
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ, ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ಪ್ರಸ್ತುತ ಜೈಲಿನಲ್ಲಿರುವ ಅಬ್ದುಲ್ ರಶೀದ್ ಶೇಖ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರು ಸಂಸತ್ ಅಧಿವೇಶನಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರತಿಕ್ರಿಯೆ ಕೇಳಿದೆ
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮತ್ತು ನ್ಯಾಯಮೂರ್ತಿ ರಜನೀಶ್ ಕುಮಾರ್ ಗುಪ್ತಾ ಅವರಿದ್ದ ಪೀಠ ಈ ಸಂಬಂಧ ಎನ್‌ಐಎಗೆ ನೋಟಿಸ್ ಜಾರಿ ಮಾಡಿತು.
ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ರಶೀದ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 2019ರಲ್ಲಿ ಅವರನ್ನು ಬಂಧಿಸಲಾಗಿತ್ತು.
2024 ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಮ್ಮು ಮತ್ತು ಕಾಶ್ಮೀರದ ಹಾಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ರಶೀದ್ ಸಂಸದರಾಗಿ ಚುನಾಯಿತರಾಗಿದ್ದರು.
ರಶೀದ್ ಈ ಹಿಂದೆ ಜಾಮೀನಿಗಾಗಿ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಆದರೆ ಸಂಬಂಧಪಟ್ಟ ಜನ ಪ್ರತಿನಿಧಿಗಳ ನ್ಯಾಯಾಲಯವಷ್ಟೇ ಇದನ್ನು ವಿಚಾರಣೆ ನಡೆಸಬಹುದು ಎಂದು ತಿಳಿಸಿ ನಂತರ ಪ್ರಕರಣದ ವಿಚಾರಣೆ ಕೈಬಿಟ್ಟಿತ್ತು. ಹೀಗಾಗಿ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಎನ್‌ಐಎ ನ್ಯಾಯಾಲಯ ವಿಚಾರಣೆ ನಡೆಸಬೇಕೆ ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಬೇಕೆ ಎಂಬ ಗೊಂದಲ ಎದ್ದಿತ್ತು.
ಅಂತಿಮವಾಗಿ, ಫೆಬ್ರವರಿ 10ರಂದು ಸುಪ್ರೀಂ ಕೋರ್ಟ್, ಎನ್‌ಐಎ ವಿಶೇಷ ನ್ಯಾಯಾಲಯವೇ ರಶೀದ್ ಅವರ ಅರ್ಜಿ ವಿಚಾರಣೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿತು. ನಂತರ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತು. ಮಾರ್ಚ್ 19ರಂದು ತೀರ್ಪು ಪ್ರಕಟವಾಗಲಿದೆ.
ಈ ಮಧ್ಯೆ, ಮಾರ್ಚ್ 10ರಂದು ಪ್ರಾರಂಭವಾದ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ಕೋರಿ ರಶೀದ್ ಹೈಕೋರ್ಟ್ ಮೊರೆ ಹೋಗಿದ್ದರು.
ಲೋಕಸಭಾ ಅಧಿವೇಶನದ ಎರಡನೇ ಭಾಗದಲ್ಲಿ ಹಾಜರಾಗಲು ಅನುಮತಿ ಕೋರಿ ರಶೀದ್ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 10ರಂದು ವಿಶೇಷ ಎನ್‌ಐಎ ನ್ಯಾಯಾಲಯ ತಿರಸ್ಕರಿಸಿದೆ ಎಂಬ ವಿಚಾರವನ್ನು ಬುಧವಾರದ ವಿಚಾರಣೆ ವೇಳೆ ನ್ಯಾಯಾಲಯ ಗಮನಿಸಿದೆ.
ಸಂಸತ್ತಿನ ಅಧಿವೇಶನ ಮುಗಿದ ನಂತರ ಮನವಿ ನಿಷ್ಪ್ರಯೋಜಕವಾಗುತ್ತದೆ ಎಂದಿರುವ ಅದು ಮಾರ್ಚ್ 17ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಎನ್‌ಐಎಗೆ ನಿರ್ದೇಶಿಸಿತು. ಹೆಚ್ಚಿನ ಸಮಯಾವಕಾಶ ನೀಡುವಂತೆ ಎನ್‌ಐಎ ಮಾಡಿದ ಮನವಿಯನ್ನು ಇದೇ ವೇಳೆ ತಿರಸ್ಕರಿಸಿತು.
ಮುಂದಿನ ವಿಚಾರಣೆ ದಿನದಂದು ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಖುದ್ದು ಹಾಜರಿರಬೇಕೆಂದು ಅದು ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 18ರಂದು ನಡೆಯಲಿದೆ.