

ಬ್ರಿಟಾನಿಯಾದ ಲಿಟಲ್ ಹಾರ್ಟ್ಸ್ ಬಿಸ್ಕೆಟ್‌ಗಳನ್ನು ಹೋಲುವ ವಾಣಿಜ್ಯ ಚಿಹ್ನೆ ಮತ್ತು ಆಕಾರ ಬಳಸಿಕೊಂಡು ನಕಲಿ ಬಿಸ್ಕೆಟ್ ತಯಾರಿಸಿ ಮಾರಾಟ ಮಾಡದಂತೆ ವಿವಿಧ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ [ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಶ್ರೀ ಸ್ವಸ್ತಿಕ್ ಆರ್ಗಾನಿಕ್ಸ್ ಇನ್ನಿತರರ ನಡುವಣ ಪ್ರಕರಣ] .
ಇಂತಹ ಉತ್ಪನ್ನಗಳನ್ನು ತನ್ನ ಸರಕು ಪಟ್ಟಿಯಿಂದ ತೆಗೆದುಹಾಕುವಂತೆ ಇ ವಾಣಿಜ್ಯ ದೈತ್ಯ ಕಂಪೆನಿ ಅಮೆಜಾನ್‌ಗೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ನಿರ್ದೇಶನ ನೀಡಿದರು.
ಪ್ರತಿವಾದಿಗಳು ಸಂಖ್ಯೆ 1 ರಿಂದ 4ರವರೆಗೆ, ಅವರ ಪಾಲುದಾರರು, ಮುಖ್ಯಸ್ಥರು, ಮಾಲೀಕರು, ನಿರ್ದೇಶಕರು, ಅಧಿಕಾರಿಗಳು, ನೌಕರರು, ಏಜೆಂಟ್‌ಗಳು, ವಿತರಕರು, ಫ್ರಾಂಚೈಸಿಗಳು, ಪೂರೈಕೆದಾರರು, ಲೈಸೆನ್ಸಿಗಳು, ಸಹ ಸಂಸ್ಥೆಗಳು, ಉಪಕಂಪನಿಗಳು, ಪ್ರತಿನಿಧಿಗಳು, ಗುಂಪು ಕಂಪನಿಗಳು ಮತ್ತು ನಿಯೋಜಿತರು ಯಾರೇ ಆಗಿರಲಿ ಅವರು ಲಿಟಲ್ ಹಾರ್ಟ್ಸ್ ಹೆಸರಿನ ಅಥವಾ ಅದನ್ನು ಹೋಲುವ ಯಾವುದೇ ವಾಣಿಜ್ಯ ಚಿಹ್ನೆಇಲ್ಲವೇ ಆಕಾರ ಅಥವಾ ಹೆಸರನ್ನು ಬಳಸಿಕೊಂಡು ಬಿಸ್ಕೆಟ್ ತಯಾರಿಕೆ ಮಾರಾಟ, ಜಾಹೀರಾತು ಇಲ್ಲವೇ ಮೂರನೇ ವ್ಯಕ್ತಿಗಳಿಗೆ ನೀಡದಂತೆ ಎಲ್ಲಾ ರೀತಿಯಲ್ಲಿಯೂ ನಿಷೇಧಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ತನ್ನ ವಾಣಿಜ್ಯ ಚಿಹ್ನೆ ಬಳಸಿ ನಕಲಿ ಬಿಸ್ಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಬ್ರಿಟಾನಿಯಾ ಮೊಕದ್ದಮೆ ಹೂಡಿತ್ತು. 1988ರಿಂದಲೇ ಲಿಟಲ್ ಹಾರ್ಟ್ಸ್ ಗುರುತನ್ನು ತಾನು ಬಳಸುತ್ತಿದ್ದು 1993ರಲ್ಲಿ ಸಕ್ಕರೆ ಲೇಪಿತ, ಹೃದಯ ಆಕಾರದ ಬಿಸ್ಕೆಟ್‌ಗಳ ಮಾರಾಟ ಆರಂಭಿಸಿದೆ. ಪದದ ಗುರುತು ಹಾಗೂ ಬಿಸ್ಕೆಟ್ಟಿನ ಮೂರು ಆಯಾಮದ ಆಕಾರಗಳೆರಡಕ್ಕೂ ಸಂಬಂಧಿಸಿದಂತೆ ನೋಂದಾಯಿತ ವಾಣಿಜ್ಯ ಹಕ್ಕುಗಳನ್ನು ತಾನು ಹೊಂದಿರುವುದಾಗಿ ಬ್ರಿಟಾನಿಯಾ ಹೇಳಿತ್ತು.
ಅಮೆಜಾನ್‌ನಲ್ಲಿ ಶ್ರೀ ಸ್ವಸ್ತಿಕ್ ಆರ್ಗ್ಯಾನಿಕ್ಸ್ ಹಾಗೂ ಸಂಬಂಧಿತ ವ್ಯಕ್ತಿಗಳು “ಲಿಟಲ್ ಹಾರ್ಟ್ಸ್” ಹೆಸರಿನಲ್ಲಿ ಬಿಸ್ಕೆಟ್ ಮಾರಾಟ ಮಾಡುತ್ತಿರವುದು ತನ್ನ ಗಮನಕ್ಕೆ ಬಂದಿದೆ ಪಟ್ಟಿಯಲ್ಲಿ ಬ್ರಿಟಾನಿಯಾ ಲಿಟಲ್ ಹಾರ್ಟ್ಸ್ ಎಂತಲೇ ಇದ್ದು ಬ್ರಿಟಾನಿಯ ಮೂಲ ಪ್ಯಾಕೇಜಿಂಗ್‌ನ ಚಿತ್ರಗಳನ್ನು ನಕಲು ಮಾಡಲಾಗಿದೆ ಎಂದು ಅದು ದೂರಿತ್ತು.
ಈ ನಡೆ ಬ್ರಿಟಾನಿಯಾದ ಸದುದ್ದೇಶ ಮತ್ತು ಖ್ಯಾತಿಯನ್ನು ದುರುದ್ದೇಶದಿಂದ ಬಳಸಿಕೊಳ್ಳುವ ಪ್ರಯತ್ನ ಎಂದ ನ್ಯಾಯಾಲಯ ಪ್ರತಿವಾದಿಗಳು ನಕಲಿ ವಾಣಿಜ್ಯ ಚಿಹ್ನೆ ಮತ್ತು ಆಕಾರವನ್ನು ಬಳಸದಂತೆ ನಿಷೇಧಿಸಿ ಮಧ್ಯಂತರ ಆದೇಶ ಪ್ರಕಟಿಸಿತು. ಅಲ್ಲದೆ ಇಂತಹ ಉತ್ಪನ್ನಗಳ ಪಟ್ಟಿಯನ್ನು ಅಮೆಜಾನ್ ತೆಗೆದು ಹಾಕುವಂತೆ ಸೂಚಿಸಿತು.
[ಆದೇಶದ ಪ್ರತಿ]