ಉಬರ್, ಓಲಾದಂತಹ ಆಪ್ ಆಧಾರಿತ ಅಗ್ರಿಗೇಟರ್‌ಗಳ ಮೂಲಕ ಬುಕ್ ಮಾಡಿದ ಆಟೋ ರಿಕ್ಷಾಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಸರ್ಕಾರಿ ಅಧಿಸೂಚನೆಗಳನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ಇ-ವಾಣಿಜ್ಯ ಆಪರೇಟರ್‌ಗಳ ವರ್ಗೀಕರಣವನ್ನು ಕಾನೂನಿನಿಂದ ಮಾನ್ಯತೆ ಮಾಡಿರುವುದರಿಂದ ಪ್ರಶ್ನಿಸಲಾದ ಅಧಿಸೂಚನೆಗಳು ತಾರತಮ್ಯಕ್ಕೆ ಕಾರಣವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಸೇವಾ ಪೂರೈಕೆದಾರರ ವರ್ಗಕ್ಕೆ ಪ್ರತ್ಯೇಕ ಮತ್ತು ವಿಭಿನ್ನವಾದ ವರ್ಗೀಕರಣವನ್ನು ಕಾಯಿದೆಯ ನಿಯಮಾವಳಿಯಲ್ಲಿ ಗುರುತಿಸಲಾಗಿದೆ. ವರ್ಗೀಕರಣವು ಸಾಧಿಸಲು ಬಯಸಿದ ಉದ್ದೇಶದೊಂದಿಗೆ ತರ್ಕಬದ್ಧ ಸಂಬಂಧವನ್ನು ಹೊಂದಿದೆ. ಹೀಗಾಗಿ ಅಧಿಸೂಚನೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ನವೆಂಬರ್ 2021ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ಉಬರ್ ಇಂಡಿಯಾ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಧಿಸೂಚನೆ ಪ್ರಕಾರ ಆ್ಯಪ್ ಆಧಾರಿತ ಅಗ್ರಿಗೇಟರ್‌ನೊಂದಿಗೆ ಆಟೊ-ಡ್ರೈವರ್ ನೋಂದಾಯಿಸಿಕೊಂಡು ಆ ವೇದಿಕೆ ಹೇಳುವಂತಹ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಿದರೆ ಸಂಗ್ರಹಿಸಿದ ದರದ ಮೇಲೆ ಶೇ 5 ಅಥವಾ ಶೇ 12ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಸ್ಥಳೀಯವಾಗಿ ಆಫ್‌ಲೈನ್ ವಿಧಾನದಲ್ಲಿ ಉದಾಹರಣೆಗೆ ರಸ್ತೆಯಲ್ಲಿ ಕೈ ಅಡ್ಡಹಾಕಿ ನಿಲ್ಲಿಸಿ ಆಟೋದಲ್ಲಿ ಪ್ರಯಾಣಿಸಿದರೆ ಅಂತಹ ತೆರಿಗೆ ವಿಧಿಸಲು ಸರ್ಕಾರ ಮುಂದಾಗುವುದಿಲ್ಲ ಆದ್ದರಿಂದ ಅಧಿಸೂಚನೆಗಳು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂಬುದು ಉಬರ್ ವಾದವಾಗಿತ್ತು.