವರ್ ಇಂಡಿಯಾದ ಮಾಲೀಕರು ಇದೇ ವೇಳೆ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದರು.

Also Read
ಟ್ವಿಟರ್‌ ಖಾತೆ ಅಮಾನತು: ಇಲಾನ್ ಮಸ್ಕ್‌ ಪಕ್ಷಕಾರರನ್ನಾಗಿಸಲು ಕೋರಿಕೆ; ₹25 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ಆದರೆ ಭಾರತೀಯ ಸಂಸ್ಥೆಯಾದ ಟೆಸ್ಲಾ ಪವರ್ ಇಂಡಿಯಾ ಟೆಸ್ಲಾ ಬ್ರಾಂಡ್‌ನಡಿ ಇ-ಸ್ಕೂಟರ್‌ಗಳ ತಯಾರಿಕೆ ಆರಂಭಿಸಿದೆ ಎಂದು ಮಸ್ಕ್‌ ಅವರ ಕಂಪೆನಿ ದೂರಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ 28ರಂದು ದೆಹಲಿ ಹೈಕೋರ್ಟ್‌ ನಿರ್ದೇಶನವೊಂದನ್ನು ನೀಡಿ ಪ್ರತಿವಾದಿ ಭಾರತೀಯ ಕಂಪೆನಿ ತಾನು ಮಾರಾಟ ಮಾಡುತ್ತಿರುವ ಇವಿಗಳ ವಿವರ ಅವುಗಳ ಡೀಲರ್‌ಗಳ ಹೆಸರು, ಬಿಡುಗಡೆ ದಿನಾಂಕ, ಪ್ರಾರಂಭದಿಂದಲೂ ನಡೆದಿರುವ ಮಾರಾಟದ ವಿವರಗಳು, ಮತ್ತು ಪ್ರಸ್ತುತ ಇರುವ ಸ್ಟಾಕ್—ಇವೆಲ್ಲವನ್ನೂ ಒಳಗೊಂಡ ಪ್ರಮಾಣಪತ್ರವನ್ನು ಮುಂದಿನ ವಿಚಾರಣೆ ಹೊತ್ತಿಗೆ ಸಲ್ಲಿಸಬೇಕು ಎಂದಿತ್ತು.

ಈ ಆದೇಶದ ಬಳಿಕ ಪ್ರಕರಣ ಮಧ್ಯಸ್ಥಿಕೆಯ ಅಂಗಳ ತಲುಪಿತ್ತು. ಅಲ್ಲಿಯೂ ಪ್ರಕರಣ ಇತ್ಯರ್ಥವಾಗದೆ ಇರುವುದರಿಂಧ ಹೈಕೋರ್ಟ್‌ ಪ್ರಕರಣದ ಮೂಲ ಅಂಶಗಳನ್ನಾಧರಿಸಿ ವಿಚಾರಣೆ ನಡೆಸಲು ಮುಂದಾಗಿತ್ತು.

Kannada Bar & Bench
kannada.barandbench.com