

ಸ್ಟ್ರೇಂಜರ್ ಥಿಂಗ್ಸ್, ಫ್ರೆಂಡ್ಸ್, ಬ್ಯಾಟ್‌ಮ್ಯಾನ್, ದ ಸ್ಕ್ವಿಡ್ ಗೇಮ್, ದ ಜಂಗಲ್ ಬುಕ್ ಮುಂತಾದ ಜನಪ್ರಿಯ ವೆಬ್‌ಸರಣಿಗಳು, ಧಾರಾವಾಹಿಗಳು, ಸಿನಿಮಾಗಳು, ಟಿವಿ ಕಾರ್ಯಕ್ರಮಗಳ ಹಕ್ಕುಸ್ವಾಮ್ಯ ಉಲ್ಲಂಘಿಸಿ ಅಕ್ರಮವಾಗಿ ಪ್ರದರ್ಶಿಸುತ್ತಿದ್ದ ಹಲವಾರು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ವಾರ್ನರ್ ಬ್ರದರ್ಸ್ ಎಂಟರ್‌ಟೈನ್‌ಮೆಂಟ್ ಇಂಕ್ & ಅದರ್ಸ್ ಮತ್ತು ಅನಿಮೆಸ್ಯೂಜೆಝ್.ಟು ಮತ್ತಿತತರು ].
ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ವಾರ್ನರ್ ಬ್ರದರ್ಸ್, ನೆಟ್‌ಫ್ಲಿಕ್ಸ್, ಆಪಲ್, ಡಿಸ್ನಿ ಮತ್ತು ಕ್ರಂಚಿರೋಲ್ ಪರವಾಗಿ ಈ ಸಂಸ್ಥೆಗಳ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ತಡೆಯಲು ಡೈನಮಿಕ್ + ಪ್ರತಿಬಂಧಕಾಜ್ಞೆಯನ್ನು ನೀಡಿದರು.
ಡೈನಮಿಕ್ + ಪ್ರತಿಬಂಧಕಾಜ್ಞೆಯು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿರುವ ವೆಬ್‌ತಾಣಗಳು ತಮ್ಮದೇ ತಾಣದ ಪ್ರತಿಫಲಿತ ರೂಪಗಳನ್ನು ಬೇರೆ ಡೊಮೇನ್ ಹೆಸರಿನ ಮೂಲಕ, ಐಪಿ ವಿಳಾಸದ ಮೂಲಕ ತಲೆ ಎತ್ತುವಂತೆ ಮಾಡುವುದನ್ನು ತಡೆಯುತ್ತದೆ. ಅಂತಹ ಮಿರರ್, ರಿಡೈರೆಕ್ಟ್ ತಾಣಗಳಿಗೂ ನಿರ್ಬಂಧವನ್ನು ಅನ್ವಯಿಸುತ್ತದೆ.
ಮೇಲೆ ತಿಳಿಸಿದ ಸಂಸ್ಥೆಗಳ ಹಕ್ಕುಸ್ವಾಮ್ಯದ ವಿಷಯಗಳಲ್ಲಿ ಪೈರಸಿಯನ್ನು ತಡೆಯುವ ಸಲುವಾಗಿ ಅವರ ಹಕ್ಕುಸ್ವಾಮ್ಯದ ಕೃತಿಗಳು ದುರ್ಬಳಕೆಯಾದ ತಕ್ಷಣವೇ ಅವುಗಳನ್ನು ರಕ್ಷಿಸಲು ಈ ಮೊಕದ್ದಮೆಯಲ್ಲಿ ಹೆಸರಿಸಲಾದ ವೆಬ್‌ಸೈಟ್‌ಗಳ ಯಾವುದೇ ಪ್ರತಿಫಲಿತ / ಮರುನಿರ್ದೇಶಿತ / ಆಲ್ಫಾನ್ಯೂಮರಿಕ್ ವ್ಯತ್ಯಾಸಗಳೊಂದಿಗೆ ಮೂಡುವ ತಾಣಗಳಿಗೂ ನಿರ್ಬಂಧವನ್ನು ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.
"ವಾದಿಗಳ ಹಕ್ಕುಸ್ವಾಮ್ಯದ ಕೃತಿಗಳನ್ನು ಉಲ್ಲಂಘಿಸಿದ ತಕ್ಷಣ ಅವುಗಳನ್ನು ರಕ್ಷಿಸಲು ಹಾಗೂ ಹಕ್ಕುಸ್ವಾಮ್ಯದ ಕೃತಿಗಳ ಮಾಲೀಕರಿಗೆ ಯಾವುದೇ ಸರಿಪಡಿಸಲಾಗದ ನಷ್ಟ ಉಂಟಾಗದಂತೆ ನೋಡಿಕೊಳ್ಳಲು 'ಡೈನಾಮಿಕ್ + ಇಂಜಂಕ್ಷನ್' ನೀಡುವುದು ಸೂಕ್ತವೆಂದು ಈ ನ್ಯಾಯಾಲಯವು ಭಾವಿಸಿದೆ. ಏಕೆಂದರೆ ವಾದಿಗಳ ಹಕ್ಕುಸ್ವಾಮ್ಯದ ಕೃತಿಗಳನ್ನು ಉಲ್ಲಂಘಿಸುವ ಡೊಮೇನ್‌ಗಳು / ವೆಬ್‌ಸೈಟ್‌ಗಳು ಹೈಡ್ರಾ-ಹೆಡೆಡ್ ಸ್ವರೂಪದಲ್ಲಿ (ಬಹುವಿಧದಲ್ಲಿ ತಲೆ ಎತ್ತುವುದು) ಮುಂದುವರಿಯುವ, ಹೊಸ ಆವೃತ್ತಿಗಳ ಮೂಲಕ ತಕ್ಷಣವೇ ಈ ಕೃತಿಗಳನ್ನು ಅಪ್‌ಲೋಡ್ ಮಾಡುವ ಸಾಧ್ಯತೆಯಿದೆ" ಎಂದು ನ್ಯಾಯಾಲಯ ಹೇಳಿದೆ.
ಮೋಷನ್ ಪಿಕ್ಚರ್ ಅಸೋಸಿಯೇಷನ್‌ನ ಸದಸ್ಯರಾದ ನೆಟ್‌ಫ್ಲಿಕ್ಸ್, ವಾರ್ನರ್ ಬ್ರದರ್ಸ್, ಆಪಲ್, ಡಿಸ್ನಿ ಮತ್ತು ಕ್ರಂಚಿರೋಲ್ ಅವರು ಜಾಗತಿಕ ಮನರಂಜನಾ ಕಂಪನಿಗಳಾಗಿದ್ದು, ಹಲವಾರು ಚಲನಚಿತ್ರಗಳು ಮತ್ತು ಸರಣಿಗಳ ಹಕ್ಕುಸ್ವಾಮ್ಯಗಳ ಮಾಲೀಕತ್ವ ಹೊಂದಿದ್ದಾರೆ ಎಂದು ಹೈಕೋರ್ಟ್‌ಗೆ ವಿಚಾರಣೆ ವೇಳೆ ತಿಳಿಸಲಾಯಿತು. ತದನಂತರ ನ್ಯಾಯಾಲಯವು ಈ ಆದೇಶವನ್ನು ನೀಡಿತು.
ಕೃತಿಸ್ವಾಮ್ಯ ಉಲ್ಲಂಘಿಸಿದ ಪೈರಸಿ ವೆಬ್‌ಸೈಟ್‌ಗಳಿಗೆ ಅವುಗಳನ್ನು ತೆಗೆದುಹಾಕುವಂತೆ ಟೇಕ್-ಡೌನ್ ನೋಟಿಸ್‌ಗಳನ್ನು ನೀಡಿದ ಹೊರತಾಗಿಯೂ, ಅವರು ಹಕ್ಕುಸ್ವಾಮ್ಯದ ವಿಷಯವನ್ನು ಉಲ್ಲಂಘಿಸುವುದನ್ನು ಮುಂದುವರೆಸಿದ್ದಾರೆ, ಇದರಿಂದಾಗಿ ಅರ್ಜಿದಾರ ಸಂಸ್ಥೆಗಳಿಗೆ ಗಮನಾರ್ಹ ಆರ್ಥಿಕ ನಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಪ್ರಕರಣವನ್ನು ಪರಿಗಣಿಸಿದ ಪೀಠವು, ವಾದಿಗಳು ಹಕ್ಕುಸ್ವಾಮ್ಯಗಳ ಮಾಲೀಕರಾಗಿದ್ದು ಅವುಗಳನ್ನು ಉಲ್ಲಂಘಿಸುವ ವೆಬ್‌ಸೈಟ್‌ಗಳು ನೈಜ-ಸಮಯದಲ್ಲಿ ಈ ಕಾರ್ಯಕ್ರಮಗಳನ್ನು ಅಂತರ್ಜಾಲದಲ್ಲಿ ಸ್ಟ್ರೀಮಿಂಗ್ ಮಾಡುತ್ತಿದ್ದು, ಡೌನ್‌ಲೋಡ್ ಮಾಡಿಕೊಳ್ಳಲು ಸಹ ಅನುಮತಿಸುತ್ತಿವೆ ಎನ್ನುವುದನ್ನು ಗಮನಿಸಿತು. ಪೈರಸಿ ವೆಬ್‌ಸೈಟ್‌ಗಳ ಅನಧಿಕೃತ ಉಲ್ಲಂಘನೆಯು ದೂರುದಾರರಿಗೆ ಗಮನಾರ್ಹ ಆರ್ಥಿಕ ನಷ್ಟವನ್ನು ಉಂಟುಮಾಡಬಹುದಾಗಿದ್ದು, ಈ ವಿಚಾರದಲ್ಲಿ ತ್ವರಿತ ಹಸ್ತಕ್ಷೇಪ ಅಗತ್ಯವಿರುವುದನ್ನು ನ್ಯಾಯಾಲಯವು ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ಅದು ಡೈನಮಿಕ್ + ಪ್ರತಿಬಂಧಕ ಆದೇಶವನ್ನು ನೀಡಿತು.
ಆದೇಶದ ಅನ್ವಯ ಡೊಮೇನ್ ಹೆಸರು ನೊಂದಾವಣಿದಾರರಿಗೆ 72 ಗಂಟೆಗಳ ಒಳಗೆ ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ವೆಬ್‌ಸೈಟ್‌ಗಳನ್ನು ಲಾಕ್ ಮಾಡಿ ಅಮಾನತುಗೊಳಿಸುವಂತೆ ಆದೇಶಿಸಿತು. ಇದೇ ವೇಳೆ, ಮುಚ್ಚಿದ ಲಕೋಟೆಯಲ್ಲಿ ಮೂಲ ಚಂದಾದಾರರ ಮಾಹಿತಿ (ಬಿಎಸ್‌ಐ) ವಿವರಗಳನ್ನು ಒದಗಿಸುವಂತೆಯೂ ಅದು ಸೂಚಿಸಿತು. ಅಲ್ಲದೆ, ಅಂತರ್ಜಾಲ ಸೇವೆಯನ್ನು ಒದಗಿಸುವ ಸಂಸ್ಥೆಗಳು ಈ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು 72 ಗಂಟೆಗಳ ಒಳಗೆ ನಿರ್ಬಂಧಿಸುವಂತೆ ನಿರ್ದೇಶನ ನೀಡಿತು.
ವಕೀಲರಾದ ಸಿದ್ಧಾರ್ಥ್ ಚೋಪ್ರಾ, ರಾಘವ್ ಗೋಯಲ್, ಮೆಹರ್. ಸಿಧು, ಎ. ಮೋಯಿನ್ ಮತ್ತು ಆದಿತ್ಯ ಸಿಂಗ್ ಠಾಕೂರ್ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದರು.
ವಕೀಲರಾದ ಯಶ್ ರಾಜ್ ಮತ್ತು ಗೀತಾಂಜಲಿ ವಿಶ್ವನಾಥನ್ ಅವರು ಎರಡು ಡೊಮೇನ್ ಹೆಸರು ನೋಂದಣಿದಾರರ ಪರವಾಗಿ ವಾದ ಮಂಡಿಸಿದರು.