ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ಗೌತಮ್ ಕುಮಾರ್ ಲಾಹಾ ಮತ್ತು ಎನ್‌ಎಚ್‌ಎಐ ಇನ್ನಿತರರ ನಡುವಣ ಪ್ರಕರಣ].
ದ್ವಿಚಕ್ರ ವಾಹನಗಳ ಪ್ರವೇಶ ನಿರ್ಬಂಧ ಇರುವ ಎಕ್ಸ್‌ಪ್ರೆಸ್‌ವೇಗಳಿಗೆ ಪ್ರವೇಶಾತಿ ನಿಷೇಧಿಸಿ 2018ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಗೌತಮ್ ಕುಮಾರ್ ಲಾಹಾ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು. ತಪ್ಪಿತಸ್ಥ ದ್ವಿಚಕ್ರವಾಹನ ಸವಾರರಿಗೆ ₹20,000 ದಂಡ ವಿಧಿಸುವುದನ್ನು ಕೂಡ ಅರ್ಜಿ ಪ್ರಶ್ನಿಸಿತ್ತು.
ಮೋಟಾರು ಸೈಕಲ್ ಸವಾರ ಸಿದಂತ್ ಮಲೈಯಾ ಸಲ್ಲಿಸಿದ್ದ ಮತ್ತೊಂದು ರಿಟ್ ಅರ್ಜಿಯಲ್ಲಿ 2018ರ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಲಾಗಿತ್ತು. ಎಲ್ಲಾ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವಂತೆ ಅವರು ಮನವಿ ಸಲ್ಲಿಸಿದ್ದರು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳ ಬಳಕೆಗೆ ಮಾರ್ಗಸೂಚಿಗಳನ್ನು ರೂಪಿಸುವಂತೆಯೂ ಕೋರಿದ್ದರು.
ಯುವರಾಜ್ ಫ್ರಾನ್ಸಿಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಮನವಿ ತಿರಸ್ಕರಿಸಿದೆ.
ಯುವರಾಜ್ ಫ್ರಾನ್ಸಿಸ್ ಪ್ರಕರಣದಲ್ಲಿ , ಅತಿ ವೇಗದ ವಾಹನಗಳು ಚಲಿಸುವ ಎಕ್ಸ್‌ಪ್ರೆಸ್‌ವೇಗಳನ್ನು ದ್ವಿಚಕ್ರ ವಾಹನಗಳು ಬಳಸುವುದು ಸುರಕ್ಷಿತವಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಆ ತೀರ್ಪು ಕೂಡ ವಿಭಾಗೀಯ ಪೀಠದಿಂದಲೇ ಪ್ರಕಟವಾಗಿರುವುದರಿಂದ, ಅದರಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ.
ಆದರೆ ₹ 20,000 ದಂಡ ವಿಧಿಸುವುದಕ್ಕೆ ಸಂಬಂಧಿಸಿದಂತೆ, ಎನ್‌ಎಚ್‌ಎಐಗೆ ಪತ್ರ ಬರೆಯಲು ಅರ್ಜಿದಾರ ಗೌತಮ್ ಕುಮಾರ್ ಲಾಹಾಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿತು. ಅವರು ಸಲ್ಲಿಸಿದ ಅರ್ಜಿಯ ಬಗ್ಗೆ ನಾಲ್ಕು ವಾರದೊಳಗೆ ನಿರ್ಧಾರ ಕೈಗೊಳ್ಳುವಂತೆ ಎನ್‌ಎಚ್‌ಎಐ ಗೆ ನ್ಯಾಯಾಲಯ ನಿರ್ದೇಶಿಸಿದೆ.