

ಹುಳುಗಳ ಪ್ರತಿಕ್ರಿಯೆ ಆಧರಿಸಿ ಮಾನವ ದೇಹದ ಜೈವಿಕ ಮಾದರಿಗಳ ಆಘ್ರಾಣದ ಮೂಲಕ ಕ್ಯಾನ್ಸರ್ ಪತ್ತೆಹಚ್ಚುವ ಕುರಿತು ಪೇಟೆಂಟ್ ನೀಡದೆ ಇರುವುದನ್ನು ಪ್ರಶ್ನಿಸಿ ಜಪಾನ್ ಮೂಲದ ಹಿರೋಟ್ಸು ಬಯೋ ಸೈನ್ಸ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ [ಹಿರೋಟ್ಸು ಬಯೋ ಸೈನ್ಸ್ ಇಂಕ್ ಮತ್ತು ಪೇಟೆಂಟ್ಸ್ ಅಂಡ್ ಡಿಸೈನ್ಸ್ ಸಹಾಯಕ ನಿಯಂತ್ರಕರ ನಡುವಣ ಪ್ರಕರಣ].
ಪೇಟೆಂಟ್ ಕಚೇರಿಯ ಆದೇಶ ಎತ್ತಿಹಿಡಿದ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರು ಭಾರತೀಯ ಪೇಟೆಂಟ್ ಕಾಯಿದೆಯ ಸೆಕ್ಷನ್ 3(i) ಅಡಿಯಲ್ಲಿ ವಿಧಿಸಿರುವ ನಿಷೇಧದ ವ್ಯಾಪ್ತಿಗೆ ಆವಿಷ್ಕಾರ ಬರುತ್ತದೆ ಎಂದು ತೀರ್ಪು ನೀಡಿದ್ದಾರೆ.
ಪೇಟೆಂಟ್ ಕಾಯಿದೆಯ ಸೆಕ್ಷನ್ 3(i)ರ ಪ್ರಕಾರ ಮಾನವರು ಅಥವಾ ಪ್ರಾಣಿಗಳಲ್ಲಿನ ರೋಗಗಳನ್ನು ನಿರ್ಣಯಿಸಲು, ತಡೆಯಲು ಅಥವಾ ಚಿಕಿತ್ಸೆ ನೀಡಲು ಬಳಸುವ ಯಾವುದೇ ವಿಧಾನಗಳನ್ನು ಪೇಟೆಂಟ್ ನೀಡುವ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ.
“ಪೇಟೆಂಟ್ ಪಡೆಯಲು ಪ್ರಯತ್ನಿಸಲಾಗಿರುವ ಈ ಪ್ರಕ್ರಿಯೆ ಕೇವಲ ಕ್ಯಾನ್ಸರ್ ಸಂಭವಿಸುವ ಮೊದಲು ಅದರ ಪರಿಶೀಲನೆಗೆ (ಸ್ಕ್ರೀನಿಂಗ್) ಸೀಮಿತವಾಗಿಲ್ಲ. ಬದಲಾಗಿ, ಇದು ಸಾಮಾನ್ಯವಾಗಿ ಕ್ಯಾನ್ಸರ್ ರೋಗನಿರ್ಣಯ ಮಾಡುವ ವಿಧಾನವಾಗಿಯೂ ಇದೆ. ಆದ್ದರಿಂದ, ಅರ್ಜಿಯಲ್ಲಿ ಉಲ್ಲೇಖಿಸಿದ ಆವಿಷ್ಕಾರ ಕಾಯಿದೆಯ ಸೆಕ್ಷನ್ 3(i) ವ್ಯಾಪ್ತಿಗೆ ಬರುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪೇಟೆಂಟ್ ಮತ್ತು ವಿನ್ಯಾಸಗಳ ಸಹಾಯಕ ನಿಯಂತ್ರಕರು ಆಗಸ್ಟ್ 2023ರಲ್ಲಿ ಪೇಟೆಂಟ್ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಹಿರೋಟ್ಸು ಬಯೋ ಸೈನ್ಸ್ ಕಂಪನಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.
ಕೇನೊರ್ಹ್ಯಾಬ್ಡಿಟಿಸ್ ಎಲಿಗನ್ಸ್ ಎಂಬ ನೇಮಾಟೋಡ್ ಹುಳುವಿನ ವರ್ತನೆಯನ್ನು ಬಳಸಿಕೊಂಡು ಕ್ಯಾನ್ಸರ್ ಪತ್ತೆಹಚ್ಚುವ ವಿಧಾನಕ್ಕೆ ಪೇಟೆಂಟ್ ಪಡೆಯಲು ಕಂಪೆನಿ ಅರ್ಜಿ ಸಲ್ಲಿಸಿತ್ತು. ಕಂಪನಿಯ ಪ್ರಕಾರ, ಈ ಹುಳುಗಳು ಮೂತ್ರದಂತಹ ಮಾದರಿಗಳಲ್ಲಿರುವ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಶಿಷ್ಟ ವಾಸನೆಗಳತ್ತ ಆಕರ್ಷಿತವಾಗುತ್ತವೆ. ಇದರಿಂದ ಅನೇಕ ವಿಧದ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಈ ಆವಿಷ್ಕಾರವು ಕೇವಲ ಪ್ರಾಥಮಿಕ ಪತ್ತೆ ಸಾಧನವಾಗಿದ್ದು, ವೈದ್ಯಕೀಯ ರೋಗನಿರ್ಣಯಕ್ಕೆ ಸಮಾನವಲ್ಲ ಎಂದು ಕಂಪನಿ ವಾದಿಸಿತು. ಕಾನೂನಿನ ಪ್ರಕಾರ ಪೇಟೆಂಟ್ ನೀಡಲಾಗದ ರೋಗನಿರ್ಣಯ ವಿಧಾನಗಳು ವೈದ್ಯಕೀಯ ತಜ್ಞರ ಕ್ಲಿನಿಕಲ್ ತೀರ್ಮಾನವನ್ನು ಒಳಗೊಂಡಿರಬೇಕು; ಆದರೆ ತನ್ನ ತಂತ್ರಜ್ಞಾನ ಮಾನವ ದೇಹದ ಹೊರಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದರಿಂದ, ಕೇವಲ ಕ್ಯಾನ್ಸರ್ ಅಪಾಯದ ಸೂಚನೆ ನೀಡುತ್ತದೆ ಎಂಬುದು ಕಂಪನಿಯ ವಾದವಾಗಿತ್ತು.
ಆದರೆ ನ್ಯಾಯಾಲಯ ಈ ವ್ಯತ್ಯಾಸವನ್ನು ಮಾನ್ಯ ಮಾಡಲಿಲ್ಲ. “ಈ ವಿಧಾನವನ್ನು ಯಾರು ನಡೆಸುತ್ತಾರೆ ಎಂಬುದು ಪ್ರಸ್ತುತವಲ್ಲ. ಈ ಸೆಕ್ಷನ್ ಅನ್ನು (ಭಾರತೀಯ ಪೇಟೆಂಟ್ ಕಾಯಿದೆಯ ಸೆಕ್ಷನ್ 3(i)) ಕೇವಲ ವೈದ್ಯಕೀಯ ತಜ್ಞರು ಅನುಸರಿಸುವ ವಿಧಾನಗಳಿಗೆ ಮಾತ್ರ ಸೀಮಿತಗೊಳಿಸಿದರೆ, ಸಂಪೂರ್ಣ ಸ್ವಯಂಚಾಲಿತ ಪತ್ತೆ ವಿಧಾನಗಳು ಪೇಟೆಂಟ್‌ಗೆ ಅರ್ಹವಾಗುವಂತಹ ಸಂಕಷ್ಟಕರ ಪರಿಸ್ಥಿತಿ ಉಂಟಾಗುತ್ತದೆ,” ಎಂದು ನ್ಯಾಯಾಲಯ ತಿಳಿಸಿದೆ. ಅಂತಿಮವಾಗಿ, ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್, ಪೇಟೆಂಟ್ ಕಚೇರಿಯ ಆದೇಶವನ್ನು ಎತ್ತಿಹಿಡಿಯಿತು.
[ತೀರ್ಪಿನ ಪ್ರತಿ]