ಎಂಜಿನಿಯರ್ ರಶೀದ್ ಸಂಸತ್ತಿಗೆ ಹಾಜರಾಗಲು ಎನ್ಐಎ ವಿರೋಧ: ದೆಹಲಿ ಹೈಕೋರ್ಟ್ ಹೇಳಿದ್ದೇನು?

ಸಂಸತ್ತಿಗೆ ಹಾಜರಾಗುವಾಗ ಪೊಲೀಸರೊಂದಿಗೆ ರಶೀದ್ ತೆರಳಬಹುದು ಎಂದು ನ್ಯಾಯಾಲಯ ಇಂದು ತಿಳಿಸಿದೆ.
Delhi High Court, Engineer Rashid
Delhi High Court, Engineer Rashid
Published on

ಜೈಲಿನಲ್ಲಿರುವ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ  ಅಬ್ದುಲ್ ರಶೀದ್ ಶೇಖ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ಬಂಧನದಲ್ಲಿದ್ದಾಗ ಸಂಸತ್ತಿಗೆ ಹಾಜರಾಗಲು ಅನುಮತಿ ನೀಡುವುದಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿರಂತರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ದೆಹಲಿ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.

ರಶೀದ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಬಹುದು ಎಂದು ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಅನೂಪ್ ಜೈರಾಮ್ ಭಂಬಾನಿ ಅವರಿದ್ದ ಪೀಠ  ಹೇಳಿತು.

Also Read
ಕಾಶ್ಮೀರ ಮಾಜಿ ಸಿಎಂ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಗೆಲುವು: ಪ್ರಮಾಣ ವಚನ ಸ್ವೀಕಾರಕ್ಕಾಗಿ ಜಾಮೀನು ಕೋರಿದ ರಶೀದ್‌

ಸಂಸತ್ತಿನಲ್ಲಿ ರಶೀದ್ ಅವರೊಂದಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಹಾಜರಿರಲು ಅನುಮತಿ ನೀಡುವಂತೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಅವರನ್ನು ಕೇಳಬಹುದು ಎಂದು ಪೀಠ ತಿಳಿಸಿತು.

ಷರತ್ತು ವಿಧಿಸುವ ಮೂಲಕ ಭದ್ರತಾ ಸಮಸ್ಯೆಗಳನ್ನು ಪರಿಹರಿಸಬಹುದಾದರೆ ರಶೀದ್‌ ಅವರನ್ನು ಸಂಸತ್ತಿಗೆ ಹಾಜರಾಗದಂತೆ ತಡೆಯಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತು.

 ರಶೀದ್‌ ಸಂಸತ್ತಿಗೆ ಹಾಜರಾಗಲು ಈಗಾಗಲೇ ಏಕಸದಸ್ಯ ಪೀಠ ಅನುಮತಿ ನೀಡಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿವರವಾದ ಆದೇಶವನ್ನು ಹೊರಡಿಸುವುದಾಗಿ ನ್ಯಾಯಾಲಯವು ತಿಳಿಸಿದೆ.

ಇದೇ ವೇಳೆ ನ್ಯಾಯಾಲಯ, ರಶೀದ್ ಒಂದೊಮ್ಮೆ ಮುಂದಿನ 10 ವರ್ಷಗಳ ಕಾಲ ಬಂಧನದಲ್ಲಿದ್ದು, ಅದೇ ಸಮಯದಲ್ಲಿ ಸಂಸದರಾಗಿಯೂ ಮುಂದುವರೆದರೆ, ಓರ್ವ ಸಂಸದನಾಗಿ ಅವರ ಹಕ್ಕುಗಳು ಹಾಗೂ ಕರ್ತವ್ಯಗಳೆರಡರ ಕತೆ ಏನಾಗಲಿದೆ? ಎಂದು ಪ್ರಶ್ನಿಸಿತು.

ಭಯೋತ್ಪಾದನೆಗಾಗಿ ನಿಧಿ ಸಂಗ್ರಹ ಮಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಆರೋಪ ಎದುರಿಸುತ್ತಿರುವ ರಶೀದ್‌ ಪ್ರಸ್ತುತ ತಿಹಾರ್‌ ಜೈಲಿನಲ್ಲಿದ್ದಾರೆ.

ವಿಚಾರಣಾ ನ್ಯಾಯಾಲಯ  ಸಂಸದ ರಶೀದ್‌ ಅವರ ನಿಯತ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ, ಪ್ರಸ್ತುತ ಅರ್ಜಿಯ ಪರೋಕ್ಷವಾಗಿ ಜಾಮೀನಿನ ಮೇಲೆ ಬಿಡುಗಡೆ ಪಡೆಯುವ ಸಾಧನವಾಗಿದೆಯೇ ಎಂದು ನ್ಯಾಯಾಲಯ ಇದೇ ವೇಳೆ ರಶೀದ್ ಪರ ವಕೀಲ ಎನ್‌ ಹರಿಹರನ್‌ ಅವರನ್ನು ಸಂಕ್ಷಿಪ್ತವಾಗಿ ಪ್ರಶ್ನಿಸಿತು.

"ನಿಮಗೆ ಯಾವುದೇ ಹಕ್ಕಿಲ್ಲದಿದ್ದರೆ ನೀವು ಅಧಿವೇಶನಕ್ಕೆ ಏಕೆ ಹಾಜರಾಗಲು ಬಯಸುತ್ತೀರಿ? ಇದು ವಿಶೇಷ ಕಾಯಿದೆ. ನಿಮ್ಮ ಮೇಲೆ ಗಂಭೀರ ಆರೋಪವಿದೆ. ಅದಕ್ಕಾಗಿಯೇ ನೀವು ನಿಯತ ಜಾಮೀನು ಒತ್ತಾಯಿಸದೆ ಈ ಮಾರ್ಗವನ್ನು ಆರಿಸುತ್ತಿದ್ದೀರಿ" ಎಂದು ನ್ಯಾಯಮೂರ್ತಿ ಸಿಂಗ್ ಹೇಳಿದರು.

Also Read
ಕಾಶ್ಮೀರ ವಿಧಾನಸಭಾ ಚುನಾವಣಾ ಪ್ರಚಾರ: ಎಂಜಿನಿಯರ್ ರಶೀದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು

ಆದರೆ, ಈಗಾಗಲೇ ಏಕಸದಸ್ಯ ಪೀಠ ಸಂಸತ್ತಿಗೆ ತೆರಳಲು ಅನುಮತಿ ನೀಡಿರುವುದರಿಂದ ರಶೀದ್‌ ಹಾಜರಾಗಲು ಅನುಮತಿ ನೀಡುವ ವಿಚಾರದಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು ಎಂದು ಹರಿಹರನ್‌ ವಾದಿಸಿದರು.

ಸಾಮಾನ್ಯ ಉಡುಪಿನ ಪೊಲೀಸ್‌ ಅಧಿಕಾರಿ ಹಾಜರಿರುವಂತೆ ಅನುಮತಿ ನೀಡಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಈ ವಿಚಾರವಾಗಿ ಸೂಚನೆಗಳನ್ನು ಪಡೆಯುವುದಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ರಾಜ್‌ಕುಮಾರ್‌ ಭಾಸ್ಕರ್‌ ಠಾಕ್ರೆ ತಿಳಿಸಿದರು. ಅದರಂತೆ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.

Kannada Bar & Bench
kannada.barandbench.com