Delhi HC, Dalai Lama
Delhi HC, Dalai Lama

ದಲೈ ಲಾಮಾ ಮಗು ಚುಂಬಿಸಿದ್ದು ತಮಾಷೆಯಿಂದ: ಪೋಕ್ಸೊ ಮೊಕದ್ದಮೆ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

"ಘಟನೆ ಬಗ್ಗೆ ದಲೈಲಾಮಾ ಕ್ಷಮೆಯಾಚಿಸಿದ್ದಾರೆ. ಅದೊಂದು ತಮಾಷೆಯ ಘಟನೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನು ಟಿಬೆಟ್ಟಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.
Published on

ತನ್ನ ಆಶೀರ್ವಾದ ಪಡೆಯಲು ಬಂದಿದ್ದ ಬಾಲಕನ ತುಟಿ ಚುಂಬಿಸಿದ್ದಕ್ಕಾಗಿ ಬೌದ್ಧ ಗುರು ದಲೈ ಲಾಮಾ ಅವರ ವಿರುದ್ಧ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ [ಎನ್‌ಜಿಒಗಳ ಒಕ್ಕೂಟ ಮತ್ತಿತರರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸರ್ಕಾರೇತರ ಸಂಸ್ಥೆಗಳ ಗುಂಪೊಂದು ಸಲ್ಲಿಸಿದ್ದ ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ  ತಿರಸ್ಕರಿಸಿತು.

"ಘಟನೆಯ ಬಗ್ಗೆ ದಲೈ ಲಾಮಾ ಕ್ಷಮೆಯಾಚಿಸಿದ್ದಾರೆ. ಅದೊಂದು ತಮಾಷೆಯ ಘಟನೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನು ಟಿಬೆಟ್ಟಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.

Also Read
ಧಾರ್ಮಿಕ ಸಭೆಗಳಲ್ಲಿ ಮತಾಂತರ ಮುಂದುವರೆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ: ಅಲಾಹಾಬಾದ್ ಹೈಕೋರ್ಟ್

ಸಮಾರಂಭವೊಂದರಲ್ಲಿ ಲಾಮಾರನ್ನು ಕಂಡು ಗೌರವಿಸಲು ಬಂದಿದ್ದ ಬಾಲಕನ ತುಟಿಗಳಿಗೆ ದಲೈ ಲಾಮಾ ಚುಂಬಿಸಿದ್ದರು. ನಂತರ ಲಾಮಾ ಅವರು ಮಗುವಿಗೆ ತನ್ನ ತುಟಿಗಳನ್ನು ಸವಿಯಲು ಹೇಳಿದ್ದ ವಿಡಿಯೋ ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ದಲೈಲಾಮ ಕ್ಷಮೆಯಾಚಿಸಿದ್ದರು.

ಘಟನೆ ಒಂದೂವರೆ ವರ್ಷಕ್ಕಿಂತ ಹಳೆಯದಾಗಿದ್ದು, ಘಟನೆ ಸಾರ್ವಜನಿಕವಾಗಿ ನಡೆದಿರುವಂತದ್ದಾಗಿದೆ. ಮಗುವೇ ದಲೈ ಲಾಮಾ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿ ಸಭೆಗೆ ಆಗಮಿಸಿತ್ತು ಎಂದು ಹೈಕೋರ್ಟ್‌ ವಿವರಿಸಿದೆ.

ವಿಡಿಯೋವನ್ನು ಒಟ್ಟಾರೆ ದೃಷ್ಟಿಕೋನದಿಂದ ನೋಡಿದರೆ ದಲೈ ಲಾಮಾ ಮಗುವನ್ನು ತಮಾಷೆ ಮಾಡಲು ಯತ್ನಿಸಿದ್ದಾರೆ ಎನ್ನಬಹುದು. ಇದನ್ನು ಟಿಬೆಟ್‌ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು. ಲಾಮಾ ಅವರು ವಿದೇಶಿ ಶಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರದ ಧಾರ್ಮಿಕ ಪಂಗಡದ ಮುಖ್ಯಸ್ಥರಾಗಿದ್ದಾರೆ ಎಂಬುದನ್ನು ಸಹ ಈ ನ್ಯಾಯಾಲಯ ಪರಿಗಣಿಸುತ್ತಿದೆ. ತಮ್ಮ ಕೃತ್ಯದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ದಲೈ ಲಾಮ ಈಗಾಗಲೇ ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.   

ಈ ವಿಡಿಯೋವನ್ನು ಹಲವು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ್ದು, ಮಗುವಿನ ಗುರುತನ್ನಾದರೂ ಮಸುಕು ಮಾಡುವಂತೆ ಆದೇಶ ಹೊರಡಿಸಬೇಕು. ಅಲ್ಲದೆ ಅಧಿಕಾರಿಗಳೇ ಮಧ್ಯಪ್ರವೇಶಿಸಿ ಇಡೀ ಘಟನೆ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

Also Read
ಮುಸ್ಲಿಂ ವಕೀಲರ ವಿರುದ್ಧ ಧಾರ್ಮಿಕ ತಾರತಮ್ಯ: ನ್ಯಾಯಾಧೀಶರೊಬ್ಬರಿಗೆ ಅಲಾಹಾಬಾದ್ ಹೈಕೋರ್ಟ್ ಸಮನ್ಸ್

“ಗುರುಗಳಾದ ದಲೈ ಲಾಮಾ ಅವರನ್ನು ನಾನು ಇಲ್ಲಿ ವಿಚಕ್ಷಣೆಗೆ ಒಳಪಡಿಸುತ್ತಿಲ್ಲ ಆದರೆ  ಅಧಿಕಾರಿಗಳೇ ಮಧ್ಯಪ್ರವೇಶಿಸಿ ಇಡೀ ಘಟನೆ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು… ಈ ಘಟನೆ ಮಗುವಿನ ತುಟಿಗೆ ಚುಂಬಿಸುವುದನ್ನು ಸಾಮಾನ್ಯಗೊಳಿಸುತ್ತದೆ. ಇಂತಹ ಕೃತ್ಯದಲ್ಲಿ ಭಾಗವಹಿಸುವಂತೆ ಒತ್ತಾಯಿಸುವ ಅನೇಕ ಬಾಬಾಗಳು ಗುರುಗಳು ಇದ್ದಾರೆ” ಎಂದು ವಿವರಿಸಿದರು.

ಆದರೆ ಪಿಐಎಲ್‌ನಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನ್ಯಾಯಾಲಯ ಹೇಳಿತು.

“ಜನರನ್ನು ಥಳಿಸುವ ಮತ್ತು ಒದೆಯುವ ಅನೇಕ ಬಾಬಾಗಳು ಇದ್ದಾರೆ. ನಾವು ಏನು ಮಾಡುವುದು? ಜನರು ಅದಕ್ಕೆ ಹೊಂದಿಕೊಂಡಿದ್ದಾರೆ... ಮುಂದೊಮ್ಮೆ ಯಾರಾದರೂ ಬಂದು ತಮಗೆ ಹಸ್ತಲಾಘವ ನೀಡಿದ್ದು ಕೆಟ್ಟ ಅಭಿರುಚಿಯಿಂದ ಕೂಡಿತ್ತು ಎಂದು ದೂರಲೂಬಹುದು” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹೇಳಿದರು.

ವಿಡಿಯೋದಿಂದಾಗಿ ಮಗುವಿನ ಪಾಲಕರಿಗೆ ನೋವುಂಟಾಗಿದ್ದರೆ ಅವರು ಕ್ರಮಕ್ಕೆ ಮುಂದಾಗಬೇಕು ಎಂದು ನ್ಯಾಯಾಲಯ ನುಡಿಯಿತು.

Kannada Bar & Bench
kannada.barandbench.com