
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಸಂಸದ ಎಂಜಿನಿಯರ್ ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರತಿಕ್ರಿಯೆ ಕೇಳಿದೆ.
ವಿಚಾರಣಾ ನ್ಯಾಯಾಲಯ ಪ್ರಕರಣದಲ್ಲಿ ನಿಯಮಿತ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ರಶೀದ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸುಬ್ರಮೋಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ಎನ್‌ಐಎಗೆ ನೋಟಿಸ್ ಜಾರಿ ಮಾಡಿದೆ.
ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆಯಡಿ (ಯುಎಪಿಎ) ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ರಶೀದ್ 2019ರಿಂದ ಜೈಲಿನಲ್ಲಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಶೀದ್ ಅವರು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎರಡು ಲಕ್ಷ ಮತಗಳಿಂದ ಸೋಲಿಸುವ ಮೂಲಕ ಬಾರಾಮುಲ್ಲಾ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ.
ನಂತರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಚಾರ ಮಾಡಲು ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಕಳೆದ ಮಾರ್ಚ್‌ನಲ್ಲಿ, ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜೀತ್ ಸಿಂಗ್ ಅವರು ಎಂಜಿನಿಯರ್ ಅವರಿಗೆ ನಿಯಮಿತ ಜಾಮೀನು ನೀಡಲು ನಿರಾಕರಿಸಿದ್ದರು.
ಸಂಸತ್ತಿನ ಕಲಾಪಗಳಿಗೆ ಹಾಜರಾಗಲು ರಶೀದ್ ಅವರಿಗೆ ಈ ಹಿಂದೆ ಕಸ್ಟಡಿ ಪೆರೋಲ್ ಕೂಡ ನೀಡಲಾಗಿತ್ತು. ವಿಚಾರಣಾ ನ್ಯಾಯಾಲಯ ತನ್ನ ವಿರುದ್ಧ ಮಾಡಿರುವ ಕ್ರಿಮಿನಲ್ ಆರೋಪಗಳನ್ನು ಪ್ರಶ್ನಿಸಿ ರಶೀದ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿತು. ಅರ್ಜಿಗೆ ಆಕ್ಷೇಪಿಸಿದ ಎನ್‌ಐಎ ಪರ ವಕೀಲ ಸಿದ್ಧಾರ್ಥ್ ಲೂತ್ರಾ, ಸಾಕಷ್ಟು ವಿಳಂಬದ ನಂತರ ಅರ್ಜಿ ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಶೀದ್ ಪರ ವಾದ ಮಂಡಿಸಿದ ವಕೀಲರಾದ ಆದಿತ್ಯ ವಾಧ್ವಾ ಮತ್ತು ವಿಖ್ಯಾತ್ ಒಬೆರಾಯ್, ನ್ಯಾಯಾಲಯ ವಿಳಂಬವನ್ನು ಮನ್ನಿಸಬಹುದು ಎಂದರು.
ವಿಳಂಬ ಮನ್ನಿಸುವ ಸೀಮಿತ ವಿಷಯದ ಕುರಿತು ಉತ್ತರ ಸಲ್ಲಿಸುವಂತೆ ಎನ್‌ಐಎಗೆ ಸೂಚಿಸಿದ ನ್ಯಾಯಾಲಯ ಜುಲೈ 29ರಂದು ವಿಚಾರಣೆ ಮುಂದೂಡಿತು.