ನಸುಕಿನ 2:25ಕ್ಕೆ ವಿಚಾರಣೆ: ಅಕ್ರಮ ಹಣ ವರ್ಗಾವಣೆ ಆರೋಪಿಯನ್ನು ಇ ಡಿ ವಶಕ್ಕೆ ನೀಡಿದ ದೆಹಲಿ ನ್ಯಾಯಾಧೀಶೆ

ಬೆಳಗಿನ ಜಾವ 2:25 ಕ್ಕೆ ಆರಂಭವಾದ ವಿಚಾರಣೆ, ಬೆಳಿಗ್ಗೆ 6:10ಕ್ಕೆ ಆದೇಶ ನೀಡುವುದರ ಮುಖೇನ ಮುಕ್ತಾಯಗೊಂಡಿತು.
Patiala House Court
Patiala House Court
Published on

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯನ್ನು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಧೀಶರು ಶುಕ್ರವಾರ ಬೆಳಗಿನ ಜಾವ 2:25ಕ್ಕೆ ಆಲಿಸಿದರು.

ಪಟಿಯಾಲ ಹೌಸ್‌ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ (ಎಎಸ್‌ಜೆ) ಶೆಫಾಲಿ ಬರ್ನಾಲಾ ಟಂಡನ್‌ ವಿಚಾರಣೆ ಆರಂಭಿಸಿದಾಗ ಪ್ರತಿವಾದಿ ಪರ ವಕೀಲರು ನ್ಯಾಯಾಲಯಕ್ಕೆ ಇನ್ನೂ ಹಾಜರಿರಲಿಲ್ಲ. ಬಳಿಕ  ವಕೀಲರ ಫೋನ್‌ ಸಂಖ್ಯೆ ಪಡೆಯುವುದಕ್ಕಾಗಿ ಆರೋಪಿ ಸ್ವರಾಜ್ ಸಿಂಗ್ ಯಾದವ್‌ ತನ್ನ ತಂದೆಗೆ ಕರೆ ಮಾಡಲು ನ್ಯಾಯಾಲಯ ಅವಕಾಶ ನೀಡಿತು. ವಕೀಲರು ಬೆಳಗಿನ ಜಾವ 3:05 ಕ್ಕೆ ನ್ಯಾಯಾಲಯಕ್ಕೆ ಬಂದರು. 

Also Read
ತೀಸ್ ಹಜಾರಿ ನ್ಯಾಯಾಲಯದ ಕೋಣೆಯಲ್ಲಿ ಅಕ್ಕಿ ಚೆಲ್ಲಿದ ವೈದ್ಯನಿಗೆ ದಂಡ: ವಾಮಾಚಾರದ ಶಂಕೆ ವ್ಯಕ್ತಪಡಿಸಿದ ವಕೀಲರು

ಆರೋಪಿ ಮತ್ತು ಅವರ ಪರ ವಕೀಲರ ನಡುವೆ ಚರ್ಚೆಗೆ  20  ನಿಮಿಷಗಳ ಕಾಲಾವಕಾಶ ನೀಡಿದ ನ್ಯಾಯಾಲಯ 3:30ಕ್ಕೆ ವಾದ ಆಲಿಸಲು ಆರಂಭಿಸಿತು.

ಬೆಳಿಗ್ಗೆ 6:10ಕ್ಕೆ ಆದೇಶ ಪ್ರಕಟಿಸಿದ ಅದು ಇ ಡಿ ಅರ್ಜಿಯನ್ನು ಪುರಸ್ಕರಿಸುತ್ತಿರುವುದಾಗಿ ತಿಳಿಸಿತು. ಯಾದವ್ ಅವರನ್ನು 14 ದಿನಗಳ ಕಾಲ ಇ ಡಿ ವಶಕ್ಕೆ ನೀಡಿತು. ಪ್ರಕರಣದ ಮಂದಿನ ವಿಚಾರಣೆ ನವೆಂಬರ್ 28ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

Also Read
ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ ಮಾಡಿರುವ ಆದೇಶಕ್ಕೆ ಹೈಕೋರ್ಟ್‌ ತಡೆ

ಯಾದವ್ ಗುರುಗ್ರಾಮ ಮೂಲದ ಓಶನ್‌ ಸೆವೆನ್‌ ಬಿಲ್ಡ್‌ ಟೆಕ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಖರೀದಿದಾರರಿಂದ ಸಂಗ್ರಹಿಸಿದ್ದ ಹಣವನ್ನು ಆತ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಇ ಡಿ ಆರೋಪವಾಗಿತ್ತು.

ಮನೆ ಖರೀದಿದಾರರಿಗೆ ನೀಡಬೇಕಾದ ಫ್ಲಾಟ್‌ಗಳನ್ನು ಅಕ್ರಮವಾಗಿ ರದ್ದುಪಡಿಸಿ ಅದನ್ನು ಬೇರೆಯವರಿಗೆ ಹೆಚ್ಚಿನ ದರಕ್ಕೆ ಮಾರಿದ್ದರು. ಮೂಲ ಖರೀದಿದಾರರಿಗೆ ಹಣ ಹಿಂತಿರುಗಿಸಿರಲಿಲ್ಲ. ಸುಮಾರು ₹220–₹222 ಕೋಟಿ ರೂ. ಹಣವನ್ನು ನಕಲಿ ಕಂಪೆನಿಗಳಿಗೆ ವರ್ಗಾಯಿಸಿ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಲಾಗಿತ್ತು ಎಂದು ಅದು ದೂರಿತ್ತು.

Kannada Bar & Bench
kannada.barandbench.com