
ನವದೆಹಲಿಯ ಮುಖರ್ಜಿ ನಗರದಲ್ಲಿರುವ ಸಿಗ್ನೇಚರ್ ವ್ಯೂ ಅಪಾರ್ಟ್‌ಮೆಂಟ್ ವಸತಿ ಸಮುಚ್ಛಯದ ಕಳಪೆ ಕಾಮಗಾರಿಯ ಕುರಿತಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವನ್ನು (ಡಿಡಿಎ) ದೆಹಲಿ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ ವಿಶ್ವಜೀತ್ ಸಿಂಗ್ ಮತ್ತಿತರರು ಹಾಗೂ ಸುಭಾಶಿಶ್ ಪಾಂಡಾ ಇನ್ನಿತರರ ನಡುವಣ ಪ್ರಕರಣ].
ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ಕೆಡವಲು ಇದ್ದ ತಡೆಯನ್ನು ತೆರವುಗೊಳಿಸಿದ ನ್ಯಾಯಾಲಯ ಫ್ಲ್ಯಾಟ್‌ಗಳನ್ನು ಪುನರ್ನಿರ್ಮಾಣ ಮಾಡುವವರೆಗೆ ಪರ್ಯಾಯ ವಸತಿಗಳಲ್ಲಿ ಉಳಿದಿರುವ ನಿವಾಸಿಗಳಿಗೆ ಮಧ್ಯಂತರ ಬಾಡಿಗೆಯನ್ನು ತ್ವರಿತವಾಗಿ ಪಾವತಿಸಲು ಡಿಡಿಎಗೆ ನಿರ್ದೇಶಿಸಿತು.
ಡಿಡಿಎ ನಡೆ ಅದರ ಉದಾಸೀನತೆ, ಸಂಪೂರ್ಣ ನಿರ್ಲಕ್ಷ್ಯವನ್ನು ಹೇಳುತ್ತದೆ ಎಂದಿರುವ ನ್ಯಾ. ಮಿನಿ ಪುಷ್ಕರ್ಣ ಅವರು, ಇದರ ಪರಿಣಾಮ ಕಟ್ಟಡ ನಿರ್ಮಾಣ ದೋಷಪೂರಿತವಾಗಿದ್ದು ದುರಸ್ತಿ ಅಸಾಧ್ಯವಾಗಿದೆ ಎಂದು ಟೀಕಿಸಿದರು.
ಡಿಡಿಎ ಕೃತ್ಯ ಅಪರಾಧವಾಗಿದ್ದು ಅದರ ಒಟ್ಟಾರೆ ನಿರ್ಲಕ್ಷ್ಯ ಅಕ್ಷಮ್ಯ. ಏಕೆಂದರೆ ನೂರಾರು ನಿವಾಸಿಗಳ ಜೀವವನ್ನು ಇದು ದೊಡ್ಡ ಅಪಾಯಕ್ಕೆ ತಳ್ಳುತ್ತಿತ್ತು ಎಂದು ಪೀಠ ಕಿಡಿಕಾರಿತು.
ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ನಿವಾಸಿಗಳಿಗೆ ಒದಗಿಸಿರುವ ಜೀವಿಸುವ ಹಕ್ಕನ್ನು ಡಿಡಿಎ ತನ್ನ ನಿರ್ದಯತೆ ಮತ್ತು ನಿರ್ಲಕ್ಷ್ಯದಿಂದ ಉಲ್ಲಂಘಿಸಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಸಿಗ್ನೇಚರ್ ವ್ಯೂ ಅಪಾರ್ಟ್‌ಮೆಂಟ್‌ಗಳು 2010 ರಲ್ಲಿ ಡಿಡಿಎ ಪ್ರಾರಂಭಿಸಿದ ಬಹು ಅಂತಸ್ತಿನ ವಸತಿ ಯೋಜನೆಯ ಭಾಗವಾಗಿದೆ. ಇದು 336 ಫ್ಲಾಟ್‌ಗಳನ್ನು ಒಳಗೊಂಡಿದೆ.
ನ್ಯಾಯಾಲಯದ ತೀರ್ಪಿನ ಪ್ರಮುಖ ಸಂಗತಿಗಳು
ಅಪಾರ್ಟ್‌ಮೆಂಟ್ ಸಮುಚ್ಚಯವನ್ನು ಕೆಡವಲು ದೆಹಲಿ ಮಹಾನಗರ ಪಾಲಿಕೆ ಹಾಗೂ ಡಿಡಿಎ ಸಲ್ಲಿಸಿರುವ ಪ್ರಸ್ತಾವನೆಯನ್ನು ಎತ್ತಿಹಿಡಿಯಲಾಗಿದೆ
ಮೀಸಲಿಟ್ಟ ಸಾಮಾನ್ಯ ಪ್ರದೇಶಗಳಲ್ಲಿ ಹೆಚ್ಚುವರಿ 168 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಡಿಡಿಎ ಪ್ರಸ್ತಾವನೆಯನ್ನು ಬದಿಗೆ ಸರಿಸಲಾಗಿದೆ.
ನಿವಾಸಿಗಳು ಫ್ಲ್ಯಾಟ್ ಖಾಲಿ ಮಾಡಿದ ತಕ್ಷಣ ಅವರಿಗೆ ಮಧ್ಯಂತರ ಬಾಡಿಗೆಯನ್ನು ಪಾವತಿಸಬೇಕು
ಆದರೆ, ಅಪಾರ್ಟ್‌ಮೆಂಟ್ ಸಂಕೀರ್ಣ ಮರುನಿರ್ಮಾಣ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಪ್ರತಿ ವರ್ಷ ಬಾಡಿಗೆ ಪಾವತಿಯಲ್ಲಿ ಶೇಕಡಾ 10 ರಷ್ಟು ಹೆಚ್ಚಳ ಮಾಡಬೇಕು.