ಇ-ವಾಹನ ಖರೀದಿದಾರರಿಗೆ ವಿಳಂಬ ಮಾಡದೆ ಸಬ್ಸಿಡಿ ಪಾವತಿಸಿ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ನಗರದಲ್ಲಿ ಖರೀದಿಸುತ್ತಿರುವ ಹೊಸ ವಾಹನಗಳಲ್ಲಿ ಶೇ.25ರಷ್ಟು ವಿದ್ಯುತ್ ವಾಹನಗಳಾಗಿರಬೇಕು ಎಂಬ ಸರ್ಕಾರದ ಗುರಿ ಈಡೇರಿಸುವ ಸಲುವಾಗಿ 2020ರ ವಿದ್ಯುತ್ ವಾಹನ ನೀತಿಯಡಿ ವಿದ್ಯುತ್ ವಾಹನ ಖರೀದಿದಾರರಿಗೆ ಸಬ್ಸಿಡಿ ಒದಗಿಸಲಾಗುತ್ತಿದೆ.
Electric vehicle
Electric vehicle
Published on

ಎಲೆಕ್ಟ್ರಿಕ್ ವಾಹನ ಖರೀದಿಸಿದ ಗ್ರಾಹಕರಿಗೆ ನೀಡಬೇಕಾದ ಸಬ್ಸಿಡಿ ವಿತರಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ [ಜನ್ ಸೇವಾ ಕಲ್ಯಾಣ ಸಂಘ  ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ] .

2020ರ ದೆಹಲಿ ಎಲೆಕ್ಟ್ರಿಕ್ ವಾಹನ ನೀತಿಯು ಸಬ್ಸಿಡಿ ಮೊತ್ತ ವಿತರಿಸಲು ಕಾಲಮಿತಿ ನಿಗದಿಪಡಿಸಿಲ್ಲ ಎಂಬ ಅಂಶವನ್ನೇ  ಸರ್ಕಾರ ನೆಪವಾಗಿಸಿಕೊಳ್ಳಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಬುದ್ಧಿವಾದ ಹೇಳಿತು.

Also Read
ದೆಹಲಿಯಲ್ಲಿ ಹಳೆಯ ವಾಹನ ನಿಷೇಧಿಸದಂತೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಆದೇಶ

ಸರ್ಕಾರದ ಬಳಿ ಹಣ ಇದ್ದರೂ ಕಾರ್ಯವಿಧಾನದ ಸಮಸ್ಯೆಗಳಿಂದಾಗಿ ವಿತರಣೆ ವಿಳಂಬವಾಗುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ 2020ರ ದೆಹಲಿ ಎಲೆಕ್ಟ್ರಿಕ್ ವಾಹನ ನೀತಿಯು ಮೊತ್ತ  ವಿತರಿಸಲು ಕಾಲಮಿತಿ ನಿಗದಿಪಡಿಸಿಲ್ಲ ಎಂಬ ಅಂಶವನ್ನೇ  ಸರ್ಕಾರ ಗುರಾಣಿಯಾಗಿ ಮಾಡಿಕೊಂಡಿದೆ. ಸರ್ಕಾರಕ್ಕೆ ಇದು ಆಧಾರವಾಗಬಾರದು ಎಂದು ನುಡಿಯಿತು.

ಆದ್ದರಿಂದ, ಸಬ್ಸಿಡಿ ಮೊತ್ತದ ವಿತರಣೆಗಾಗಿ ತ್ವರಿತವಾಗಿ ಬ್ಯಾಂಕ್ ಖಾತೆ ರಚಿಸುವಂತೆ ಸ್ಥಾಪಿಸಲು ದೆಹಲಿ ಸರ್ಕಾರದ ಸಾರಿಗೆ ಇಲಾಖೆಗೆ ಅದು ಆದೇಶಿಸಿತು.

ದೆಹಲಿ ಸರ್ಕಾರ  ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ, ದೆಹಲಿ ಸರ್ಕಾರ  ಇನ್ನೂ ₹48 ಕೋಟಿಗೂ ಹೆಚ್ಚು ಸಬ್ಸಿಡಿ  ವಿತರಿಸಬೇಕಾಗಿದೆ ಎಂದು ಜನ ಸೇವಾ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿವರಿಸಲಾಗಿತ್ತು.   

78,000ಕ್ಕೂ ಹೆಚ್ಚು ಫಲಾನುಭವಿಗಳು ₹179 ಕೋಟಿಗೂ ಹೆಚ್ಚು ಸಬ್ಸಿಡಿ ಪಡೆದಿದ್ದು ವಿಳಂಬ ಉಂಟಾಗದಂತೆ ತಡೆಯಲು ಬ್ಯಾಂಕ್ ಖಾತೆ ಸ್ಥಾಪಿಸಲಾಗುತ್ತಿದೆ ಎಂದು ದೆಹಲಿ ಸರ್ಕಾರದ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

Also Read
ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್

ವಾದ ಆಲಿಸಿದ ನ್ಯಾಯಾಲಯ, ಅಗತ್ಯವಿರುವ ಇಲಾಖೆಗಳಿಂದ ಅನುಮತಿ ಪಡೆದ ಕೂಡಲೇ  ಖಾತೆ  ಸ್ಥಾಪಿಸಬೇಕು ಎಂದು ಹೇಳಿದೆ.

ಕಾರ್ಯವಿಧಾನ ವಿಳಂಬಗಳನ್ನು ತಕ್ಷಣವೇ ಪರಿಹರಿಸಿಕೊಂಡು ಮತ್ತು ಹೊಸ ಬ್ಯಾಂಕ್ ಖಾತೆಯನ್ನು ಸ್ಥಾಪಿಸಿದ ನಂತರ, ಪಾವತಿಯನ್ನು ತ್ವರಿತವಾಗಿ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com