ಸಂಸತ್ತಿಗೆ ಹಾಜರಾಗಲು ರಶೀದ್‌ಗೆ ಅನುಮತಿಸಿದ ದೆಹಲಿ ಹೈಕೋರ್ಟ್; ಕೇಂದ್ರ ಸೂಚಿಸಿದ ಭದ್ರತಾ ವೆಚ್ಚದ ಬಗ್ಗೆ ರಶೀದ್ ತಗಾದೆ

ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ.
Engineer Rashid
Engineer RashidImage Source: Facebook
Published on

ದೆಹಲಿಯ ತಿಹಾರ್‌ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಶೇಖ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ಬಂಧನದ ಅವಧಿಯಲ್ಲಿಯೇ ಸಂಸತ್‌ ಅಧಿವೇಶನಕ್ಕೆ ಹಾಜರಾಗಲು ದೆಹಲಿ ಹೈಕೋರ್ಟ್ ಬುಧವಾರ ಅನುಮತಿಸಿದೆ. ಇದರ ಬೆನ್ನಿಗೇ ಅಧಿವೇಶನಕ್ಕೆ ಹಾಜರಾಗಲು ಭದ್ರತಾ ವೆಚ್ಚದ ಭರಿಸಬೇಕಾದ ಷರತ್ತನ್ನು ಆಕ್ಷೇಪಿಸಿ ಅದನ್ನು ಕೈಬಿಡುವಂತೆ ಕೋರಿ ರಶೀದ್‌ ಗುರುವಾರ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಬಂಧನದ ನಡುವೆಯೇ ಮಾರ್ಚ್ 26 ರಿಂದ ಏಪ್ರಿಲ್ 4 ರವರೆಗೆ ರಶೀದ್ ಅವರು ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗಲು ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಅನೂಪ್ ಜೈರಾಮ್ ಭಂಬಾನಿ ಅವರಿದ್ದ ಪೀಠ ಬುಧವಾರ ಆದೇಶ ಹೊರಡಿಸಿತು.

ಈ ಆದೇಶದ ಬೆನ್ನಿಗೇ, ಕೇಂದ್ರ ಸರ್ಕಾರವು ಅಧಿವೇಶನಕ್ಕೆ ಭದ್ರತೆಯೊಂದಿಗೆ ಕರೆದೊಯ್ದು ಮರಳಿ ಕರೆತರಲು ಪ್ರತಿದಿನಕ್ಕೆ ರೂ.1.4 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿ ಅದನ್ನು ಭರಿಸುವಂತೆ ರಶೀದ್‌ಗೆ ಸೂಚಿಸಿತ್ತು. ಇದಕ್ಕೆ ಆಕ್ಷೇಪಿಸಿರುವ ರಶೀದ್‌ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣವನ್ನು ಗುರುವಾರಕ್ಕೆ ಪಟ್ಟಿ ಮಾಡಲಾಗಿದೆ.

ರಶೀದ್‌ ಅವರಿಗೆ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವ ವೇಳೆ ಖರ್ಚುವೆಚ್ಚವನ್ನು ಭರಿಸಬೇಕು ಎನ್ನುವ ಷರತ್ತನ್ನು ನ್ಯಾಯಾಲಯ ವಿಧಿಸಿತ್ತು. ಇದೀಗ ರಶೀದ್‌ ಪರ ವಕೀಲರು ಈ ಷರತ್ತನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.

Also Read
ಎಂಜಿನಿಯರ್ ರಶೀದ್ ಸಂಸತ್ತಿಗೆ ಹಾಜರಾಗಲು ಎನ್ಐಎ ವಿರೋಧ: ದೆಹಲಿ ಹೈಕೋರ್ಟ್ ಹೇಳಿದ್ದೇನು?

ರಶೀದ್‌ ಅವರಿಗೆ ಸಂಸತ್ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವ ವೇಳೆ ನ್ಯಾಯಾಲಯವು ಹಲವು ಷರತ್ತುಗಳನ್ನು ವಿಧಿಸಿತ್ತು. ಸಂಸದರಾಗಿ ತಮ್ಮ ಪಾತ್ರ ನಿರ್ವಹಿಸುವುದನ್ನು ಹೊರತುಪಡಿಸಿ ಅವರು ಲೋಕಸಭಾ ಭವನದ ಆವರಣದೊಳಗೆ ಯಾರೊಂದಿಗೂ ಸಂವಹನ ನಡೆಸಬಾರದು ಎಂದು ನ್ಯಾಯಾಲಯ ರಶೀದ್‌ ಅವರಿಗೆ ತಾಕೀತು ಮಾಡಿತ್ತು.

ರಶೀದ್‌ ಮೊಬೈಲ್‌ ಇನ್ನಿತರ ಸಂವಹನ ಸಾಧನಗಳನ್ನು ಬಳಸುವಂತಿಲ್ಲ, ಸಂಸತ್ತಿನ ಹೊರಗೆ ಒಳಗೆ ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ, ತಿಹಾರ್‌ ಜೈಲಿನಿಂದ ಸಂಸತ್ತಿಗೆ ತೆರಳುವ ವೆಚ್ಚವನ್ನು ತಾನೇ ಭರಿಸಬೇಕು ಎಂದಿದ್ದ ನ್ಯಾಯಾಲಯ ಸಾಮಾನ್ಯ ಉಡುಪಿನ ಪೊಲೀಸ್‌ ಸಿಬ್ಬಂದಿಯೊಟ್ಟಿಗೆ ರಶೀದ್‌ ಅವರನ್ನು ಸಂಸತ್ತಿಗೆ ಕಳಿಸಿಕೊಡುವಂತೆ ನಿರ್ದೇಶನ ನೀಡಿತ್ತು.

ಅಧಿವೇಶನದ ಕೊನೆಯಲ್ಲಿ ಸಂಸತ್ತಿನ ಮಾರ್ಷಲ್‌ಗಳು ರಶೀದ್‌ ಅವರನ್ನು ಪೊಲೀಸ್‌ ಅಧಿಕಾರಿಯ ವಶಕ್ಕೆ ನೀಡಬೇಕು, ಜೈಲು ನಿಯಮಗಳ ಅಧಿಕೃತ ಸಮಯ ಮೀರಿದ್ದರೂ ರಶೀದ್‌ ಅವರನ್ನು ಜೈಲಿಗೆ ತಂದು ಬಿಡಬೇಕು ಎಂದು ಹೇಳಿತ್ತು.

ರಶೀದ್ ಅವರ ನ್ಯಾಯಾಂಗ ಬಂಧನಕ್ಕೆ ಧಕ್ಕೆಯಾಗದಂತೆ ಈ ಷರತ್ತುಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿತ್ತು.

ಅಲ್ಲದೆ ಇದು ಭವಿಷ್ಯದಲ್ಲಿ ಬೇರೆಯವರಿಗೂ ಅನ್ವಯಯವಾಗುವಂತಹ ಆದೇಶವಲ್ಲ. ಪ್ರಕರಣದ ಅರ್ಹತೆಯ ಆಧಾರದ ಮೇಲೆಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

Also Read
'ಎಂಜಿನಿಯರ್ ರಶೀದ್ ಜಾಮೀನು ಅರ್ಜಿ ವಿಚಾರಣೆ ಯಾರು ನಡೆಸಬೇಕು?' ಸುಪ್ರೀಂ ಸ್ಪಷ್ಟನೆ ಕೇಳಿದ ದೆಹಲಿ ಹೈಕೋರ್ಟ್

ನ್ಯಾಯಾಲಯದ ಆದೇಶದ ನಂತರ ರಶೀದ್‌ಗೆ ಭದ್ರತಾ ವೆಚ್ಚದ ಕುರಿತು ಕೇಂದ್ರ ಸರ್ಕಾರ ತಿಳಿಸಿತ್ತು. ಇದಕ್ಕೆ ಆಕ್ಷೇಪಿಸಿ ನ್ಯಾಯಾಲಯವನ್ನು ಎಡತಾಕಿರುವ ರಶೀದ್‌ ತಮ್ಮ ಮನವಿಯಲ್ಲಿ, "ನಿನ್ನೆ ನನಗೆ ಸರ್ಕಾರವು ಸಂಸತ್‌ ಅಧಿವೇಶನಕ್ಕೆ ಹಾಜರಾಗಲು ದಿನವೊಂದಕ್ಕೆ ₹ 1.4 ಲಕ್ಷವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಈ ಪ್ರಯಾಣ ವೆಚ್ಚವನ್ನು ಪಾವತಿಸುವ ಷರತ್ತಿನ ಮೇರೆಗೆ ಅಧಿವೇಶನಕ್ಕೆ ಹಾಜರಾಗುತ್ತಿದ್ದೇನೆ," ಎಂದು ತಿಳಿಸಿದ್ದಾರೆ.

ಇಂದು ನ್ಯಾಯಾಲಯದಲ್ಲಿ ರಶೀದ್‌ ಪರ ವಕೀಲರು, ತಾವು ಭದ್ರತಾ ವೆಚ್ಚವನ್ನು ತಗ್ಗಿಸಲು ಮನವಿ ಮಾಡುತ್ತಿಲ್ಲ, ಬದಲಿಗೆ ಷರತ್ತನ್ನು ತೆಗೆದುಹಾಕಲು ಕೋರುತ್ತಿದ್ದೇವೆ. ಈ ಹಿಂದೆಯೂ ಎರಡು ಬಾರಿ ಇಂತಹ ಯಾವುದೇ ಷರತ್ತು ಇಲ್ಲದೆ ಅಧಿವೇಶನಕ್ಕೆ ಹಾಜರಾಗಲು ರಶೀದ್‌ಗೆ ಅನುಮತಿಸಲಾಗಿತ್ತು ಎಂದು ತಿಳಿಸಿದರು.

ಹಿಂದಿನ ಬಾರಿ ರಶೀದ್‌ ಅಧಿವೇಶನಕ್ಕೆ ಹಾಜರಾಗಲು ಬಾರಾಮುಲ್ಲಾ ಕ್ಷೇತ್ರದ ಜನತೆಯೇ ಹಣ ಸಂಗ್ರಹಿಸಿ ನೀಡಿದ್ದರು. ಇಂದು ಅವರು ಹಾಜರಾಗಿದ್ದಾರೆ, ನಾಳೆ ಅವರ ಬಳಿ ಹಣ ಇಲ್ಲದೆ ಹೋಗಬಹುದು. ಹಾಗಾದಾಗ ಸದನದಲ್ಲಿ ಬಾರಾಮುಲ್ಲಾದ ಜನತೆಯ ಪ್ರತಿನಿಧಿತ್ವ ಇಲ್ಲವಾಗಬಹುದು. ರಶೀದ್‌ ಸಂಸದರಾಗಿದ್ದು ಜನರನ್ನು ಪ್ರತಿನಿಧಿಸಬೇಕಾಗುತ್ತದೆ ಎಂದು ಅವರ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಆಲಿಸಲು ನಾಳೆಗೆ ಪಟ್ಟಿ ಮಾಡಲು ಸೂಚಿಸಿತು.

ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.

Kannada Bar & Bench
kannada.barandbench.com